

ನವದೆಹಲಿ: 43 ದಿನಗಳ ಮದ್ಯದ ಉಪವಾಸದಿಂದ ಬಳಲಿ ಬೆಂಡಾಗಿದ್ದ ಮದ್ಯಪ್ರಿಯರು ಬಾರ್ ತೆರೆಯುತ್ತಿದ್ದಂತೆಯೇ ದೌಡಾಯಿಸಿದ್ದು ಕಂಡರೆ ಅಬ್ಬಬ್ಬಾ ಹೀಗೆಲ್ಲಾ ಇದೆಯಾ ಸ್ಥಿತಿ ಎಂದು ಬಹುತೇಕರು ಹುಬ್ಬೇರಿಸಲಿಕ್ಕೆ ಸಾಕು.
ಯುವತಿಯರು, ಹೆಂಗಸರು, ವೃದ್ಧೆಯರೂ ತಾವೇನು ಕಡಿಮೆ ಇಲ್ಲ ಎಂದು ಕ್ಯೂನಲ್ಲಿ ನಿಂತಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಜನ, 'ಇದು ಭಾರತನಾ', 'ನಮ್ ಹೆಣ್ಣುಮಕ್ಕಳಿಗೆ ಇದೆಲ್ಲಾ ಬೇಕಿತ್ತಾ' ಎಂದು ಟೀಕಿಸೋದೂ ನಡೆದಿದೆ.
ಅದೇನೇ ಇರಲಿ. ಒಟ್ಟಿನಲ್ಲಿ ಇಲ್ಲಿಯವರೆಗೆ ಯಾರಿಗೂ ತಿಳಿಯದಂತೆ ಗುಟ್ಟುಗುಟ್ಟಾಗಿ ರಾತ್ರಿ ವೇಳೆ ಮದ್ಯದಂಗಡಿಗೆ ಹೊಕ್ಕು ಒಂದಿಷ್ಟು ಬಾಟಲಿಗಳನ್ನು ಎತ್ತಿಕೊಂಡು ಹೋಗುತ್ತಿದ್ದವರೂ ಈಗ ಮಾಸ್ಕ್ ಒಳಗೆ ಮುಖ ಮರೆಮಾಚಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ತಮ್ಮಿಷ್ಟದ ಬ್ರ್ಯಾಂಡ್ ಒಯ್ದಿದ್ದೂ ಆಯ್ತು, ಕೆಲವರು ಅದನ್ನು ಮುಗಿಸಿಯೂ ಆಯ್ತು ಅನ್ನಿ.
ಮದ್ಯದಂಗಡಿ ತೆರೆಯುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಅವರು ಅನೇಕ ಕಾರಣಗಳನ್ನೂ ಕೊಟ್ಟಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ ಆಗಿರುವ ಅಪಾರ ನಷ್ಟವನ್ನು ತುಂಬಿಸಲು ಕೇಂದ್ರ ಸರ್ಕಾರಕ್ಕೆ ಮದ್ಯದಂಗಡಿ ತೆರೆಯುವುದು ಅನಿವಾರ್ಯವಾಗಿತ್ತು. ಜಿಎಸ್ಟಿ ಕೊರತೆಯನ್ನು ಸರಿದೂಗಿಸಲು ಇದರ ಅಗತ್ಯವೂ ಇತ್ತು ಎಂದು ಸರ್ಕಾರ ಸಮಜಾಯಿಷಿ ನೀಡಿದೆ.
ಲಾಕ್ಡೌನ್ ಸಮಯದಲ್ಲಿ ಮದ್ಯದ ಮಾರಾಟವನ್ನು ನಿಷೇಧ ಮಾಡಿದ್ದರೂ ಕಳ್ಳವ್ಯವಹಾರದಲ್ಲಿ ಅಕ್ರಮ ಚಟುವಟಿಕೆಗಳು ಅಪಾರ ಪ್ರಮಾಣದಲ್ಲಿ ನಡೆಯುತ್ತಿದ್ದುದರಿಂದ ಅದನ್ನು ತಡೆಯುವುದು ಕೂಡ ಸರ್ಕಾರಕ್ಕೆ ಅಷ್ಟೇ ಅಗತ್ಯವಾಗಿತ್ತು ಎಂದಿರುವ ಬಹುತೇಕ ಸರ್ಕಾರಗಳು ಇವೆಲ್ಲಾ ಕಾರಣಗಳನ್ನು ಮುಂದಿಟ್ಟುಕೊಂಡು ಅಂಗಡಿ ತೆರೆಯಲು ಅನುಮತಿ ನೀಡಿವೆ.
ಹಾಗಿದ್ದರೆ ಎಣ್ಣೆ ಪ್ರಿಯರ ಬಗ್ಗೆಯೂ ಒಂದಿಷ್ಟು ಮಾಹಿತಿ ಇರಬೇಕಲ್ಲವೆ? ಅದಕ್ಕಾಗಿಯೇ ಕೇಂದ್ರ ಗೃಹ ಸಚಿವಾಲಯವು ದೇಶದಲ್ಲಿ ಮದ್ಯದ ಮಾರಾಟ, ಸೇವನೆ, ಅನಾಹುತ ಎಲ್ಲವನ್ನೂ ಇಲ್ಲಿ ಬಿಚ್ಚಿಟ್ಟಿದೆ. 2010 ರಿಂದ 2017ರವರೆಗೆ ನಡೆಸಿರುವ ಅಧ್ಯಯನದ ವರದಿ ಇದಾಗಿದೆ.
* ಭಾರತದಲ್ಲಿ ಆಲ್ಕೋಹಾಲ್ ಸೇವನೆಯು 2010 ಮತ್ತು 2017 ರ ನಡುವೆ ಶೇಕಡಾ 38 ರಷ್ಟು ಹೆಚ್ಚಾಗಿದೆ. ಅಂದರೆ ವರ್ಷಕ್ಕೆ ಒಬ್ಬ ವಯಸ್ಕ ಸರಾಸರಿ 4.3 ರಿಂದ 5.9 ಲೀಟರ್ ಮದ್ಯ ಸೇವನೆ ಮಾಡಿದ್ದಾರೆ.
* ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಐಮ್ಸ್) 2019ರಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಸುಮಾರು 57 ಮಿಲಿಯನ್ (5.7 ಕೋಟಿ) ಭಾರತೀಯರು ಮದ್ಯದ ಚಟಕ್ಕೆ ಒಳಗಾಗಿದ್ದಾರೆ.
* ಭಾರತದಲ್ಲಿ ಸುಮಾರು 70 ಪ್ರತಿಶತದಷ್ಟು ಆಲ್ಕೊಹಾಲ್ ವಿತರಣೆಯು ಮದ್ಯ ಮಾರಾಟ ಅಥವಾ ಅಂಗಡಿಗಳ ಮೂಲಕ ನಡೆಯುತ್ತದೆ. ಇದರಲ್ಲಿ 30ರಷ್ಟು ಬಾರ್‌ಗಳು, ಪಬ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಾರಾಟವಾಗುತ್ತವೆ.
* ಭಾರತದಲ್ಲಿ ಶೇಕಡಾ 75 ರಷ್ಟು ಯುವಕರು, 21 ವರ್ಷ ತುಂಬುವ ಮೊದಲೇ ಅಲ್ಕೋಹಾಲ್ ದಾಸರಾಗಿದ್ದಾರೆ!
* 2018ರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಯ ಪ್ರಕಾರ, ಮದ್ಯ ಸೇವನೆಯಿಂದ ಪ್ರತಿವರ್ಷ 2.60 ಲಕ್ಷ ಮಂದಿ ಪ್ರಾಣ ಬಿಡುತ್ತಿದ್ದಾರೆ.
* 2019 ರ ಫೆಬ್ರವರಿಯಲ್ಲಿ ನಡೆಸಿದ ಸರ್ಕಾರಿ ಸಮೀಕ್ಷೆಯ ಪ್ರಕಾರ, 10 ರಿಂದ 75 ವರ್ಷದೊಳಗಿನ ಸುಮಾರು ಶೇ. 14.6 ರಷ್ಟು (16 ಕೋಟಿ) ಜನರು ಮದ್ಯ ಸೇವಿಸುತ್ತಾರೆ. ಛತ್ತೀಸಗಡ, ತ್ರಿಪುರ, ಪಂಜಾಬ್, ಅರುಣಾಚಲ ಪ್ರದೇಶ, ಮತ್ತು ಗೋವಾದಂತಹ ರಾಜ್ಯಗಳು ಮದ್ಯ ಸೇವನೆಯಲ್ಲಿ ಪ್ರಾಬಲ್ಯ ಹೊಂದಿವೆ. (ಏಜೆನ್ಸೀಸ್)