

ಲಖನೌ: ದೇಶದ ಹಲವು ರಾಜ್ಯಗಳಲ್ಲಿ ಕರೊನಾ ಸೋಂಕು ಏರಿಕೆ ಕಾಣಲಾರಂಭಿಸಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲಾಕ್ಡೌನ್ ಘೋಷಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆದೇಶ ಹೊರಡಿಸಿದ್ದರು. ಇದೀಗ ಯೋಗಿ ಆದಿತ್ಯಾನಾಥ ಅವರ ಉತ್ತರ ಪ್ರದೇಶಕ್ಕೂ ಲಾಕ್ಡೌನ್ ಬಿಸಿ ತಟ್ಟಿದೆ. ಐದು ಪ್ರಮುಖ ನಗರಗಳಲ್ಲಿ ಇಂದಿನಿಂದಲೇ ಲಾಕ್ಡೌನ್ ಮಾಡುವಂತೆ ಅಲಹಾಬಾದ್ ಹೈ ಕೋರ್ಟ್ ಆದೇಶ ಹೊರಡಿಸಿದೆ.
ವಾರಣಾಸಿ, ಕಾನ್ಪುರ ನಗರ, ಪ್ರಯಾಗ್ರಾಜ್, ಲಖನೌ ಮತ್ತು ಗೋರಕ್ಪುರದಲ್ಲಿ ಇಂದಿನಿಂದ ಏಪ್ರಿಲ್ 26ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಲಾಕ್ಡೌನ್ ಸಮಯದಲ್ಲಿ ಯಾವುದೇ ಶಾಪಿಂಗ್ ಮಾಲ್, ರೆಸ್ಟೋರೆಂಟ್, ಹೋಟೆಲ್, ಸ್ಪಾ, ಸೆಲೂನ್, ಸಿನಿಮಾ ಹಾಲ್ಗಳನ್ನು ತೆರೆಯುವಂತಿಲ್ಲ. ಕೇವಲ ಅಗತ್ಯ ವಸ್ತುಗಳ ಅಂಗಡಿಗಳನ್ನು ಮಾತ್ರವೇ ತೆರೆಯಲು ಅನುಮತಿ ನೀಡಲಾಗಿದೆ. ಖಾಸಗಿ ಕಚೇರಿಗಳನ್ನೂ ತೆರೆಯದಿರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಅಗತ್ಯ ಸೇವೆಗೆ ಸಂಬಂಧಿಸಿದ ಕಚೇರಿಗಳಿಗೆ ಕೆಲಸ ನಿರ್ವಹಿಸಲು ಅನುಮತಿ ನೀಡಲಾಗಿದೆ. (ಏಜೆನ್ಸೀಸ್)
Lockdown in five cities