ಮೋದಿ 3ನೇ ಬಾರಿ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ತೀನಿ; ಸವಾಲೆಸೆದ ಎಎಪಿ ನಾಯಕ

Somnath Bharthi
Published on

ನವದೆಹಲಿ: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ (ಏಳನೇ ಹಂತ) ಜೂನ್​ 02ರಂದು ಕೊನೆಗೊಂಡಿದ್ದು, ಮತದಾನ ಮುಗಿದ ಕೆಲವೇ ಕ್ಷಣಗಳಲ್ಲಿ ಹಲವು ಮಾಧ್ಯಮಗಳು ಎಕ್ಸಿಟ್​ ಪೋಲ್​ ವರದಿಗಳನ್ನು ಬಿತ್ತರಿಸಿವೆ. ಇತ್ತ ಎಕ್ಸಿಟ್​ ಪೋಲ್​ ವರದಿ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕರೊಬ್ಬರು ನೀಡಿರುವ ಹೇಳಿಕೆ ಸಖತ್​ ವೈರಲ್​ ಆಗುತ್ತಿದೆ.

ಆಮ್​ ಆದ್ಮಿ ಪಕ್ಷದ ಹಿರಿಯ ನಾಯಕ ಸೋಮನಾಥ್ ಭಾರತಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಟೀಕಿಸಿ ಕಮೆಂಟ್​ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಸೋಮನಾಥ್​ ಭಾರತಿ, ನನ್ನ ಮಾತನ್ನು ನೆನಪಿಟ್ಟುಕೊಳ್ಳಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ಸದ್ಯ ಪ್ರಕಟವಾಗಿರುವ ಎಕ್ಸಿಟ್​ ಪೋಲ್​ಗಳ ವರದಿಯು ಜೂನ್​ 04ರಂದು ಸುಳ್ಳಾಗುತ್ತವೆ. ನರೇಂದ್ರ ಮೋದಿ ಮೂರನೇ ಭಾರಿ ಪ್ರಧಾನಿಯಾಗುವುದಿಲ್ಲ.

ದೆಹಲಿಯ ಎಲ್ಲಾ ಏಳು ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಮೋದಿಯ ಭಯದಿಂದಾಗಿ ಎಕ್ಸಿಟ್​ ಪೋಲ್​ಗಳು ಸುಳ್ಳು ವರದಿಗಳನ್ನು ಪ್ರಕಟಿಸಿವೆ. ಜೂನ್​ 04ರಂದು ನಿಜವಾದ ಫಲಿತಾಂಶ ಪ್ರಕಟವಾಗಲಿದ್ದು, ನಾವೆಲ್ಲರೂ ಅದಕ್ಕಾಗಿ ಕಾಯಬೇಕಿದೆ. ಇಂಡಿಯಾ ಮೈತ್ರಿಕೂಟವು ಸ್ಥಿರ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net