ತುಳಸಿಯಲ್ಲಿದೆ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್​ ಕೊಲ್ಲುವ ಶಕ್ತಿ

Tulasi
Published on

ತುಳಸಿ ಎಂಬ ಶಬ್ದದ ಅರ್ಥವೇ ‘ಸಾಟಿಯಿಲ್ಲದ್ದು’ ಎಂದು. ಅದಕ್ಕೆ ಪಾವನಿ, ದೇವದುಂದುಭಿ ಎಂಬೆಲ್ಲ ಹೆಸರುಗಳಿವೆ. ಅದಕ್ಕೆ ಕಾರಣ ಅದಕ್ಕಿರುವ ದೈವಸಮಾನ ಗುಣಗಳು. ನಮ್ಮ ಮನೆಯ ಮುಂದೆ ಇದ್ದು ದುಷ್ಟ ಜಂತುಗಳಿಂದ ನಮ್ಮನ್ನು ಸದಾ ಕಾಯುತ್ತದೆ ಎಂಬ ಕಾರಣಕ್ಕೇ ಅದಕ್ಕೆ ಪೂಜೆ ಮಾಡುವುದು. ಇದನ್ನು ಆಧುನಿಕ ವಿಜ್ಞಾನ ಕೂಡ ಒಪ್ಪಿಕೊಳ್ಳುತ್ತದೆ.

ತುಳಸಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಾ, ವೈರಸ್ ಮತ್ತು ಫಂಗಸ್​ಗಳನ್ನು ಕೊಲ್ಲುವ ಶಕ್ತಿ ಇದೆ ಎಂಬುದು ಸಾಬೀತಾಗಿದೆ. ಹಾಗಾಗಿಯೇ ಇದಕ್ಕೆ ಆಯುರ್ವೆದದಲ್ಲಿ ಭೂತಘ್ನಿ, ಅಪೇತರಾಕ್ಷಸಿ ಎಂಬ ಹೆಸರುಗಳಿಂದ ಕರೆದಿದ್ದಾರೆ. ಇದೇ ಕಾರಣಕ್ಕೆ ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಮಂತ್ರಾಲಯವು ಹೇಳಿದ ‘ಆಯುಷ್ ಕ್ವಾಥ’ದಲ್ಲಿ ತುಳಸಿಯನ್ನು ಪ್ರಧಾನ ದ್ರವ್ಯವಾಗಿ ಬಳಸಲಾಗಿದೆ. ತುಳಸಿಗೆ ಉಷ್ಣ ಗುಣವಿದೆ. ದೇಹದಲ್ಲಿ ಶೀತದ ಕಾರಣದಿಂದಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಕರೊನಾ ಕೂಡ ಶೀತವನ್ನು ತರುವ ವೈರಸ್ಸೇ ಆಗಿದೆ. ಕಫವನ್ನು ಹೊರತಂದು ಶ್ವಾಸಕೋಶದ ಆರೋಗ್ಯ ಹೆಚ್ಚಿಸುವ ಶಕ್ತಿ ತುಳಸಿಗಿದೆ. ಹಾಗಾಗಿ ಅಸ್ತಮಾ, ಅಲರ್ಜಿ, ಕೆಮ್ಮು, ದಮ್ಮಿಗೆ ಸಂಬಂಧಿಸಿದ ಬಹುತೇಕ ಆಯುರ್ವೆದ ಔಷಧಗಳಲ್ಲಿ ತುಳಸಿಯನ್ನು ಬಳಸುತ್ತಾರೆ.

ದೇಹದಲ್ಲಿ ವಾತವನ್ನು ಕಡಿಮೆ ಮಾಡುವ ಗುಣ ತುಳಸಿಗಿದೆ. ಹಾಗಾಗಿ ತುಳಸಿಯ ಸೇವನೆಯಿಂದ ಗಂಟುನೋವು, ಬಾವುಗಳು ಕಡಿಮೆಯಾಗುತ್ತವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ವಿಶೇಷವಾಗಿ ಹಸಿವು ಕಡಿಮೆ ಇರುವವರಲ್ಲಿ ಇದು ಸಹಕಾರಿ. ಹೊಟ್ಟೆಯೊಳಗಿನ ಕ್ರಿಮಿಗಳನ್ನೂ ಕೊಲ್ಲುವ ಶಕ್ತಿ ಇದಕ್ಕಿದೆ. ಬಾಯಿ ವಾಸನೆ ಬರುವವರಿಗೆ ಇದು ತುಂಬ ಪ್ರಯೋಜನಕಾರಿ. ಊಟವಾದ ತಕ್ಷಣ ಇದರ ಎರಡು ಎಲೆಗಳನ್ನು ಜಗಿದು ತಿಂದರೆ ಬಾಯಿವಾಸನೆ ಕಡಿಮೆಯಾಗುತ್ತದೆ. ಉಪಕಾರಿಯಾದ ಬ್ಯಾಕ್ಟೀರಿಯಾಗಳಿಗೆ ತೊಂದರೆ ಮಾಡದೆ ವಾಸನೆಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುವ ಕೆಲಸ ಮಾಡುತ್ತದೆ.

ದೇಹದಲ್ಲಿರುವ ವಿಷದ ಅಂಶಗಳನ್ನು ಕಡಿಮೆ ಮಾಡುವಲ್ಲೂ ಇದು ಸಹಕಾರಿ. ಇದರಿಂದ ರಕ್ತಶುದ್ಧಿಯಾಗುತ್ತದೆ. ಕಫದೋಷದ ಕಾರಣದಿಂದ ಚರ್ಮರೋಗವಿದ್ದರೆ ಸರಿಯಾಗುತ್ತದೆ. ಆಯುರ್ವೆದದಲ್ಲಿ ಕೆಲವು ದ್ರವ್ಯಗಳ ವಿಷಾಂಶವನ್ನು ತೆಗೆದು ಶುದ್ಧೀಕರಿಸಲೂ ತುಳಸಿಯ ರಸವನ್ನು ಬಳಸುತ್ತಾರೆ. ಇದರ ಎಲೆಗಳನ್ನು ಉಗಿಯಲ್ಲಿ ಮೃದುವಾಗಿಸಿ ನಂತರ ಹಿಂಡಬೇಕು. ಆಗ ಮಾತ್ರ ಇದು ರಸವನ್ನು ಬಿಡುತ್ತದೆ. ಹೀಗೆ ತೆಗೆದ ಅರ್ಧ ಚಮಚ ತುಳಸಿರಸ, ಅರ್ಧ ಚಮಚ ದೊಡ್ಡಪತ್ರೆಯ ರಸ, ಒಂದು ಚಮಚ ಜೇನುತುಪ್ಪ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಫ, ಕೆಮ್ಮು, ಅಲರ್ಜಿ, ಅಸ್ತಮಾದಂತಹ ಸಮಸ್ಯೆ ಇರುವವರಿಗೆ ತುಂಬ ಸಹಾಯವಾಗುತ್ತದೆ. ಗಂಟಲು ಕೆರೆತ, ಎಷ್ಟು ಕೆಮ್ಮಿದರೂ ಕಫ ಹೊರಬರುವುದಿಲ್ಲ ಎಂಬ ತೊಂದರೆ ಇದ್ದರೂ ಸರಿಯಾಗುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಹತ್ತು ತುಳಸಿ ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಅರ್ಧಲೋಟಕ್ಕೆ ಬತ್ತಿಸಿ ಸೋಸಿ ಎರಡು ಚಿಟಿಕೆ ಅರಿಶಿಣ, ಒಂದು ಚಿಟಿಕೆ ದಾಲ್ಚಿನ್ನಿ (ಚಕ್ಕೆ) ಹಾಕಿ ತಣಿದ ನಂತರ ಜೇನುತುಪ್ಪ ಹಾಕಿ ಕುಡಿಯಬಹುದು. ತುಳಸಿಯನ್ನು ಹಾಲಿನ ಜೊತೆ ಕುಡಿಯುವುದು ಸರಿಯಲ್ಲ. ವೈರಸ್ ನಿರೋಧಕ ಗುಣವಿರುವ ಕಾರಣ ಈ ಸಮಯದಲ್ಲಿ ಇದು ಹೆಚ್ಚು ಉಪಯೋಗಿ. ಇದು ಉಷ್ಣ ಗುಣ ಹೊಂದಿರುವ ಕಾರಣ ಬಳಸುವಾಗ ಸ್ವಲ್ಪ ಕಾಳಜಿ ಬೇಕು. ದೀರ್ಘಕಾಲದವರೆಗೆ ನಿತ್ಯ ಸೇವನೆ ಸರಿಯಲ್ಲ. ಗರ್ಭಿಣಿಯರು ವೈದ್ಯರ ಸಲಹೆಯಿಲ್ಲದೆ ಇದನ್ನು ಸೇವಿಸಬಾರದು. ಮಕ್ಕಳು, ಬಾಣಂತಿಯರು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net