

ಭಗವಂತ ಶ್ರೀರಾಮನ ಫೋಟೋವಿರುವ ಪೇಪರ್ ಪ್ಲೇಟ್‌ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಬಡಿಸುತ್ತಿರುವ ಆಘಾತಕಾರಿ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಅಂಗಡಿ ಮಾಲೀಕನ ವಿರುದ್ಧ ವ್ಯಾಪಕವಾಗಿ ಛೀಮಾರಿ ಹಾಕಿದ್ದಾರೆ. ದೆಹಲಿಯ ಜಹಾಂಗೀರ್‌ಪುರಿಯಲ್ಲಿರುವ ಬಿರಿಯಾನಿ ಜಾಯಿಂಟ್‌ನಲ್ಲಿ ಈ ಘಟನೆ ವರದಿಯಾಗಿದ್ದು, ಸದ್ಯ ಅಂಗಡಿ ಮಾಲೀಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಭಗವಂತ ಶ್ರೀರಾಮನ ಚಿತ್ರಗಳನ್ನು ಒಳಗೊಂಡ ಪೇಪರ್ ಪ್ಲೇಟ್‌ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಹಾಕಿಕೊಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಎಲ್ಲೆಡೆ ಹರಿಬಿಟ್ಟಿದ್ದಾರೆ. ಬಿರಿಯಾನಿಗಾಗಿ ಅಂಗಡಿಯ ಬಳಿ ಜನರು ಗುಂಪುಗಟ್ಟಿ ಸಾಲು ಸಾಲಾಗಿ ನಿಂತಿರುವುದು ಕಾಣಬಹುದು.
ಅಂಗಡಿ ಮಾಲೀಕನ ಈ ನಾಚಿಕೆಗೇಡಿನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯರ ಭಾರೀ ವಿರೋಧದ ಬೆನ್ನಲ್ಲೇ ಮಾಹಿತಿ ಪಡೆದ ಬಜರಂಗದಳದ ಸದಸ್ಯರು ತಕ್ಷಣವೇ ಅಂಗಡಿಯ ಮಾಲೀಕರಿಗೆ ಆ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡದಂತೆ ಎಚ್ಚರಿಸಿ, ನಂತರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇದರ ಹಿಂದಿದ್ದ ಕಾರಣವೇನು? ಇದು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಹೀಗೆ ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಇದನ್ನು ಮಾಡಿದ್ದಾರೆಯೇ ಎಂಬುದನ್ನು ಸದ್ಯ ಪರಿಶೀಲಿಸುತ್ತಿದ್ದಾರೆ,(ಏಜೆನ್ಸೀಸ್).