ನಾನು ಅನುಷ್ಕಾ-ರಿತಿಕಾರನ್ನು ಸ್ಟಾಂಡ್​ನಲ್ಲಿ ನೋಡಿದಾಗ; ವಿರಾಟ್​-ರೋಹಿತ್ ಪತ್ನಿ ಬಗ್ಗೆ ಸೌರವ್​ ಹೀಗೆ ಹೇಳಿದ್ಯಾಕೆ

Sourav Ritika Anushka
Published on

ನವದೆಹಲಿ: ಜೂನ್​ 01ರಂದು ಬಾಂಗ್ಲದೇಶ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಟೀಮ್​ ಇಂಡಿಯಾ ಚುಟುಕು ವಿಶ್ವ ಸಮರದಲ್ಲಿ ಭರ್ಜರಿ ಪ್ರದರ್ಶನ ನೀಡವುದಾಗಿ ಎದುರಾಳಿ ತಂಡಗಳಿಗೆ ಸಂದೇಶ ರವಾನಿಸಿದೆ. 2013ರ ನಂತರ ಟೀಮ್​ ಇಂಡಿಯಾ ಐಸಿಸಿ ಟ್ರೋಫಿಗಳನ್ನು ಗೆದ್ದಿಲ್ಲ. ಹೀಗಾಗಿ ಹಲವು ವರ್ಷಗಳಿಂದ ಭಾರತದ ಪಾಲಿಗೆ ಐಸಿಸಿ ಟ್ರೋಫಿ ಗಗನ ಕುಸುಮವಾಗಿಯೇ ಉಳಿದಿದೆ. ಈ ಬಾರಿಯಾದರೂ ಕಪ್​ ಗೆಲ್ಲುತ್ತದೆ ಎಂದು ಅಭಿಮಾನಿಗಳು ಆಶಿಸಿದ್ದು, ಟೀಮ್​ ಇಂಡಿಯಾಗೆ ಶುಭ ಹಾರೈಸುತ್ತಿದ್ದಾರೆ.

ಇತ್ತ ಟೀಮ್​ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಯಶಸ್ವಿಯಾಗಬೇಕಾದರೆ, ರಾಹುಲ್‌ ದ್ರಾವಿಡ್‌ ಕೋಚಿಂಗ್‌ನಲ್ಲಿರುವ ಟೀಮ್‌ ತುಂಬಾ ರಿಲಾಕ್ಸ್‌ ಆಗಿ ಆಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಸೌರವ್​,  ಯಾವುದೇ ವಿಚಾರದಲ್ಲಿ ತೀರಾ ಒತ್ತಡದಲ್ಲಿ ಆಡುವ ತಪ್ಪನ್ನು ಎಂದಿಗೂ ಮಾಡಬಾರದು. ಆಟಗಾರರ ಮೇಲೆ ಒತ್ತಡ ಎಷ್ಟಿರುತ್ತೆ ಅನ್ನೋದನ್ನ ಅವರ ಬದಲು ಅವರ ಪತ್ನಿಯರ ಮುಖ ನೋಡಿದರೆ ಅರ್ಥವಾಗುತ್ತದೆ. ರಾಹುಲ್‌ ದ್ರಾವಿಡ್‌ ಟೀಮ್‌ಗೆ ಒಂದು ವಿಚಾರ ಹೇಳುತ್ತೇನೆ ಏನೆಂದರೆ, ಯಾವುದೇ ತಪ್ಪುಗಳನ್ನ ಮಾಡಬೇಡಿ. ನನಗೆ ಗೊತ್ತು ದ್ರಾವಿಡ್‌ ಚಾಂಪಿಯನ್‌ ಕ್ರಿಕೆಟರ್‌. ಅವರ ಕ್ರಿಕೆಟ್ ಬ್ರೇನ್‌ಗೆ ಯಾವುದೇ ಸಾಟಿಯಿಲ್ಲ. ಆದರೆ, ಇಡೀ ತಂಡ ಸಾಕಷ್ಟು ರಿಲಾಕ್ಸ್‌ ಆಗಿರಬೇಕು.

ನಾನು ರೋಹಿತ್‌ ಶರ್ಮ ಅವರ ಪತ್ನಿ ಸ್ಟ್ಯಾಂಡ್ಸ್‌ನಲ್ಲಿರೋದನ್ನು ನೋಡಿದಾಗ, ಆಕೆಯೇ ಎಷ್ಟು ಒತ್ತಡದಲ್ಲಿದ್ದಾರೆ ಅನ್ನೋದು ಅರ್ಥವಾಗುತ್ತದೆ. ಅದೇ ರೀತಿ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಅವರನ್ನು ಸ್ಟ್ಯಾಂಡ್ಸ್‌ನಲ್ಲಿ ನೋಡಿದಾಗ, ಆಕೆಯ ಮುಖದ ಮೇಲೆ ಒತ್ತಡ ಇರೋದನ್ನ ನಾನು ಗಮನಿಸಿದ್ಧೇನೆ. ನಾವು ಭಾರತದ ಆಟಗಾರರು ವಿಶ್ವಕಪ್‌ನಂಥ ಟೂರ್ನಿಗಳಲ್ಲಿ ಇನ್ನಷ್ಟು ಹೆಚ್ಚಿನ ಒತ್ತಡ ತಂದುಕೊಳ್ಳುವ ತಪ್ಪು ಮಾಡುತ್ತೇವೆ. 2003ರ ವಿಶ್ವಕಪ್‌ ಫೈನಲ್‌ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ದೊಡ್ಡ ಪಂದ್ಯಗಳನ್ನು ಆಡುವಾಗ ನಾವು ಬಹಳ ರಿಲಾಕ್ಸ್‌ ಆಗಿರಬೇಕು. ಆದಷ್ಟು ಫ್ರೀಡಮ್‌ ಆಗಿ ಆಡಬೇಕು ಎಂದು ಹೇಳಿದ್ದಾರೆ.

2003ರ ಏಕದಿನ ವಿಶ್ವಕಪ್‌ನ ಫೈನಲ್‌ ಮ್ಯಾಚ್‌ ಆಡಿದ್ದ ಟೀಮ್‌ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಫೈನಲ್‌ ಪಂದ್ಯದಲ್ಲಿ ತಂಡ ಇನ್ನಷ್ಟಯ ರಿಲಾಕ್ಸ್‌ ಆಗಿ ಆಡಿದ್ದರೆ, ಪ್ರಶಸ್ತಿ ಗೆಲ್ಲುವ ಅವಕಾಶವಿತ್ತು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. 2003ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಸೋಲು ಕಂಡರೂ, ಆ ಟೂರ್ನಿಯಲ್ಲಿ ನಮ್ಮದೇ ಅತ್ಯುತ್ತಮ ತಂಡವಾಗಿತ್ತು. ಇಡೀ ಟೂರ್ನಿಯಲ್ಲಿ ಬಹಳ ಅದ್ಭುತವಾದ ಕ್ರಿಕೆಟ್‌ ಆಡಿದೆವು. ಫೈನಲ್‌ನಲ್ಲಿ ನಾವೇನಾದರೂ ರಿಲಾಕ್ಸ್‌ ಆಗಿ ಆಟವಾಡಿದರೆ, ಗೆಲ್ಲಬಹುದಿತ್ತು. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಹಾಗಾಗಬಾರದು. ಇದನ್ನೇ ನಾನು ನೋಡಲು ಬಯಸುತ್ತೇನೆ. ನಾನು ಬಹಳ ಮುಕ್ತವಾಗಿ ಆಡಬೇಕು. ಅದೇ ರೀತಿ, ನಮ್ಮ ಮೇಲೆಯೇ ಅತಿಯಾದ ಒತ್ತಡ ಹೇರಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net