

MS Dhoni: ಟೀಮ್ ಇಂಡಿಯಾಗೆ ಎರಡು ಐಸಿಸಿ ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿಯನ್ನು ತಂದುಕೊಟ್ಟಿರುವ ಶ್ರೇಷ್ಠ ನಾಯಕ, ಮಾಜಿ ದಿಗ್ಗಜ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಗೆ ಇದೀಗ ಬಿಸಿಸಿಐ ಬಂಪರ್ ಆಫರ್ ನೀಡಲು ಸಿದ್ಧವಾಗಿದೆ. ಮತ್ತೊಮ್ಮೆ, 'ಕ್ಯಾಪ್ಟನ್ ಕೂಲ್'ರನ್ನು ಟೀಮ್ ಇಂಡಿಯಾದ ಮೆಂಟರ್ ಆಗಿ ನೇಮಕ ಮಾಡಿಕೊಳ್ಳಲು ಬಿಸಿಸಿಐ ಎದುರುನೋಡುತ್ತಿದೆ.
2021ರ ಟಿ20 ವಿಶ್ವಕಪ್ ಸಮಯದಲ್ಲಿ ಬಿಸಿಸಿಐ ಧೋನಿಯನ್ನು ಟೀಮ್ ಇಂಡಿಯಾದ ಮಾರ್ಗದರ್ಶಕರನ್ನಾಗಿ ನೇಮಿಸಿತು. ಈ ವೇಳೆ ಅವರ ಕೊಡುಗೆಯನ್ನು ಆ ಟೂರ್ನಿಗೆ ಮಾತ್ರ ಬಳಸಿಕೊಳ್ಳಲಾಯಿತು. ಆದಾಗ್ಯೂ, ಆ ಟೂರ್ನಿಯಲ್ಲಿ ಭಾರತ ಲೀಗ್ ಹಂತದಲ್ಲೇ ಟೀಮ್ ಇಂಡಿಯಾ ಹೊರಗುಳಿಯಿತು. ಇದರ ನಂತರ ಧೋನಿ ಮತ್ತೆಲ್ಲೂ ಮೆಂಟರ್ ಅಥವಾ ಕೋಚ್ ಆಗಿ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೀಗ, ಈ ಅವಕಾಶ ಮತ್ತೊಮ್ಮೆ ಧೋನಿ ಅವರನ್ನು ಹುಡುಕಿಕೊಂಡು ಬಂದಿದೆ.
ಈ ಬಾರಿ ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಅವರನ್ನು ದೀರ್ಘಕಾಲದವರೆಗೆ ಮೆಂಟರ್ ಆಗಿ ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಕ್ರಿಕ್‌ಬ್ಲಾಗರ್ ವರದಿ ತಿಳಿಸಿದೆ. ಯುವ ಕ್ರಿಕೆಟಿಗರನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಮಂಡಳಿ ಬಲವಾಗಿ ನಂಬಿದೆ. ಆದಾಗ್ಯೂ, ಧೋನಿ ಇದಕ್ಕೆ ಒಪ್ಪುತ್ತಾರೆಯೇ? ಅಥವಾ ಆಫರ್ ತಿರಸ್ಕರಿಸುತ್ತಾರೆಯೇ? ಎಂಬುದು ಕುತೂಹಲಕಾರಿ ವಿಷಯ.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತಂಡದ ಪರ ಉತ್ತಮ ಇನ್ನಿಂಗ್ಸ್ ನೀಡಿರುವ ಗೌತಮ್ ಗಂಭೀರ್, ಸದ್ಯ ಭಾರತ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಿಶ್ವಕಪ್ ಗೆಲುವಿನ ಎಲ್ಲಾ ಕ್ರೆಡಿಟ್ ಅನ್ನು ಧೋನಿಗೆ ಮಾತ್ರ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದ್ದ ಗಂಭೀರ್, ಇದೇ ವಿಷಯವನ್ನು ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ, ಧೋನಿ ಅವರು ಮೆಂಟರ್ ಆಗಿ ಬರುವುದಕ್ಕೆ ಗಂಭೀರ್ ಏನು ಹೇಳ್ತಾರೆ? ಅನ್ನೋದೇ ಈಗ ದೊಡ್ಡ ಪ್ರಶ್ನೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಧೋನಿ, ಪ್ರಸ್ತುತ ಐಪಿಎಲ್ ಆವೃತ್ತಿಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ. ಮುಂಬರುವ ಆವೃತ್ತಿಯಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ವರದಿಗಳು ಉಲ್ಲೇಖಿಸಿವೆ. ಬಿಸಿಸಿಐ ಆಫರ್ಗೆ ಧೋನಿ ಒಪ್ಪಿಕೊಂಡರೆ ಮುಂದಿನ ಐಪಿಎಲ್ನಲ್ಲಿ ಅವರು ಆಡುವುದು ಬಹುತೇಕ ಅನುಮಾನ. ಇದರಿಂದ ಐಪಿಎಲ್ಗೂ ಧೋನಿ ಗುಡ್ಬೈ ಹೇಳುವ ಸಾಧ್ಯತೆಗಳು ಹೆಚ್ಚಿವೆ ಎಂದೇ ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).