ಲೂಸಿಯಾ ಪವನ್ ಧೂಮಂ ಪ್ರಾರಂಭ

Pavan
Published on

‘ಲೂಸಿಯಾ’ ಪವನ್ ಕುಮಾರ್ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ‘ಯೂ ಟರ್ನ್’ನ ತೆಲುಗು ರಿಮೇಕ್ ಬಳಿಕ ಅವರು ಸಿನಿಮಾ ನಿರ್ದೇಶನ ಮಾಡಿರಲಿಲ್ಲ. ವೆಬ್ ಸರಣಿಯಲ್ಲಿ ಬಿಜಿಯಾಗಿದ್ದ ಅವರು ಕಳೆದ ವರ್ಷ ಪುನೀತ್ ರಾಜ್​ಕುಮಾರ್ ನಟಿಸಬೇಕಿದ್ದ ‘ದ್ವಿತ್ವ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳಬೇಕಿತ್ತು. ಆ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿತ್ತು. ಆದರೆ, ಕಳೆದ ಅಕ್ಟೋಬರ್​ನಲ್ಲಿ ಪುನೀತ್​ರ ಅಕಾಲಿಕ ಮರಣದಿಂದಾಗಿ ಆ ಚಿತ್ರವನ್ನು ಕೈಬಿಟ್ಟರು.

ಈಗ ಒಂದು ವರ್ಷದ ಬಳಿಕ ಹೊಸ ಚಿತ್ರ ‘ಧೂಮಂ’ನೊಂದಿಗೆ ಪವನ್ ಕುಮಾರ್ ವಾಪಸ್ಸಾಗಿದ್ದಾರೆ. ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಯಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಕ್ಲಾಪ್ ಮಾಡಿದರೆ, ಶೈಲಜಾ ವಿಜಯ್ ಕಿರಗಂದೂರು ಕ್ಯಾಮರಾ ಚಾಲನೆ ಮಾಡಿದರು.

ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಹೀಗೆ ನಾಲ್ಕು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದ್ದು, ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ನಿರ್ವಿುಸುತ್ತಿದ್ದಾರೆ. ಈ ಚಿತ್ರದ ಮೂಲಕ ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಮತ್ತು ತಮಿಳಿನ ‘ಸೂರರೈ ಪೊಟ್ರು’ ಚಿತ್ರದಲ್ಲಿ ನಟಿಸಿರುವ ಅಪರ್ಣಾ ಬಾಲಮುರಳಿ ನಾಯಕ-ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಕೆಜಿಎಫ್’ ಸರಣಿಯ ನಿರ್ದೇಶಕ ಪ್ರಶಾಂತ್ ನೀಲ್, ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ, ಪ್ರೀತಾ ಜಯರಾಮನ್ ಛಾಯಾಗ್ರಹಣ ಇರಲಿದೆ. ನವೆಂಬರ್​ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net