ಭಾರತ-ಪಾಕ್​ ನಡುವಿನ ಹೈವೋಲ್ಟೇಜ್​ ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಕಾರಣ ಹೀಗಿದೆ

India Pakistan
Published on

ಯುಎಸ್​ಎ: ಯುಎಸ್​ಎ ಹಾಗೂ ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿರುವ 09ನೇ ಆವೃತ್ತಿಯ ಟಿ-20 ವಿಶ್ವಕಪ್​ಗೆ ಈಗಾಗಲೇ ಅಧಿಕೃತ ಚಾಲನೆ ದೊರೆತ್ತಿದ್ದು, ಈ ಬಾರಿ ಚುಟುಕು ವಿಶ್ವಸಮರದಲ್ಲಿ 20 ತಂಡಗಳು ಭಾಗಿಯಾಗುತ್ತಿರುವುದು ಟೂರ್ನಿಯ ಕಳೆಯನ್ನು ಹೆಚ್ಚಿಸಿದೆ. ಈ ಬಾರಿಯ ಟಿ-20 ವಿಶ್ವಕಪ್​ ಹಲವು ಕಾರಣಗಳಿಂದ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದ್ದು, ಜೂನ್​ 09ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಹೈವೋಲ್ಟೇಜ್​ ಕದನವನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಎದುರು ನೋಡುತ್ತಿದೆ. ಆದರೆ, ಹೈವೋಲ್ಟೇಜ್​ ಪಂದ್ಯವನ್ನು ಮೈದಾನದಲ್ಲಿ ವೀಕ್ಷಿಸಲು ಅಭಿಮಾನಿಗಳು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

ಜೂನ್​ 09ರಂದು ನಡೆಯಲಿರುವ ಈ ಹೈವೋಲ್ಟೇಜ್​ ಕದನವನ್ನು ವೀಕ್ಷಿಸಲು ಕೋಟ್ಯಂತರ ಜನ ಕಾತುರದಿಂದ ಕಾಯುತ್ತಿದ್ದು, ಪಂದ್ಯ ನಡೆದಾಗಲೆಲ್ಲಾ ಕ್ರೀಡಾಂಗಣ ಕಿಕ್ಕಿರಿದು ತುಂಬಿರುತ್ತದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ದೊಡ್ಡ ಸುದ್ದಿ ಏನೆಂದರೆ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್​ಸೈಟ್​ನಲ್ಲಿ ಲಭ್ಯವಿದ್ದು, ಇನ್ನೂ ಕೂಡ ಮಾರಾಟವಾಗದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಪಂದ್ಯ ಆಯೋಜನೆಗೊಂಡಾಗ ಮ್ಯಾಚ್​ನ ಟಿಕೆಟ್​ಗಳು ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಹೀಗಾಗಿ ಉಭಯ ತಂಡಗಳ ನಡುವಿನ ಕಾಳಗ ನಡೆಯುವ ವೇಳೆ ಇಡೀ ಕ್ರೀಡಾಂಗಣ ಹೌಸ್‌ಫುಲ್ ಆಗಿರುತ್ತಿತ್ತು. ಆದರೆ, ಈ ಬಾರಿ ಹಾಗೆ ಆಗುವುದು ಡೌಟ್​ ಎಂದು ಹೇಳಲಾಗುತ್ತಿದೆ. ಏಕೆಂದರೆ ಇಲ್ಲಿಯವರೆಗೆ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ವರದಿಯಾಗಿದೆ. ಇದಕ್ಕೆ ಕಾರಣವೂ ಇದ್ದು ಈ ಪಂದ್ಯದ ಟಿಕೆಟ್​ ಬೆಲೆ ಸಾಕಷ್ಟು ದುಬಾರಿಯಾಗಿರುವುದೇ ಕಾರಣ ಎಂದು ಹೇಳಲಾಗಿದೆ. ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲಾಂಜ್​​ ಮತ್ತು ಕಾರ್ನರ್ ಕ್ಲಬ್​​ಗಳನ್ನು ಒಳಗೊಂಡಿವೆ.

NewYork Stadium

ಡೈಮಂಡ್ ಕ್ಲಬ್ ಟಿಕೆಟ್ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಆದರೆ ಅಭಿಮಾನಿಗಳು ಇದಕ್ಕಾಗಿ 8.34 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗಿರುವುದು ದೊಡ್ಡ ವಿಷಯವಾಗಿದೆ. ಪ್ರೀಮಿಯಂ ಕ್ಲಬ್ ಲಾಂಜ್​ ಟಿಕೆಟ್ ಬೆಲೆ 2 ಲಕ್ಷ ರೂಪಾಯಿ ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂಪಾಯಿ ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಆದರೆ ಅದರ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ ಎಂಬುದು ದೊಡ್ಡ ಸುದ್ದಿಯಾಗಿದೆ. ಇದಲ್ಲದೆ ಪಂದ್ಯಕ್ಕೆ ಉಗ್ರರು ಬಾಂಬ್​ ಬೆದರಿಕೆ ಹಾಕಿದ್ದು, ಇದು ಕೂಡ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಭಾರತ-ಪಾಕಿಸ್ತಾನ ಪಂದ್ಯದಿಂದ ಹೆಚ್ಚು ಲಾಭ ಗಳಿಸಲು ಐಸಿಸಿ ಯೋಚಿಸುತ್ತಿತ್ತು. ಆದರೆ ಟಿಕೆಟ್ ಬೆಲೆಯನ್ನು ದುಬಾರಿಯಾಗಿರಿಸಿರುವುದು ಐಸಿಸಿಗೆ ಹಿನ್ನಡೆಯನ್ನುಂಟು ಮಾಡಿದೆ. ಪಂದ್ಯಕ್ಕೂ ಮುನ್ನ ಐಸಿಸಿ ಟಿಕೆಟ್ ದರವನ್ನು ಕಡಿಮೆ ಮಾಡುತ್ತದೆಯೇ ಅಥವಾ ಪಂದ್ಯದ ಸಮಯದಲ್ಲಿ ಖಾಲಿ ಸೀಟುಗಳು ಇರುತ್ತವೆಯೇ ಎಂಬುದು ಪಂದ್ಯದ ದಿನ ಜೂನ್​ 09ರಂದು ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net