More

    ಮಾನಗೆಟ್ಟ ಕಾಂಗ್ರೆಸ್ ಜಯವೆಂದು ತಪ್ಪು ವ್ಯಾಖ್ಯಾನ: ಆರ್.ಅಶೋಕ್ ಚಾಟಿ

    ಬೆಂಗಳೂರು: ಬರ ಪರಿಹಾರಕ್ಕೆ ಎನ್ ಡಿಆರ್ ಎಫ್ ಹೆಚ್ಚುವರಿ ಸಹಾಯಧನ ಬಿಡುಗಡೆಗೆ ಸಂಬಂಧಿಸಿ, ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ನಡೆದ ವ್ಯಾಜ್ಯ ವಿಚಾರಣೆ ಪ್ರಕ್ರಿಯೆ ಬಗ್ಗೆ ಮಾನಗೆಟ್ಟ ಕಾಂಗ್ರೆಸ್ ತಪ್ಪು ವ್ಯಾಖ್ಯಾನ ಮಾಡಿ ಜಯವೆಂದು ಬಿಂಬಿಸಿಕೊಳ್ಳುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಚಾಟಿ ಬೀಸಿದರು.

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್ ನ ಕೇಸ್ ನ ನಡವಳಿಯನ್ನು ಪ್ರದರ್ಶಿಸಿದರು. ಎನ್ ಡಿಆರ್ ಎಫ್ ಹೆಚ್ಚುವರಿ ಸಹಾಯಧನ ಆಯಾ ರಾಜ್ಯಗಳಿಗೆ ಬಿಡುಗಡೆ ಮಾಡಲು ಅನುಮತಿ ಕೋರಿ ಚುನಾವಣಾ ಆಯೋಗಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಪತ್ರ ಬರೆದಿತ್ತು. ನೆರವಿನ ಮೊತ್ತ ಬಿಡುಗಡೆಗೆ ಆಯೋಗ ಅನುಮತಿ ನೀಡಿದೆ.

    ಇದೇ ವಿಷಯವನ್ನು ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಪ್ರಸ್ತಾಪಿಸಿ, ‘ನೆಕ್ಸ್ಟ್ ಮಂಡೆ ( ಏಪ್ರಿಲ್ 29) ಸಮ್ ಥಿಂಗ್ ವಿಲ್ ಬಿ ಹ್ಯಾಪನ್’ ಎಂದಾಗ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸಹಮತ ವ್ಯಕ್ತಪಡಿಸಿದ್ದಾರೆ. ಈ ಕೇಸ್ ನಲ್ಲಿ ವಾದ ಮಾಡುವ ಅಗತ್ಯವೇನಿಲ್ಲವೆಂದು ನ್ಯಾಯಾಲಯ ಹೇಳಿದೆ.

    ಕೇಂದ್ರ ಸರ್ಕಾರದಿಂದ ಅನ್ಯಾಯವಾಗಿದೆ, ತೊಂದರೆ ನೀಡುತ್ತಿದೆ ಎಂದು ರಾಜ್ಯದ ಪರ ವಕೀಲ ವಾದ ಮಾಡಿಲ್ಲ. ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಿಲ್ಲ. ವಾರದೊಳಗೆ ಬಿಡುಗಡೆ ಮಾಡಿ ಎಂದೂ ಆದೇಶಿಸಿಲ್ಲ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಾಡಿರುವ ಪ್ರಯತ್ನಗಳಿಗೆ ರಾಜ್ಯದ ಪರ ವಕೀಲ ಸಹಮತ ವ್ಯಕ್ತಪಡಿಸಿದರೆ, ವಾದ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಗೆ ನಿವೇದಿಸಿಕೊಂಡಿದ್ದಾರೆ.

    ದಿವಾಳಿ ಸರ್ಕಾರ

    ಸುಪ್ರೀಂ ಕೋರ್ಟ್ ನಲ್ಲಿ ಜಯವಾಗಿದೆ. ವಾರದೊಳಗೆ ಪರಿಹಾರ ಧನ ಬಿಡುಗಡೆ ಮಾಡಲು ಆದೇಶಿಸಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾಗುತ್ತದೆ. ತ್ವರಿತವಾಗಿ ಪರಿಹಾರ ನಿಧಿ ಬಿಡುಗಡೆ ಮಾಡಲು ಅನುಮತಿ ಕೋರಿ ಚುನಾವಣೆ ಆಯೋಗಕ್ಕೆ ಪತ್ರ ಬರೆದು, ಒಪ್ಪಿಗೆ ಪಡೆದಿದೆ. ಅದಕ್ಕಾಗಿ ಅಭಿನಂದನೆ ಸಲ್ಲಿಸುವೆ ಎಂದು ಆರ್.ಅಶೋಕ್ ಹೇಳಿದರು.

    ರಾಜ್ಯದಲ್ಲಿ ಆರ್ಥಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಹೋರಾಟದ ನಾಟಕ ನಡೆಸಿದೆ. ಗ್ಯಾರಂಟಿಗಳಿಗೆ ಬೊಕ್ಕಸ ಬರಿದು ಮಾಡಿಕೊಂಡಿದೆ. ಪರಿಹಾರ ಕೊಡಲು ರೈತರು ಒತ್ತಡ ಹೇರಿದ್ದು, ಚುನಾವಣೆಯಲ್ಲಿ ಜನರು ತಿರುಗಿ ಬೀಳಬಹುದು ಎಂದು ಕೇಂದ್ರದ ಮೇಲೆ ಹೊತ್ತು ಹಾಕಲು ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ಮಾಡಿದರು.

    ನೇಹಾ ಹತ್ಯೆ ಹಿರೇಮಠ ಹತ್ಯೆ ಬೆನ್ನಲ್ಲೇ ಯಾದಗಿರಿ ಜಿಲ್ಲೆಯಲ್ಲಿ ದಲಿತ ಯುವಕನ ಹತ್ಯೆಯಾಗಿದೆ. ಕಾಂಗ್ರೆಸ್ ಮುಸ್ಲಿಂ ಓಲೈಕೆಯು ಜನರನ್ನು ರೊಚ್ಚಿಗೆಬ್ಬಿಸಿದೆ. ಹಿಂದು ಕಾರ್ಯಕರ್ತರ ಆಕ್ರೋಶ ಭುಗಿಲೆದ್ದು, ಹೆಚ್ಚು ಫೋಕಸ್ ಆಗುತ್ತಿರುವ ಕಾರಣ ವಿಷಯಾಂತರಕ್ಕೆ ಕಾಂಗ್ರೆಸ್ ಹವಣಿಸಿದೆ. ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಆರ್.ಅಶೋಕ್ ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts