More

    ಚೀನಾ ಕೊಟ್ಟಿದೆ ಇನ್ನೊಂದು ಆಘಾತ… ಭಾರತಕ್ಕೂ ಕಾಲಿಟ್ಟಿದೆ ಈ ಜ್ವರ!

    ಗುವಾಹಟಿ: ಇಡೀ ವಿಶ್ವಕ್ಕೆ ಕರೊನಾ ಸೋಂಕು ಹಚ್ಚಿಸಿ ಜನಜೀವನವನ್ನು ಅಯೋಮಯ ಮಾಡಿರುವ ಚೀನಾ ಇದೀಗ ಭಾರತಕ್ಕೆ ಇನ್ನೊಂದು ಆಘಾತ ನೀಡಿದೆ.

    ಹಂದಿ ಜ್ವರ (ಸ್ವೈನ್​ ಫ್ಲೂ) ಈಗಾಗಲೇ ಭಾರತಕ್ಕೂ ಕಾಲಿಟ್ಟು ಅನೇಕ ಪ್ರಾಣಗಳನ್ನು ಕಿತ್ತುಕೊಂಡಿದೆ. ಇದೀಗ, ಆಫ್ರಿಕನ್​ ಹಂದಿ ಜ್ವರ (ಸ್ವೈನ್​ ಫೀವರ್​) ಎಂದು ಕರೆಯಲಾಗುವ ಹಂದಿಗಳ ಕಾಯಿಲೆ ಚೀನಾದಿಂದ ಶುರುವಾಗಿದೆ. ಇದೀಗ ಈ ಕಾಯಿಲೆ ಭಾರತಕ್ಕೂ ಕಾಲಿಟ್ಟಿದೆ. ಅಸ್ಸಾಂನ 306 ಹಳ್ಳಿಗಳಲ್ಲಿನ ಹಂದಿಗಳಿಗೆ ಈ ಸೋಂಕು ತಲುಪಿದ್ದು, ಇದಾಗಲೇ ಎರಡೂವರೆ ಸಾವಿರಕ್ಕೂ ಅಧಿಕ ಹಂದಿಗಳು ಮೃತಪಟ್ಟಿವೆ.

    ಇದನ್ನೂ ಓದಿ: ಮದ್ಯ ಪ್ರೇಮಿಗಳಿಗೆ ಹೂವು ಹಾಕಿ ಸ್ವಾಗತ- ವೀಡಿಯೋ ವೈರಲ್

    ಈ ಜ್ವರ ಮನುಷ್ಯರಿಗೆ ತಗುಲುವ ಸಾಧ್ಯತೆ ಇಲ್ಲ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ. ಆದರೆ ಹಂದಿ ಸಾಕಣೆ ಮಾಡುವವರಿಗೆ ಮಾತ್ರ ಈ ಜ್ವರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

    ಆಫ್ರಿಕನ್​ ಹಂದಿ ಜ್ವರದ ಮೂಲ ಚೀನಾದ ಕ್ಸಿಜಾಂಗ್‌ ಪ್ರಾಂತ್ಯ. ಅರುಣಾಚಲ ಪ್ರದೇಶ ಮತ್ತು ಚೀನಾದ ಗಡಿ ಭಾಗದಲ್ಲಿ ಈ ಪ್ರದೇಶವಿದೆ. ಇಲ್ಲಿಯೇ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದೆ ಎಂದು ಕೇಂದ್ರ ಪಶುಸಂಗೋಪನಾ ಸಚಿವ ಅತುಲ್‌ ಬೋರಾ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಜ್ಯದಲ್ಲಿ 8 ಹೊಸ ಸೋಂಕು ಪ್ರಕರಣ: ಎಲ್ಲೆಲ್ಲಿ ಎಷ್ಟೆಷ್ಟು?

    ಭಾರತದಲ್ಲಿ ಇದೇ ಮೊದಲ ಬಾರಿಗೆ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದ್ದು, 2,500ಕ್ಕೂ ಅಧಿಕ ಹಂದಿಗಳು ಇದಕ್ಕೆ ಬಲಿಯಾಗಿವೆ. ಇದು ಅತ್ಯಂತ ಅಪಾಯಕಾರಿ ವೈರಸ್​ ಆಗಿದೆ. ಆದರೆ ಸ್ವೈನ್​ ಫ್ಲೂದಂತೆ (ಹಂದಿ ಜ್ವರ), ಆಫ್ರಿಕನ್​ ಹಂದಿಜ್ವರ ಮನುಷ್ಯರಿಗೆ ಹರಡುವ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಆದ್ದರಿಂದ ಜನರು ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.

    ಈ ಜ್ವರದ ಲಕ್ಷಣ ಕಾಣಿಸಿಕೊಂಡಿರುವ ಹಂದಿಗಳನ್ನು ಕೊಲ್ಲುವಂತೆ ಸರ್ಕಾರ ಅನುಮತಿ ನೀಡಿದೆ. ಮೊದಲು ಏಕಾಏಕಿ ಹಂದಿಗಳನ್ನು ಕೊಲ್ಲುವ ಬದಲು ಸೋಂಕು ಹರಡುವುದನ್ನು ತಡೆಯಲು ಏನಾದರೂ ಕ್ರಮ ತೆಗೆದುಕೊಳ್ಳಬಹುದೇ ಎಂದು ನೋಡಲಾಗುವುದು. ಈ ಜ್ವರ ಮನುಷ್ಯರಿಗೆ ಹರಡದ ಕಾರಣ, ಎಲ್ಲಾ ಹಂದಿಗಳನ್ನು ಕೊಲ್ಲುವುದು ಸರಿಯಲ್ಲ. 2019ರ ಗಣತಿ ಅನುಸಾರ ಅಸ್ಸಾಂನಲ್ಲಿ 21 ಲಕ್ಷ ಹಂದಿಗಳು ಇದ್ದವು, ಅವುಗಳ ಸಂಖ್ಯೆ ಈಗ 30 ಲಕ್ಷಕ್ಕೆ ಏರಿದೆ. ಅವುಗಳನ್ನು ನಾಶ ಮಾಡುವುದು ಸರಿಯಲ್ಲ ಎಂದಿದ್ದಾರೆ.

    ಇದನ್ನೂ ಓದಿ: ಬಾರ್​ಗಳ ಮುಂದೆ ಮಹಿಳೆಯರದ್ದೂ ಕಾರುಬಾರು!

    ರಾಜ್ಯದಲ್ಲಿ ಈ ಜ್ವರ ದಿನೆ ದಿನೇ ಹೆಚ್ಚುತ್ತಿರುವುದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರಬಾನಂದ ಸೋನೊವಾಲ್‌ ಆತಂಕ ವ್ಯಕ್ತಪಡಿಸಿದ್ದಾರೆ. ಕಾಯಿಲೆಯನ್ನು ನಿಭಾಯಿಸಲು ಯೋಜನೆ ರೂಪಿಸುವಂತೆ ಪಶುವೈದ್ಯರು ಮತ್ತು ಅರಣ್ಯ ಇಲಾಖೆಗೆ ಅವರು ಸೂಚನೆ ನೀಡಿದ್ದಾರೆ.

    ಈ ಹಂದಿ ಜ್ವರದಿಂದಾಗಿ ಅಸ್ಸಾಂನಲ್ಲಿ ಹಂದಿ ಸಾಕಾಣಿಕಾ ಕೇಂದ್ರದವರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅವರಿಗೆ ಪರಿಹಾರದ ಪ್ಯಾಕೇಜ್‌ ನೀಡಲು ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts