

ನವದೆಹಲಿ: ಪ್ರಾದೇಶಿಕ ಆರ್ಥಿಕತೆಗೆ ಉತ್ತೇಜನ ನೀಡುವ ಮಹತ್ವದ ಯೋಜನೆಯಾಗಿರುವ ಚೆನ್ನೈ-ಅಂಡಮಾನ್ ಸಬ್ಮರೈನ್ ಆಪ್ಟಿಕಲ್ ಫೈಬರ್ ಕೇಬಲ್ ಕನೆಕ್ಟಿವಿಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅತ್ಯಂತ ಮಹತ್ವದ ಆಯಕಟ್ಟಿನ ಪ್ರದೇಶಗಳಾಗಿವೆ. ಅಲ್ಲಿಗೆ ಸಂಪರ್ಕ ಕಲ್ಪಿಸುವುದು ದೇಶದ ಆದ್ಯ ಕರ್ತವ್ಯವಾಗಿದೆ. ನಿಗದಿತ ಅವಧಿಯಲ್ಲಿ 2,300 ಕಿ.ಮೀ. ಉದ್ದದ ಕೇಬಲ್ ಅನ್ನು ಸಮುದ್ರದಡಿಯಲ್ಲಿ ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಆಳ ಸಮುದ್ರ ಸಮೀಕ್ಷೆ, ಕೇಬಲ್ ಗುಣಮಟ್ಟ ಮತ್ತು ವಿಶೇಷ ನೌಕೆಗಳನ್ನು ಉಪಯೋಗಿ ಕೇಬಲ್ ಅಳವಡಿಸುವ ಕಷ್ಟಕರ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಆಯುಷ್ ವೈದ್ಯರಾಗುವುದು ಹೀಗೆ…
ಹೈ ಇಂಪ್ಯಾಕ್ಟ್ ಪ್ರಾಜೆಕ್ಟ್ಗಳು ಅಂಡಮಾನ್ ಮತ್ತು ನಿಕೋಬಾರ್ನ 12 ದ್ವೀಪಗಳಿಗೆ ವಿಸ್ತರಣೆಯಾಗುತ್ತವೆ. ಅಲ್ಲಿ ಬಹುದೊಡ್ಡ ಸಮಸ್ಯೆಯಾಗಿದ್ದ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಅಡಚಣೆಯನ್ನು ಇಂದು ನಿವಾರಿಸಲಾಗಿದೆ. ಇದಕ್ಕೆ ಹೊರತಾಗಿ ರಸ್ತೆ, ವಾಯ ಮತ್ತು ಜಲ ಸಾರಿಗೆ ಮೂಲಕ ಆ ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಶೀಘ್ರವೇ ನಡೆಯಲಿದೆ.
ಈ ಆಪ್ಟಿಕಲ್ ಫೈಬರ್ ಕೇಬಲ್ ಪ್ರಾಜೆಕ್ಟ್ ಯೋಜನೆಯು ಬದುಕನ್ನು ಸರಳಗೊಳಿಸುವ ದೇಶದ ಬದ್ಧತೆಯ ಭಾಗವಾಗಿದೆ. ಅದು ಆನ್ಲೈನ್ ಕ್ಲಾಸ್ಗಳಿರಬಹುದು, ಟೂರಿಸಂ, ಬ್ಯಾಂಕಿಂಗ್, ಶಾಪಿಂಗ್ ಅಥವಾ ಟೆಲಿಮೆಡಿಸಿನ್ ಇರಬಹುದು ಇವೆಲ್ಲವೂ ಇನ್ನು ಅಂಡಮಾನ್ - ನಿಕೋಬಾರ್ನಲ್ಲಿರುವ ಸಾವಿರಾರು ಕುಟುಂಬಗಳಿಗೆ ಸುಲಭವಾಗಿ ಸಿಗಲಿದೆ. ಅಂಡಮಾನ್ಗೆ ಹೋಗುವ ಪ್ರವಾಸಿಗಳಿಗೂ ಈ ಸೌಲಭ್ಯ ಸಿಗಲಿದೆ. ನೆಟ್ ಕನೆಕ್ಟಿವಿಟಿ ಸಿಗುವ ಕಾರಣ ಇನ್ನು ಅಂಡಮಾನ್ ನಿಕೋಬಾರ್ ದ್ವೀಪಗಳು ಪ್ರವಾಸಿಗರ ನಂ. 1 ಪ್ರವಾಸಿ ಸ್ಥಳವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್)