

ಪಟ್ನಾ: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸುದ್ದಿಗಳು ಸಖತ್ ವೈರಲ್ ಆಗುತ್ತಿದ್ದು, ಈ ವಿಚಾರ ಜನರ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಪ್ರತಿ ಗಂಟೆಗೊಮ್ಮೆ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಪತಿ ಅಥವಾ ಪತ್ನಿಯ ನಡೆ ಹಾಗೂ ಕಿತ್ತಾಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಬಿಹಾರದ ಭಾಗಲ್ಪುರದಲ್ಲೂ ಕೂಡ ಅಂತಹದ್ದೆ ಘಟನೆಯೊಂದು ನಡೆದಿದ್ದು, ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಭಾರತ ದೇಶದಲ್ಲಿ ಬಹುಪತ್ನಿತ್ವ ನಿಷೇಧವಿದ್ದರೂ ಅನೇಕರು ಗುಟ್ಟಾಗಿ ಇನ್ನೊಂದು ಮದುವೆ ಮಾಡಿಕೊಂಡು ಸೈಲೆಂಟಾಗಿ ಸಂಸಾರ ನಡೆಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಮೊದಲ ಪತ್ನಿಗೆ ವಿಚ್ಛೇದನ (Divorce) ನೀಡದೆಯೇ ಎರಡನೇ ಮದುವೆಯಾಗಲು ಮುಂದಾಗಿದ್ದು, ಈ ವಿಚಾರ ತಿಳಿದ ಮೊದಲ ಪತ್ನಿ ಮದುವೆ ಮನೆಗೆ ಹೈಡ್ರಾಮಾ ಮಾಡಿದ್ದು, ಮದುವೆಯನ್ನು ನಿಲ್ಲಿಸಿದ್ದಾಳೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಿಹಾರ ಮೂಲದ ಮನೋಜ್ ಪಂಡಿತ್ ಎಂಬಾತ ಜಾರ್ಖಂಡ್ ನಿವಾಸಿ ಸೇಖಾ ದೇವಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆಯಾಗಿ ಕೆಲ ತಿಂಗಳ ಬಳಿಕ ಇಬ್ಬರ ನಡುವೆ ಕಾರಣಾಂತರಗಳಿಂದ ಮನಸ್ತಾಪ ಉಂಟಾಗಿ ದೂರಾಗಿದ್ದರು. ಆ ಬಳಿಕ ಹಿರಿಯರ ಸಮ್ಮುಖದಲ್ಲಿ ರಾಜಿ-ಸಂಧಾನವು ನಡೆದಿತ್ತು. ಕೊನೆಗೆ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಪರಸ್ಪರ ಒಪ್ಪಂದದ ಮೇರೆಗೆ ದಂಪತಿಗಳು ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಸಿದ್ದರು.
ವಿಚ್ಚೇದನದ (Divorce) ಅರ್ಜಿ ನ್ಯಾಯಾಲದಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ನಡುವೆ ಮನೋಜ್ ಪೋಷಕರು ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ಬೇರೊಂದು ಹುಡುಗಿಯೊಂದಿಗೆ ವಿವಾಹವನ್ನು ನಿಶ್ಚಯಿಸಿದ್ದಾರೆ. ಈ ವಿಚಾರವನ್ನು ತಿಳಿದ ಮನೋಜ್ ಮೊದಲ ಪತ್ನಿ ಸೇಖಾ ದೇವಿ ತನ್ನ ತಾಯಿಯೊಂದಿಗೆ ಮದುವೆಮನೆಗೆ ಮುಗ್ಗಿ ಗಲಾಟೆ ಮಾಡಿದ್ದು, ಮದುವೆಯನ್ನೇ ನಿಲ್ಲಿಸಿದ್ದಾಳೆ. ಈ ವಿಚಾರವನ್ನು ತಿಳಿದ ವಧುವಿನ ಕುಟುಂಬದವರು ಮದುವೆಯನ್ನು ನಿಲ್ಲಿಸಿದ್ದು, ಮನೋಜ್ ಹಾಗೂ ಆತನ ಪೋಷಕರ ವಿರುದ್ಧ ದೂರನ್ನು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.