

ಆಂಧ್ರಪ್ರದೇಶ: ಇಲ್ಲಿನ ವಿಶಾಖಪಟ್ಟಣಂನಲ್ಲಿರುವ ಸೇಂಟ್ ಆನ್ಸ್ ಹೈಸ್ಕೂಲ್‌ನ ಒಂಬತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನಟ ದುಲ್ಕರ್ಸಲ್ಮಾನ್ ಅಭಿನಯದ ತೆಲುಗಿನ ಹಿಟ್ ಚಿತ್ರ ಲಕ್ಕಿ ಭಾಸ್ಕರ್(Lucky Baskhar) ಸಿನಿಮಾದಿಂದ ಪ್ರೇರಿತರಾಗಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಮಹಾರಾಣಿ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ವಸತಿ ನಿಲಯದ ಬೋಡಪತಿ ಚರಣ್ತೇಜ, ಗುಡಾಲ ರಘು, ನಕ್ಕಲ ಕಿರಾ ಕುಮಾರ್ ಮತ್ತು ಕಾರ್ತಿಕ್ ಎಂಬ ವಿದ್ಯಾರ್ಥಿಗಳು ಸೋಮವಾರ(ಡಿ.09) ಬೆಳಗ್ಗೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮನೆಗೆ ಹಿಂತಿರುಗಿಲ್ಲ ಎಂದು ಹೇಳಿ ಹಾಸ್ಟೆಲ್ ತೊರೆದಿದ್ದಾರೆ ಎಂದು ಆಡಳಿತ ಮಂಡಳಿ ಖಚಿತಪಡಿಸಿದಾಗ ಬಾಲಕರು ನಾಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪಾಲಕರು ಕೂಡಲೇ ಎಂಆರ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯಗಳು ಸೆರೆ
ಹಾಸ್ಟೆಲ್‌ನ ಸಿಸಿಟಿವಿ ಫೂಟೇಜ್‌ನಲ್ಲಿ ಬೆಳಿಗ್ಗೆ 6.20 ರ ಸುಮಾರಿಗೆ ಹುಡುಗರು ಹಾಸ್ಟೆಲ್ ಗೇಟ್ ಮೇಲೆ ಹತ್ತುತ್ತಿರುವ ಮತ್ತು ತಪ್ಪಿಸಿಕೊಳ್ಳುವ ಮೊದಲು ತಮ್ಮ ಬ್ಯಾಗ್‌ಗಳನ್ನು ಗೇಟ್ ಮೇಲೆ ಹಾದು ಹೋಗುತ್ತಿರುವ ದೃಶ್ಯಗಳು ಕಾಣಸಿಗುತ್ತದೆ.
ಇನ್ನು ಹೊರಡುವ ಮೊದಲು, ವಿದ್ಯಾರ್ಥಿಗಳು ತಮ್ಮ ಸ್ನೇಹಿತರಿಗೆ ಚಿತ್ರದ ನಾಯಕ ಭಾಸ್ಕರ್ ಅವರಂತೆ ಕಾರು ಮತ್ತು ಮನೆಗಳನ್ನು ಖರೀದಿಸಲು ಸಾಕಷ್ಟು ಹಣವನ್ನು ಸಂಪಾದಿಸುವವರೆಗೆ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸದ್ದು, ಅವರ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ,(ಏಜೆನ್ಸಿಸ್).