

ಹೈದರಾಬಾದ್: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಮುಕ್ತಾಯಗೊಂಡು ವಾರ ಕಳೆಯುತ್ತ ಬಂದರೂ ಜನರು ಮಾತ್ರ ಅದರ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಮೇ 26ರಂದು ನಡೆದ ಫೈನಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್), ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡವನ್ನು ಸೋಲಿಸುವ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯಿತು. ಐಪಿಎಲ್ ಮೂಲಕ ಹಲವು ನವ ಹಾಗೂ ಉದಯೋನ್ಮುಖ ಆಟಗಾರರು ತಮ್ಮ ಪ್ರತಿಭೆಯನ್ನು ಹೊರಹಾಕಿದ್ದು, ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್ರೈಸರ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಹಲವು ದಾಖಲೆಗಳನ್ನು ಬರೆದಿತ್ತು. ಇನ್ನೂ ತಂಡದ ಪರ ಕಣಕ್ಕಿಳಿದ ಯುವ ಆಲ್ರೌಂಡರ್ ನಿತೀಶ್ ರೆಡ್ಡಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭರವಸೆಯ ಆಟಗಾರ ಎನ್ನಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೀಗ ನಿತೀಶ್ ರೆಡ್ಡಿ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಬಗ್ಗೆ ಮಾತನಾಡುವ ಮೂಲಕ ಸುದ್ದಿಯಾಗಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ತೆಲುಗು ನಟ ಕಾರ್ತಿಕೇಯ ನಟಿಸಿರುವ ಭಜೆ ವಾಯು ವೇಗಂ ಚಿತ್ರದ ಪ್ರಮೋಷನ್ನಲ್ಲಿ ಮಾತನಾಡಿದ ರೆಡ್ಡಿ, ಧೋನಿ ಪ್ರತಿಭೆಯನ್ನು ಹೊಂದಿದ್ದಾರೆ. ಆದರೆ, ಯಾವುದೇ ತಂತ್ರವನ್ನು ಹೊಂದಿಲ್ಲ. ವಿರಾಟ್ ಕೊಹ್ಲಿ ರೀತಿಯ ಟೆಕ್ನಿಕ್ ಧೋನಿಗೆ ಗೊತ್ತಿಲ್ಲಾ. ಆಟದ ವಿಚಾರಕ್ಕೆ ಬಂದರೆ ಧೋನಿ ಅವರು ತಮ್ಮ ಸಾಮರ್ಥ್ಯ ಹಾಗೂ ಆಟದ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ ಅದರ ಬಗ್ಗೆ ಬೇರೇನೂ ಹೇಳಬೇಕಾಗಿಲ್ಲ. ಅದಕ್ಕಾಗಿಯೇ ಅವರು ಚಾಂಪಿಯನ್ ಆಗಿದ್ದಾರೆ. ಅವರೊಂದು ದಂತಕಥೆ ಎಂದು ನಿತೀಶ್ ರೆಡ್ಡಿ ಹೇಳಿದ್ದಾರೆ.
ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಯುವ ಕ್ರಿಕೆಟಿಗನ ಹೇಳಿಕೆಯನ್ನು ಖಂಡಿಸಿದ್ದಾರೆ. ಧೋನಿಗೆ ಟೆಕ್ನಿಕ್ ಗೊತ್ತಿರಲಿಲ್ಲವೆಂದರೆ ಕಪ್ಗಳನ್ನು ಗೆಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡದೆ ಈ ರೀತಿಯ ಹೇಳಿಕೆಗಳನ್ನು ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಕಿಡಿಕಾರಿದ್ದಾರೆ.