ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೆಸರೆಂದರೆ ನೆನಪಾಗೋದು ಆಯುರ್ವೇದದ ಚ್ಯವನಪ್ರಾಶ ಲೇಹ್ಯ!

Chava
Published on

ಆರೋಗ್ಯವೆಂಬುದು ಯಾರಿಗೆ ಬೇಡ ಹೇಳಿ? ರೋಗರುಜಿನಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಸಂದರ್ಭದಲ್ಲಂತೂ ಸ್ವಾಸ್ಥ್ಯ ಮಹತ್ವ ಚೆನ್ನಾಗಿ ಅರ್ಥವಾಗುತ್ತದೆ. ಬೇರೇನೂ ಸವಲತ್ತುಗಳು ಇಲ್ಲದಿದ್ದರೂ ಪರವಾಗಿಲ್ಲ, ರೋಗದಿಂದ ನರಳದೆ ಜೀವವನ್ನು ಕಳೆಯದೆ

ಬದುಕಿದರೆ ಸಾಕು ಎಂಬ ಮನೋಭಾವ ಘನವಾಗುತ್ತ ಹೋಗುತ್ತದೆ. ಬದುಕುಳಿದರೆ ತಾನೇ ಸೌಕರ್ಯಗಳು, ಸುಖ, ಸಂತೋಷ, ನೆಮ್ಮದಿಯ ಮಾರ್ಗಗಳು ಬೇಕಾಗುವುದು. ಇಂದು ನಾವು ಇದೇ ಕಾಲಘಟ್ಟದಲ್ಲಿದ್ದೇವೆ. ಹಾಗಿದ್ದರೆ ರೋಗದಿಂದ ದೂರವಿರಲು ದಾರಿ ಯಾವುದೆಂಬ ಚಿಂತನೆಯ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೆಸರುಗಳಲ್ಲಿ ನೆನಪಾಗುವುದು ಆಯುರ್ವೇದದ ಚ್ಯವನಪ್ರಾಶ ಲೇಹ್ಯ. ಇದರ ಹಿಂದಿನ ಕಥೆ ಸ್ವಾರಸ್ಯಕರವಾಗಿದೆ. ಚ್ಯವನಪ್ರಾಶ ಎಂಬುದು ಆಯುರ್ವೇದ ಗ್ರಂಥಗಳಲ್ಲಿ ವಿವರಿಸಲ್ಪಟ್ಟ ಅನೇಕ ಲೇಹ್ಯಗಳಲ್ಲಿ ರುಚಿಕರ ಹಾಗೂ ಪ್ರಖ್ಯಾತ ಔಷಧ. ಲೇಹ್ಯವೆಂದರೆ ನೆಕ್ಕಿ ತಿನ್ನುವಂಥದ್ದು ಎಂದರ್ಥ. ನೆಲ್ಲಿಕಾಯಿಯೇ ಪ್ರಮುಖ ಘಟಕವಾಗಿರುವುದರಿಂದ ಶರೀರದ ಜೀವಕೋಶಗಳನ್ನು ನವೀಕರಣಗೊಳಿಸಿ ಬಲ ತುಂಬುವ ಪ್ರಬಲ ರಸಾಯನವಾಗಿ ಪರಿಗಣಿತವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಸೇವಿಸಿ ಎನ್ನುವುದಕ್ಕಿಂತ ಸಾವಿರಾರು ವರ್ಷ ಮೊದಲೇ ಇಂಥ ಜ್ಞಾನವನ್ನೊದಗಿಸಿದ ಕೀರ್ತಿ ಆಯುರ್ವೆದದ್ದು.

ಹದಿಹರೆಯದ ಮಹಾಪತಿವ್ರತೆ ಸುಕನ್ಯಾಳ ಪತಿಯೇ ಈ ವೃದ್ಧ ಚ್ಯವನಮಹರ್ಷಿ! ಅಶ್ವಿನಿಕುಮಾರರು ಚ್ಯವನರಿಗೆ ತಾರುಣ್ಯವನ್ನು ನೀಡಿದವರು. ತಾರುಣ್ಯಪ್ರಾಪ್ತಿಯ ಬಳಿಕ ಪತ್ನಿ ಸುಕನ್ಯಾ ತನ್ನ ಗಂಡನನ್ನು ಗುರುತಿಸಲು ಸಾಧ್ಯವಾದರೆ ಮಾತ್ರ ಈ ವರ ಎಂಬುದು ಷರತ್ತು. ಚ್ಯವನರ ಜತೆಯಲ್ಲಿ ಅಶ್ವಿನಿಕುಮಾರರೂ ಯೌವನದೊಂದಿಗೆ ತುಂಬಿ ಒಂದೇ ರೂಪದಿಂದ ಗೋಚರಿಸಿದರು! ಸುಕನ್ಯಾ ಅಪ್ಪಿತಪ್ಪಿ ಅಶ್ವಿನಿಕುಮಾರರಲ್ಲಿ ಓರ್ವನನ್ನು ತನ್ನ ಗಂಡನೆಂದು ಭಾವಿಸಬಹುದಾದ ಸಾಧ್ಯತೆಯಿತ್ತು. ಆದರೆ ಪತಿವ್ರತೆ ಸುಕನ್ಯಾಳ ಪಾವಿತ್ರ್ಯಂದಾಗಿ ಚ್ಯವನರನ್ನು ಸುಲಭವಾಗಿ ಗುರುತಿಸುವಲ್ಲಿ ಯಶಸ್ವಿಯಾಗಿ ಯುವ ಪತಿಯನ್ನು ಪಡೆದುಕೊಂಡಳು. ಚರಕಸಂಹಿತೆಯ ಸೂತ್ರಸ್ಥಾನದಲ್ಲಿ, ಮಹಾಭಾರತದ ಅನುಶಾಸನ ಪರ್ವದಲ್ಲಿ, ಶತಪಥ ಬ್ರಾಹ್ಮಣ ಗ್ರಂಥದಲ್ಲಿ, ಬ್ರಹ್ಮವೈವರ್ತ ಪುರಾಣ ಹಾಗೂ ಧನ್ವಂತರಿ ವ್ರತಕಲ್ಪದಲ್ಲಿ ಚ್ಯವನಮಹರ್ಷಿಯ ಉಲ್ಲೇಖವಿದೆ. ಧನ್ವಂತರಿ ವ್ರತಕಲ್ಪದಲ್ಲಿ ಧನ್ವಂತರಿಯ ಪ್ರಸಾದಸೇವನೆಯಿಂದ ಚ್ಯವನರಿಗೆ ಯೌವನಪ್ರಾಪ್ತಿಯಾದ ವಿವರಣೆಯಿದೆ.

ಚ್ಯವನಮಹರ್ಷಿಗಳ ಮತ್ತೊಂದು ಕಥೆ ಕೇಳಿ. ರಾಜ ಶರ್ಯಾತಿಯ ಮಗಳಾದ ಸುಕನ್ಯಾ ಸಖಿಯರೊಂದಿಗೆ ವನವಿಹಾರಕ್ಕೆ ತೆರಳುತ್ತಾಳೆ. ಅರಣ್ಯದಲ್ಲಿ ಹುತ್ತದಿಂದ ಎರಡು ಬೆಳಕು ಬರುತ್ತಿರುವುದನ್ನು ಕಂಡು ಈಟಿಯಿಂದ ಅದನ್ನು ಚುಚ್ಚುತ್ತಾಳೆ. ಹುತ್ತ ಕಳಚಿ ಬಿದ್ದಾಗ ಅಲ್ಲಿ ತಪೋನಿರತ ಚ್ಯವನಮಹರ್ಷಿ ಇದ್ದು ತನ್ನ ಕಣ್ಣುಗಳನ್ನು ಕಳೆದುಕೊಳ್ಳುತ್ತಾರೆ. ತಪ್ಪಿನ ಫಲವಾಗಿ ಶರ್ಯಾತಿಯ ಪ್ರಜೆಗಳಿಗೆ ಮಲ-ಮೂತ್ರ ವಿಸರ್ಜನೆಯಾಗದೆ ಸಮಸ್ಯೆಯುಂಟಾಗುತ್ತದೆ. ರಾಜ ಬಂದು ಮಹರ್ಷಿಗಳಲ್ಲಿ ಕ್ಷಮೆಕೇಳಿ ಪರಿಹಾರರೂಪವಾಗಿ ರಾಜಕುವರಿ ಸುಕನ್ಯಾಳನ್ನು ಮದುವೆಮಾಡಿ ಕೊಡುತ್ತಾನೆ! ಈಕೆ ಘೊರ ತಪಸ್ಸು ಮಾಡಿ ಚ್ಯವನರಿಗೆ ಕಣ್ಣು ಹಾಗೂ ಯೌವನವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ. ಚ್ಯವನಮುನಿ ಪ್ರಣೀತ ಚ್ಯವನಪ್ರಾಶವು ಶರೀರದ ತಾರುಣ್ಯ ರಕ್ಷಣೆ, ವ್ಯಾಧಿಕ್ಷಮತ್ವ ವರ್ಧನೆಗೆ ಇಂದಿಗೂ ವಿಖ್ಯಾತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net