More

    ಆಯುಷ್ ವೈದ್ಯರಾಗುವುದು ಹೀಗೆ…

    ಆತ್ಮನಿರ್ಭರ ಭಾರತದ ಕನಸಿನೊಂದಿಗೆ ಇದೀಗ ಆಯುರ್ವೇದ ವೈದ್ಧ ಪದ್ಧತಿಯೂ ಮುನ್ನೆಲೆಗೆ ಬಂದಿದೆ. ಕರೊನಾ ವೈರಸ್ ಚಿಕಿತ್ಸೆ ವಿಚಾರದಲ್ಲಿ ಆಯುರ್ವೇದ ಮೂಡಿಸಿರುವ ಭರವಸೆ ಜಗತ್ತನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಹೊಸ ಶೈಕ್ಷಣಿಕ ವರ್ಷ ಮತ್ತೆ ಶುರುವಾಗುತ್ತಿದೆ. ಈ ಸಂದರ್ಭದಲ್ಲಿ ಪಿಯು ಶಿಕ್ಷಣ ಮುಗಿಸಿ ಆಯುಷ್​​ ವೈದ್ಯರಾಗುವ ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಆ ಕುರಿತ ಪರಿಚಯಾತ್ಮಕ ಲೇಖನ. 

    ಆಯುಷ್ ವೈದ್ಯರಾಗುವುದು ಹೀಗೆ...| ಡಾ. ಕೆ.ವಿ. ವೆಂಕಟಕೃಷ್ಣ

    ಭಾರತದಲ್ಲಿ ಆಧುನಿಕ ವೈದ್ಯ ಪದ್ಧತಿ (ಅಲೋಪಥಿ) ಯನ್ನು ಹೊರತುಪಡಿಸಿ ಉಳಿದೆಲ್ಲ ವೈದ್ಯ ಪದಟಛಿತಿಗಳನ್ನು ಭಾರತೀಯ ಪದ್ಧತಿಗಳೆಂದು ಕರೆಯುವ ರೂಢಿಯಿತ್ತು. ಅವೆಲ್ಲವನ್ನು ಒಂದು ಸೂರಿನಡಿ ಸೇರಿಸಿ ಈಗ AYUSH ಎನ್ನುತ್ತಾರೆ. ಆಯುಷ್ ಎಂದರೆ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೊಮಿಯೋಪಥಿ. ಇದಕ್ಕೇ ಆದಂತಹ ಒಂದು ಸಚಿವಾಲಯ ಕೂಡ ಭಾರತ ಕೇಂದ್ರ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿದೆ. https://www.ayush.gov.in/ 2014 ರಲ್ಲಿ ಪ್ರಾರಂಭವಾಯಿತು.
    ಎಲ್ಲ ಆಯುಷ್ ಪದ್ಧತಿಯಲ್ಲೂ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ನಮ್ಮ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅನುಮೋದನೆಗೊಂಡಿದೆ. ಪದವಿ ಶಿಕ್ಷಣ ಅಲೋಪಥಿಯಂತೇ ಐದೂವರೆ ವರ್ಷಗಳದ್ದಾಗಿದೆ. ಇದರಲ್ಲಿ ನಾಲ್ಕೂವರೆ ವರ್ಷದ ಕಾಲೇಜು ಶಿಕ್ಷಣ ಮತ್ತು 1 ವರ್ಷದ ಗೃಹ ವೈದ್ಯ ತರಬೇತಿ (House surgeon) ಇರುತ್ತದೆ. ಆಯುಷ್ ಪದ್ಧತಿಯಲ್ಲಿ ಪದವಿ ಪ್ರವೇಶಕ್ಕೆ ಪಿಯುಸಿ ವಿಜ್ಞಾನ (ಪಿಸಿಎಂಬಿ/ಪಿಸಿಬಿ) ಅಥವಾ ತತ್ಸಮಾನದ ಪದವಿ ಪೂರ್ವ
    ಶಿಕ್ಷಣ ಅಗತ್ಯ. ಎಂಬಿಬಿಎಸ್​ನಂತೆ ಇಲ್ಲೂ ಸಹ ಸರ್ಕಾರಿ ಸೀಟುಗಳು ಮತ್ತು ಖಾಸಗಿ ಸೀಟುಗಳು ಲಭ್ಯವಿದೆ. ಅವುಗಳ ಅನುಪಾತವೂ ಸಹ ಅದರಂತೆಯೇ. ಸಹಜವಾಗಿಯೇ ಖಾಸಗಿ ಸೀಟಿನಲ್ಲಿ ಪ್ರವೇಶ ಪಡೆದರೆ ಪ್ರವೇಶ ಶುಲ್ಕ ಹೆಚ್ಚಾಗಿಯೇ ಆಗುತ್ತದೆ. ಸೀಟು ಖಾಸಗಿಯಾಗಲಿ, ಸರ್ಕಾರಿಯಾಗಲಿ ನೀಟ್ ಕಡ್ಡಾಯವಾಗಿರುತ್ತದೆ. ಆದ್ದರಿಂದ ಪಿಯುಸಿ ನಂತರ ನೀಟ್ ಬರೆಯುವುದನ್ನು ಯಾವುದೇ ಕಾರಣದಿಂದ ತಪ್ಪಿಸಬಾರದು.

    ಇದನ್ನೂ ಓದಿ: ಧನ್ವಂತರಿ: ಮನೆಯಂಗಳದ ಸಂಜೀವಿನಿ ಭದ್ರಮುಷ್ಟಿ

    ನೀಟ್ ಪರೀಕ್ಷೆಯ ರ‍್ಯಾಂಕಿಂಗ್ ಅನುಸರಿಸಿ KEA (https://cetonline.karnataka.gov.in/kea/) ನಿಂದ ವಿವಿಧ ಕಾಲೇಜುಗಳಿಗೆ ಸೀಟು ಹಂಚಿಕೆ ಆಗುತ್ತದೆ. ಕರ್ನಾಟಕದಲ್ಲಿ 45ಕ್ಕೂ ಹೆಚ್ಚು ಭಾರತದಾದ್ಯಂತ 400ಕ್ಕೂ ಹೆಚ್ಚು ಆಯುರ್ವೆದ ಕಾಲೇಜುಗಳು ಆಯುರ್ವೇದ ಪದವಿ ಶಿಕ್ಷಣ ನೀಡುತ್ತಿದೆ. ಈ ಎಲ್ಲ ಕಾಲೇಜುಗಳೂ ದೇಶದ ಬೇರೆ ಬೇರೆ ವಿಶ್ವ ವಿದ್ಯಾಲಯದ ಮಾನ್ಯತೆ ಪಡೆದಿವೆ. ಕರ್ನಾಟಕದ ಎಲ್ಲ ಆಯುರ್ವೆದ ಕಾಲೇಜುಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ಮಾನ್ಯತೆಗೆ ಒಳಪಟ್ಟಿವೆ. (https://www.rguhs.ac.in/) ಶಿಕ್ಷಣ ಮುಗಿದ ಮೇಲೆ ಬಿಎಎಂಎಸ್ ಎಂದು ಪದವಿಯನ್ನು ವಿಶ್ವವಿದ್ಯಾಲಯದ ಅಧಿಕೃತ ಮುದ್ರೆಯೊಂದಿಗೆ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ.

    ಇದೇ ರೀತಿಯಲ್ಲಿ ಇತರ ಆಯುಷ್ ಪದ್ಧತಿಗಳು ಅಂದರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ (ಬಿಎನ್​ವೈಎಸ್), ಯುನಾನಿ (ಬಿಯುಎಂಎಸ್), ಸಿದ್ಧ (ಬಿಎಸ್​ಎಂಎಸ್) ಮತ್ತು ಹೋಮಿಯೋಪಥಿ (ಬಿಎಚ್​ಎಂಎಸ್)ಯಲ್ಲೂ ಪದವಿ ಶಿಕ್ಷಣ ದೇಶಾದ್ಯಂತ ದೊರೆಯುತ್ತದೆ. ಇವುಗಳಿಗೂ ಸಹ ಪಿಯುಸಿ ವಿಜ್ಞಾನ (ಪಿಸಿಎಂಬಿ/ಪಿಸಿಬಿ) ಪದವಿ ಪೂರ್ವ ಶಿಕ್ಷಣ ಕಡ್ಡಾಯ. ಆಯುರ್ವೇದ ಶಿಕ್ಷಣಕ್ಕೆ ಇರುವ ಕಾಲೇಜುಗಳಂತೆಯೇ ಇತರ ಪದ್ಧತಿಗಳಿಗೂ ಅದರದೇ ಆದ ಕಾಲೇಜುಗಳಿವೆ. ಕರ್ನಾಟಕದಲ್ಲಿ ಐದು ಹೋಮಿಯೋಪಥಿ, ಐದು ಯುನಾನಿ, ಏಳು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕಾಲೇಜುಗಳಿವೆ. ಸಿದ್ಧ ವೈದ್ಯ ಪದ್ಧತಿ ಕಲಿಸುವ ಕಾಲೇಜು ಕರ್ನಾಟಕದಲ್ಲಿಲ್ಲ. ತಮಿಳುನಾಡಿನಲ್ಲಿದೆ.

    ಇದನ್ನೂ ಓದಿ: ತುಳಸಿಯಲ್ಲಿದೆ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್​ ಕೊಲ್ಲುವ ಶಕ್ತಿ

    ಈ ಆಯುಷ್ ಪದ್ಧತಿಗಳ ನಾಲ್ಕೂವರೆ ವರ್ಷಗಳ ಪದವಿ ಶಿಕ್ಷಣದಲ್ಲಿ 18 ರಿಂದ 20 ವಿಷಯಗಳ ಬಗ್ಗೆ ಬೋಧಿಸಲಾಗುತ್ತದೆ. ಅದರಲ್ಲಿ ಆಯಾ ಪದ್ಧತಿಗಳ ಮೂಲ ಸಿದ್ಧಾಂತಗಳು, ಶರೀರ ರಚನಾ ಶಾಸ್ತ್ರ (Anatomy), ಶರೀರ ಕ್ರಿಯಾ ಶಾಸ್ತ್ರ (Physiology), ರೋಗ ನಿಧಾನ (Pathology), ದ್ರವ್ಯಗುಣ (Pharmacognosy), ರಸ ಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ (Pharmaceutical Sciences), ಸ್ವಸ್ಥವೃತ್ತ (community & preventive
    medicine) ಬಾಲರೋಗ (Peadiatrics), ಸ್ತ್ರೀ ಮತ್ತು ಪ್ರಸೂತಿ ರೋಗ (OBG), ಕಾಯಚಿಕಿತ್ಸಾ (Medicine), ಶಲ್ಯ ತಂತ್ರ (Surgery), ಶಲಾಕ್ಯ ತಂತ್ರ (ENT & Opthalmology) ಇನ್ನೂ ಹತ್ತು ಹಲವು ವಿಷಯಗಳನ್ನು ಕಲಿಸಲಾಗುವುದು. ಇದರೊಂದಿಗೆ ಆಧುನಿಕ ವೈದ್ಯ ಶಾಸ್ತ್ರದಲ್ಲಿ (ಎಂಬಿಬಿಎಸ್) ಕಲಿಸುವ Anatomy, Physiology, Pathology, Community & preventive medicine, Peadiatrics, OBG, Medicine, Surgery, ENT & Opthalmology ಮುಂತಾದ ವಿಷಯಗಳನ್ನೂ ಸಹ ಆಯಾ ವರ್ಷದ ಪಠ್ಯಕ್ರಮದಲ್ಲಿ ಅಳವಡಿಸಿ ಬೋಧಿಸಲಾಗುತ್ತದೆ. ಪ್ರತಿಯೊಂದಕ್ಕೂ ಪ್ರಾಯೋಗಿಕ ಮತ್ತು ಥಿಯರಿ ವಿಷಯಗಳು ಇರುತ್ತದೆ. ನಾಲ್ಕೂವರೆ ವರ್ಷದ ಶಿಕ್ಷಣವನ್ನು ಒಂದು ವರ್ಷದ ಮೂರು ಟರ್ಮ್ ಹಾಗೂ ಒಂದೂವರೆ ವರ್ಷದ ಒಂದು ಟರ್ಮ್ ಎಂದು ವಿಂಗಡಿಸಲಾಗಿದೆ.

    ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಥಿಯರಿ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗಳಿರುತ್ತವೆ. ನಾಲ್ಕೂವರೆ ವರ್ಷ ಕಾಲೇಜು ಶಿಕ್ಷಣ ಮುಗಿದ ಬಳಿಕ ಒಂದು ವರ್ಷದ ಗೃಹವೈದ್ಯ ತರಬೇತಿ (ಹೌಸ್ ಸರ್ಜನ್) ಇರುತ್ತದೆ. ಈ ಸಮಯದಲ್ಲಿ ವಿವಿಧ ಆಸ್ಪತ್ರೆಗಳ ವಿವಿಧ ವಿಭಾಗಗಳಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಪದವಿ ನಂತರ ಸ್ನಾತಕೋತ್ತರ ಶಿಕ್ಷಣವೂ ಲಭ್ಯವಿದೆ. ಆಯುರ್ವೇದದಲ್ಲಿ 22 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಎಂ.ಡಿ.) ನೀಡಲಾಗುವುದು. ಅದೇ ರೀತಿ ಇತರ ಆಯುಷ್ ಪದ್ಧತಿಗಳಲ್ಲೂ ಸಹ ಸ್ನಾತಕೋತ್ತರ ಶಿಕ್ಷಣ ಲಭ್ಯವಿದೆ. ಸ್ನಾತಕೋತ್ತರ ಶಿಕ್ಷಣಕ್ಕೆ ಆಯ್ಕೆ, ಪ್ರವೇಶ ಪರೀಕ್ಷೆಯ ಮೂಲಕ ನಡೆಯುತ್ತದೆ. ಈ ಪ್ರವೇಶ ಪರೀಕ್ಷೆಗಳು ಆನ್ ಲೈನ್ ಪರೀಕ್ಷೆಗಳಾಗಿವೆ. ಸ್ನಾತಕೋತ್ತರ ಶಿಕ್ಷಣ ಮೂರು ವರ್ಷಗಳದ್ದಾಗಿದ್ದು ಇದರಲ್ಲಿ ಅವರ ಐಚ್ಛಿಕ ವಿಷಯದಲ್ಲಿ ನಿಷ್ಣಾತರಾಗುವ ಅವಕಾಶಗಳು ವಿಫುಲವಾಗಿದೆ. ಈ ಸ್ನಾತಕೋತ್ತರ ಶಿಕ್ಷಣದಲ್ಲಿ ಪ್ರಾತ್ಯಕ್ಷಿಕೆ ವಿಷಯಗಳು ಹೆಚ್ಚಿಗೆ ಇದ್ದು ರಿಸರ್ಚ್ ಮಾಡುವುದು ಕಡ್ಡಾಯವಾಗಿರುತ್ತದೆ. ಮೂರು ವರ್ಷಗಳ ಶಿಕ್ಷಣದಲ್ಲಿ ಎರಡು ಬಾರಿ ಅಂದರೆ ಮೊದಲನೇ ವರ್ಷದಲ್ಲಿ ಒಂದು ಬಾರಿ ಹಾಗೂ ಕೊನೆಯ ವರ್ಷದಲ್ಲಿ ಒಂದು ಬಾರಿ ವಿಶ್ವ ವಿದ್ಯಾಲಯದ ಪರೀಕ್ಷೆ ಮತ್ತು ಪ್ರಾತ್ಯಕ್ಷಿಕೆಗಳಿಗೆ ಹಾಜರಾಗಿ ಕನಿಷ್ಠ ಶೇ. 50 ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ತೇರ್ಗಡೆಯಾದ ನಂತರ ವಿಶ್ವ ವಿದ್ಯಾಲಯದ ಅಧಿಕೃತ ಮುದ್ರೆಯೊಂದಿಗೆ MD (Ayu) ಪದವಿ ಪ್ರದಾನ ಮಾಡಲಾಗುತ್ತದೆ.

    ಇದನ್ನೂ ಓದಿ: ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..

    ಪದವಿ ನಂತರ ಕೇವಲ ಎಂಡಿ ಮಾತ್ರವಲ್ಲದೆ ಇತರ ಕೋರ್ಸ್​ಗಳೂ ಲಭ್ಯವಿದೆ. ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ (http://www.ravdelhi.nic.in/) ದಿಂದ ನಡೆಸುವ ಸಿಆರ್​ಎವಿ / ಎಂಆರ್​ಎವಿ ಪರಿಕ್ಷೆಗಳಿಗೂ ಹಾಜರಾಗಬಹುದು. ಇವುಗಳಿಗೂ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ನೀಡಲಾಗುವುದು.
    ಇದರಲ್ಲಿ ಸಿಆರ್​ಎವಿ (Certificate of Rashtreeya Ayurveda Vidyapeetha) ಯನ್ನು ಬಿಎಎಂಎಸ್ ಪದವಿಯ ನಂತರ ಮತು ಎಂಆರ್​ಎವಿ ( Member of Rashtreeya Ayurveda Vidyapeetha) ಯನ್ನು ಎಂಡಿ (ಆಯುಷ್) ಪದವಿ ನಂತರ ಪ್ರವೇಶ ಪರೀಕ್ಷೆ ಮೂಲಕ ಸೇರಬಹುದು. ಇದು ಗುರು ಶಿಷ್ಯ ಪರಂಪರೆಯ ಶಿಕ್ಷಣ ಪದ್ಧತಿಯಾಗಿದೆ.

    ಗುಜರಾತಿನ ಜಾಮ್​ನಗರದಲ್ಲಿರುವ ಆಯುರ್ವೇದ ವಿಶ್ವವಿದ್ಯಾಲಯದಿಂದ ವಿವಿಧ ಕೋರ್ಸ್​ಗಳನ್ನು ನಡೆಸಲಾಗುವುದು. ಅವುಗಳಲ್ಲಿ ಬಿಎಂಎಸ್ ಮತ್ತು ಎಂಡಿ (ಆಯು) ಅಲ್ಲದೆ ಇನ್ನಿತರ ಕೋರ್ಸ್​ಗಳೂ ಲಭ್ಯವಿದೆ. ಅದೆಂದರೆ ಎಸ್ಸೆಸ್ಸೆಲ್ಸಿ ನಂತರ ಡಿ ಫಾರ್ವ(ಆಯು) ಪಿಯುಸಿ ನಂತರ ಎಂ ಫಾರ್ವ (ಆಯು) ಎಂಎಸ್ಸಿ (ಮೆಡಿಷನಲ್ ಪ್ಲಾಂಟ್) ಮುಂತಾದ ವಿಶೇಷ ಕೋರ್ಸಗಳಿವೆ. ಹೆಚ್ಚಿನ ಮಾಹಿತಿಗಾಗಿ (http://www.ayurveduniversity.edu.in/coursedetail.php) ನ್ನು ನೋಡಬಹುದು.

    ರಾಷ್ಟ್ರೀಯ ಆಯುರ್ವೇದ ಸಂಸ್ಥಾನ, ಜೈಪುರ, ರಾಜಸ್ಥಾನದಿಂದಲೂ ವಿವಿಧ ವಿಷಯಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕೆ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಆಗಿದ್ದು ಮೂರು ವರ್ಷಗಳ ತರಬೇತಿ ನಡೆಯುತ್ತದೆ. ಇದರಲ್ಲಿ ಆರು ತಿಂಗಳು ಪ್ರಾತ್ಯಕ್ಷಿಕೆ ಅಥವಾ ಇಂಟರ್ನ್​ಶಿಪ್ ಇರುತ್ತದೆ. ಇದಲ್ಲದೆ ಕೆಲವು ಸರ್ಟಿ?ಕೇಟ್ ಕೋರ್ಸ್​ಗಳನ್ನೂ ನೀಡಲಾಗುವುದು. ಅದರಲ್ಲಿ ಪಂಚಕರ್ಮ ಚಿಕಿತ್ಸೆ, ಕ್ಷಾರ ಸೂತ್ರ ಚಿಕಿತ್ಸೆ, ಆಯುರ್ವೆದೀಯ ಸೌಂದರ್ಯ ಚಿಕಿತ್ಸೆ ಮುಂತಾದವು ಪ್ರಮುಖ. ಈ ಎಲ್ಲ ಸರ್ಟಿ?ಕೇಟ್ ಕೋರ್ಸ್​ಗಳೂ ಪ್ರಾತ್ಯಕ್ಷಿಕೆ ತರಬೇತಿಗೆ ಆದ್ಯತೆ ನೀಡುತ್ತವೆ. (http://nia.nic.in/Panchakarma.html) ಆಯುರ್ವೇದ ಶಿಕ್ಷಣದ ನಿಯಂತ್ರಣ ಸಂಸ್ಥೆ ಇಲ್ಲಿಯವರೆಗೂ CCIM (Central Council of Indian Medicine).ಇದು ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು 2014ರಿಂದ ಆಯುಷ್ ಮಂತ್ರಾಲಯದ ಜೊತೆಗೂಡಿ ಆಯುರ್ವೇದ ಶಿಕ್ಷಣದ ಗುಣಮಟ್ಟ ಕಾಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕೇಂದ್ರ ಸರ್ಕಾರದಿಂದ ಪ್ರಸ್ತಾಪಿಸಲಾಗಿರುವ ರಾಷ್ಟ್ರೀಯ ಆಯುಷ್ ಮಿಷನ್ ಅಸ್ತಿತ್ವಕ್ಕೆ ಬರುವವರೆಗೆ ಇದೇ ಸಂಸ್ಥೆ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಆದ್ದರಿಂದ ಯಾವುದೇ ಆಯುಷ್ ಕಾಲೇಜುಗಳನ್ನು ಸೇರುವ ಮೊದಲು ಅದಕ್ಕೆ ಸಿಸಿಐಎಂ ಅಥವಾ ಆಯುಷ್ ಮಂತ್ರಾಲಯದ ಅನುಮತಿ ಇದೆಯೋ ಇಲ್ಲವೋ ಗಮನಿಸಬೇಕಾದ್ದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಇದು ಆಯುಷ್​ನ ಪ್ರತಿಯೊಂದು ಕೋರ್ಸಿಗೂ ಮುಖ್ಯವಾಗಿರುತ್ತದೆ.

    ಇದನ್ನೂ ಓದಿ: ಧನ್ವಂತರಿ: ಮಲಬದ್ಧತೆ ನಿವಾರಣೆಗೆ ಸುಲಭದ ಪರಿಹಾರಗಳು

    ಬಿಎಎಂಎಸ್ ಪದವಿ ನಂತರ ನಾನಾ ರೀತಿಯ ಸರ್ಕಾರಿ ಸೇವೆಗೆ ಸೇರಬಹುದು ಅಥವಾ ಸ್ವಂತದ ಕ್ಲಿನಿಕ್ ನಡೆಸಬಹುದು. ಆಯುರ್ವೇದ ಕಾಲೇಜುಗಳಲ್ಲಿ ಶಿಕ್ಷಕರಾಗಲು ಎಂಡಿ (ಆಯು) ಕಡ್ಡಾಯವಾಗಿರುತ್ತದೆ. ಎಂಡಿ (ಆಯು)ಯ ನಂತರ ಅವಕಾಶಗಳು ಸಾಕಷ್ಟಿವೆ. ತಾವು ಕಲಿತ ಐಚ್ಛಿಕ ವಿಷಯದಲ್ಲಿ ತಜ್ಞ ವೈದ್ಯರಾಗಿ ಖಾಸಗಿ ಕ್ಲಿನಿಕ್ ನಡೆಸಬಹುದು, ಆಯುರ್ವೆದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಬಹುದು, ಅನುಸಂಧಾನ (ರೀಸರ್ಚ್) ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಬಹುದು, ಔಷಧ ತಯಾರಿಕಾ ಕಂಪನಿಗಳಲ್ಲೂ ಕಾರ್ಯನಿರ್ವಹಿಸಬಹುದು, ಆಯುರ್ವೇದ ಪಿಎಚ್​ಡಿ ಸಹ ಮಾಡಬಹುದು. ಅದು ಐದು ವರ್ಷದ ಕೋರ್ಸ್ ಆಗಿದ್ದು, ಇದಕ್ಕೂ ದಾಖಲಾತಿ ಪ್ರವೇಶ ಪರೀಕ್ಷೆಯ ಮೂಲಕ.  ಆಯುರ್ವೇದ ಶಿಕ್ಷಣ ನಿಯಂತ್ರಣದ ಶೃಂಗ ಸಂಸ್ಥೆಯ ಮಾನ್ಯತೆ ಇರುವುದು ಬಿಎಎಂಎಸ್, ಎಂಡಿ (ಆಯು), ಪಿಎಚ್​ಡಿ (ಆಯುರ್ವೇದ)ಗಳಿಗೆ. ಬೇರೆ ಕೋರ್ಸ್​ಗಳಿಗೆ ಆಯಾ ವಿಶ್ವ ವಿದ್ಯಾಲಯದ ಮಾನ್ಯತೆ ಇರಬಹುದು, ಆದರೆ ಕೋರ್ಸ್ ಸೇರುವ ಮುನ್ನ ಅದಕ್ಕಿರುವ ಅವಕಾಶಗಳು, ಉದ್ಯೋಗ ಅವಕಾಶ ತಿಳಿಯುವುದು ಮುಖ್ಯ. ಹಾಗೆಂದು ಅವುಗಳಿಗೆ ಅವಕಾಶವೇ ಇಲ್ಲ ಎಂದು ಹೇಳುತ್ತಿಲ್ಲ. ಅವಕಾಶ ಕಡಿಮೆ ಇವೆ. ಆದ್ದರಿಂದ ಆಯುಷ್ ಪದವೀಧರನಾಗುವ ಇಚ್ಛೆಯುಳ್ಳವರು ಸಿಸಿಐಎಂ ಮಾನ್ಯತೆ ಇರುವ ಕೋರ್ಸಗಳನ್ನು ಸೇರುವುದು ಒಳಿತು.

    (ಲೇಖಕರು ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ಸ್ನಾತಕೋತ್ತರ ಸ್ವಸ್ಥವೃತ್ತ ವಿಭಾಗ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು)

    ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೆಸರೆಂದರೆ ನೆನಪಾಗೋದು ಆಯುರ್ವೇದದ ಚ್ಯವನಪ್ರಾಶ ಲೇಹ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts