ಗಾಯನ ನಿಲ್ಲಿಸಿದ ಸಂಗೀತ ವಿದುಷಿ

Shyamala
Published on

ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದವರು ಶ್ಯಾಮಲಾ ಜಿ. ಭಾವೆ. ಸಂಗೀತಕ್ಕಾಗಿ ಜೀವನವನ್ನು ಮೀಸಲಾಗಿ ಇರಿಸಿದ ಅವರು ಕರ್ನಾಟಕದ ಸಂಗೀತಗಾರರಲ್ಲಿ ಅಗ್ರಗಣ್ಯರು. 1941ರ ಮಾರ್ಚ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರು. ತಂದೆ ಪಂಡಿತ ಗೋವಿಂದ ವಿಠ್ಠಲ ಭಾವೆ ಗಾಯನದ ಜತೆಗೆ 14 ವಾದ್ಯ ನುಡಿಸಬಲ್ಲವರಾಗಿದ್ದರು. ಸಂಗೀತೋದ್ಧಾರಕ ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ ಅವರ ಬಳಿ ಗೋವಿಂದ ಭಾವೆ ಸಂಗೀತಾಭ್ಯಾಸ ಮಾಡಿದ್ದರು. ತಾಯಿ ಲಕ್ಷ್ಮೀ ಭಾವೆಯವರೂ ಅತ್ಯುತ್ತಮ ಗಾಯಕಿ. ಸಂಗೀತಮಯ ವಾತಾವರಣದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ 3ನೇ ವಯಸ್ಸಿನಲ್ಲಿ ಸಂಗೀತ ಕಲಿಕೆ ಆರಂಭವಾಯಿತು. 6ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದರು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿದರು. ತಂದೆ-ತಾಯಿಯರಿಂದ ಹಿಂದುಸ್ತಾನಿ ಸಂಗೀತ, ಬಿ.ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಿಂದ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು.

ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿದ್ದ ಉಭಯ ಗಾನ ವಿದುಷಿ ಶ್ಯಾಮಲಾ ಜಿ. ಭಾವೆ (79) ಬೆಂಗಳೂರಿನ ಶೇಷಾದ್ರಿಪುರದ ಸ್ವಗೃಹದಲ್ಲಿ ಶುಕ್ರವಾರ ಬೆಳಗ್ಗೆ 7.15ಕ್ಕೆ ನಿಧನರಾದರು. ಕೆಲಕಾಲದಿಂದ ಅನಾರೋಗ್ಯ ಸಮಸ್ಯೆ ಹೊಂದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಿಂದ ಸೋಮವಾರ ಮನೆಗೆ ಆಗಮಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮುಂತಾದವರು ಅಂತಿಮ ದರ್ಶನ ಪಡೆದರು. ಅವಿವಾಹಿತರಾದ ಭಾವೆ ಅವರ ಅಂತಿಮಸಂಸ್ಕಾರವನ್ನು ಬಹುಕಾಲದ ಶಿಷ್ಯ, ನಾದೋಪಾಸಕ ವಾಗೀಶ್ ಭಟ್ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿಸಿದರು.

ವಿಶ್ವೇಶ್ವರಯ್ಯರಿಂದ ಉಭಯಗಾನ ವಿದುಷಿ ಬಿರುದು: 1930ರಲ್ಲಿ ಬೆಂಗಳೂರಿನಲ್ಲಿ ಶ್ಯಾಮಲಾರ ತಂದೆ ಗೋವಿಂದ ಭಾವೆ ಪ್ರಪ್ರಥಮ ಹಿಂದುಸ್ತಾನಿ ಸಂಗೀತ ಶಾಲೆ ‘ಸರಸ್ವತಿ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿದರು. ಆ ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿದ ಶ್ಯಾಮಲಾ ಸಾವಿರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಿದರು. ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತದ ಖ್ಯಾತಿ ಹೆಚ್ಚಿಸಿದರು. ಪಂಡಿತ್ ಜಸರಾಜ್ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದು ಚಲನಚಿತ್ರ, ಸಾಕ್ಷ್ಯಚಿತ್ರ, ಗ್ರಾಮಫೋನ್ ಹಾಗೂ ಕ್ಯಾಸೆಟ್​ಗಳಿಗೆ ದನಿ ನೀಡಿದರು. ಸಂಗೀತ ನಿರ್ದೇಶನವನ್ನೂ ಮಾಡಿದರು. ಒಂಬತ್ತು ಭಾಷೆಗಳ 1500ಕ್ಕೂ ಹೆಚ್ಚಿನ ಗೀತೆಗಳಿಗೆ ಅವರು ರಾಗ ಸಂಯೋಜಿಸಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಯಲ್ಲಿ ಮಾತನಾಡುವಷ್ಟೇ ಸರಾಗವಾಗಿ ಹಾಡುವಿಕೆಯನ್ನು ರೂಢಿಸಿಕೊಂಡರು. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ಜವಾಹರ ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂಗ್ಲೆಂಡ್ ರಾಣಿ 2ನೇ ಎಲಿಜಬೆತ್ ಸೇರಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಹಾಡಿದ್ದರು. ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಶ್ಯಾಮಲಾ ಅವರ ತಂದೆ ಗೋವಿಂದ ವಿಠ್ಠಲ ದಾಸರ ನಡುವೆ ಆತ್ಮೀಯ ಸ್ನೇಹವಿತ್ತು. ಇಬ್ಬರೂ ಒಟ್ಟಿಗೆ ವಾಯುವಿಹಾರ ಮಾಡುತ್ತಿದ್ದರು. ಪುರುಸೊತ್ತಿನಲ್ಲಿ ಮನೆಗೆ ಆಗಮಿಸಿದಾಗ ಶ್ಯಾಮಲಾ ಅವರನ್ನು ಕರೆದು ‘ಬಂದಿಶ್ ಹಾಡು, ಆಲಾಪ ಹಾಡು’ ಎಂದು ಕೇಳುತ್ತಿದ್ದರು. 12ನೇ ವಯಸ್ಸಿನಲ್ಲಿ ಬೆಂಗಳೂರಿನ ಪುರಭವನದಲ್ಲಿ ಶ್ಯಾಮಲಾ ಅವರ ಕಛೇರಿ ಕೇಳಿ, ತಂದೆಯನ್ನು ಬಳಿಗೆ ಕರೆದರು- ‘ನಿನ್ನ ಮಗಳು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಅವಳಿಗೆ ಉತ್ತಮ ಸಂಗೀತ ಶಿಕ್ಷಣ ಕೊಡಿಸುತ್ತೇನೆ ಎಂದು ಮಾತು ಕೊಡು’ ಎಂದರು. ತಂದೆಯವರು ಮಾತು ಕೊಟ್ಟಿದ್ದರು. ‘ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತಗಳೆರಡರಲ್ಲೂ ಪಾಂಡಿತ್ಯ ಹೊಂದಿರುವ ಶ್ಯಾಮಲಾ ಇಂದಿನಿಂದ ‘ಉಭಯ ಗಾನ ವಿಶಾರದೆ’. ಶ್ಯಾಮಲಾ ಹೆಸರಿನ ಜತೆಗೆ ಭಾವೆ ಎಂಬುದಷ್ಟೇ ಕಡ್ಡಾಯವಾಗಿ ಉಭಯ ಗಾನ ವಿಶಾರದೆ ಎಂಬುದನ್ನೂ ಬಳಸಬೇಕು’ ಎಂದು ಮೈಕ್ ಮೂಲಕ ಘೋಷಣೆ ಮಾಡಿದ್ದರು ವಿಶ್ವೇಶ್ವರಯ್ಯ.

ಸ್ಮರಣೀಯ ಘಟನೆ

‘‘1991ರಲ್ಲಿ ಬೆಂಗಳೂರಿನ ಸೈನಿಕ ತರಬೇತಿ ಸಂಸ್ಥೆಯೊಂದರಲ್ಲಿ ಶ್ಯಾಮಲಾ ಭಾವೆ ಹಿಂದಿ ಭಜನ್ ಕಾರ್ಯಕ್ರಮ ನಡೆಸಿಕೊಡುವುದು ನಿಗದಿಯಾಗಿತ್ತು. ಕಾರ್ಯಕ್ರಮ ಆರಂಭವಾಗಿ 15-20 ನಿಮಿಷದಲ್ಲೇ ಮಳೆ ಆರಂಭವಾಯಿತು. ಸೈನಿಕರಿಗೆ ಮಳೆಗಾಳಿಯ ಅಂಜಿಕೆಯಿಲ್ಲ, ಅವರಾರೂ ಕುಳಿತಲ್ಲಿಂದ ಕದಲಲಿಲ್ಲ. ಮಳೆಯಿಂದ ವಾದ್ಯ ಹಾಳಾಗುತ್ತದೆ ಎಂಬುದರ ಗೊಡವೆಗೆ ಹೋಗದೆ ಭಾವೆಯವರೂ ಸಂಗೀತ ಮುಂದುವರಿಸಿದರು. ಅಲ್ಲೇ ಇದ್ದ ಪ್ಲಾಸ್ಟಿಕ್ ತುಂಡೊಂದನ್ನು ಹಾಮೋನಿಯಂ ಮೇಲೆ ಹಾಕಿಕೊಂಡು ಹಾಡಲಾರಂಭಿಸಿದರು. ಮಳೆನಡುವೆಯೇ 45 ನಿಮಿಷ ಸಂಗೀತ ಕಛೇರಿ ನಡೆಸಿದರು’’.

ಅದ್ಭುತ ಪ್ರತಿಭೆ

ನವದೆಹಲಿಯಲ್ಲಿ ಅಖಿಲ ಭಾರತ ಮಕ್ಕಳ ಸಂಗೀತ ಸಮ್ಮೇಳನ ನಡೆದಾಗ ದಕ್ಷಿಣ ಭಾರತದಿಂದ ಶ್ಯಾಮಲಾ ಒಬ್ಬರೇ ಪ್ರತಿನಿಧಿ. ಪ್ರತಿನಿಧಿಯೊಬ್ಬರಿಗೆ ತಲಾ 8 ನಿಮಿಷ ಹಾಡಲು ಅವಕಾಶವಿತ್ತು. ಶ್ಯಾಮಲಾ ಸಂಗೀತದ ಒಂದು ಶ್ಲೋಕ ಹಾಡಿದರು. ವೇದಿಕೆಯ ಎದುರು ಕುಳಿತಿದ್ದ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು, ‘ಇನ್ನೊಂದು ಹಾಡು’ ಎಂದರು. ಅದೇ ರೀತಿ ‘ಇನ್ನೊಂದು ಹಾಡು, ಮತ್ತೊಂದು ಹಾಡು’ ಎನ್ನುತ್ತ 27 ನಿಮಿಷ ಹಾಡಲು ಅವಕಾಶ ನೀಡಿದರು.

ಪುರಸ್ಕಾರಗಳು

ಶ್ಯಾಮಲಾ ಭಾವೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ ಬಿರುದುಗಳ ಜತೆಗೆ ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೆರಿಕದ ಹ್ಯೂಸ್ಟನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, 2007ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಭಾರತ ಗೌರವ್ ಮುಂತಾದ ಪುರಸ್ಕಾರಗಳು ಸಂದಿವೆ. ಅನಕೃ ಅವರಿಂದ ಕರ್ನಾಟಕದ ನೈಟಿಂಗೇಲ್ ಪ್ರಶಸ್ತಿ ಸ್ವೀಕರಿಸಿದರು. 1997ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು ‘ಸ್ವರ ಸಾಧನಾ’ ಎಂಬ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ.

ಸಿನಿಮಾರಂಗಕ್ಕೂ ನಂಟು

ಸಿನಿಮಾ ಸಂಗೀತದಲ್ಲೂ ಗುರುತಿಸಿಕೊಂಡಿದ್ದ ಭಾವೆ 1976ರಲ್ಲಿ ಬಿಡುಗಡೆಯಾದ ಲೋಕೇಶ್ ಮತ್ತು ವೈಶಾಲಿ ಕಾಸರವಳ್ಳಿ ಅಭಿನಯದ ‘ಪರಿವರ್ತನೆ’ ಚಿತ್ರಕ್ಕೆ ಮೊದಲ ಬಾರಿಗೆ ಸಂಗೀತ ಸಂಯೋಜಿಸಿದ್ದರು. ಒಂದು ಹಾಡಿಗೂ ಧ್ವನಿಯಾಗಿದ್ದರು. ಈ ಚಿತ್ರವನ್ನು ವೈಶಾಲಿ ಕಾಸರವಳ್ಳಿ ತಂದೆ ಡಾ.ಚಿಟಗೋಪಿ ನಿರ್ದೇಶನ ಮಾಡಿದ್ದರು. ಇನ್ನು ‘ಹಂಸಗೀತೆ’ ಚಿತ್ರಕ್ಕೆ ಶ್ಯಾಮಲಾ ಆಲಾಪನೆ ಮಾಡಿದ್ದರು.

ಕಲಾವಿದರು ಬೆಳೆಯೋದು ಛಲದಿಂದ

‘‘ನಮ್ಮ ತಂದೆಗೆ ವಿಪರೀತ ಹಠ ಮತ್ತು ಕೋಪ. ಸ್ವಭಾವದಲ್ಲಿ ನಾನೂ ಅವರ ಥರ. ಪರಶುರಾಮನ ಹಠ ಅಂತಾರಲ್ಲ, ಅಂಥದ್ದು. ನನಗೆ ಅವರಿಗಿಂತ ಒಂದು ಕೈ ಜಾಸ್ತಿ ಹಠ. ಮನೇಲಿ ಟಿವಿ, ಫ್ರಿಜ್, ಚಿನ್ನ, ಬೆಳ್ಳಿ ಇಟ್ಟುಕೊಂಡು ರಾಜಗಾಂಭೀರ್ಯ, ರಾಜಠೀವಿಯಲ್ಲಿ ಇರಬೇಕು ಅನ್ನೋ ಹಠ ಬಂತು. ನಾನು ಯಾರಿಗೇನು ಕಮ್ಮಿ ಎಂಬ ಭಾವನೆ. ‘ಸ್ವಾಮಿ, ಇವತ್ತು ಮಲ್ಹಾರ ಹಾಡಿದ್ದೀನಿ. ಕಂಪೋಸಿಷನ್ ಎಲ್ಲ ನಾನೇ ಮಾಡಿದ್ದೀನಿ. ಕೂತ್ಕೊತೀರಾ, ಹಾಡಿ ತೋರಿಸ್ತೀನಿ’ ಅನ್ನೋ ಹಠ. ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಕಲಾವಿದರು ಬೆಳೆಯೋದು ಛಲದಿಂದಾಗಿಯೇ’. ಆತ್ಮಕಥೆ ‘ಸ್ವರಗಂಗಾ’ದಲ್ಲಿ ಶ್ಯಾಮಲಾ ಭಾವೆ ಹೇಳಿಕೊಂಡಿದ್ದು. ಈ ಕೃತಿಯ ಲೇಖಕರು ತ್ರಿವೇಣಿ ಶಿವಕುಮಾರ್.

ಬೆಳೆದಷ್ಟೂ ಮುಕ್ತವಾಯಿತು ಮನಸು!

ಶ್ಯಾಮಲಾ ಭಾವೆಯವರ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ 10 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಶಿಷ್ಯರಲ್ಲಿ ಒಬ್ಬರಾದ ಹಾಗೂ 1978ರಿಂದ ಅಂದರೆ 42 ವರ್ಷದಿಂದ ಶ್ಯಾಮಲಾ ಭಾವೆ ನೆರಳಿನಂತೆಯೇ ಜತೆಗಿದ್ದವರು ನಾದೋಪಾಸಕ ವಾಗೀಶ ಭಟ್. ಸಂಗೀತ ಸಾಧಕಿಯೊಂದಿಗೆ 4 ದಶಕದ ನೆನಪುಗಳನ್ನು ‘ವಿಜಯವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘‘ಮೂಲತಃ ಹಿಂದುಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದರು. ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತವನ್ನು ಅಧಿಕೃತವಾಗಿ ಹಾಡಬಲ್ಲವರಾದ ಕಾರಣಕ್ಕೆ ಉಭಯ ಗಾನ ವಿದುಷಿ ಎಂಬ ಬಿರುದನ್ನು ಪಡೆದರು. ಮಾತೃಭಾಷೆ ಮರಾಠಿ ಆದ್ದರಿಂದ ಹಾಗೂ ಬೆಂಗಳೂರಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಭಾವ ಹೆಚ್ಚಿದ್ದರಿಂದ ಭಾವೆ ಅವರಿಗೆ ಪ್ರಾರಂಭದಲ್ಲಿ ಅನೇಕ ಕಷ್ಟಗಳು ಎದುರಾದವು. ಕರ್ನಾಟಕ ಏಕೀಕರಣದ ವೇಳೆಯಲ್ಲಿ ಕಾಳಿಂಗರಾವ್ ಸೇರಿ ಅನೇಕರ ನೇತೃತ್ವದಲ್ಲಿ ಕನ್ನಡ ಗೀತೆಗಳನ್ನು ರಾಜ್ಯಾದ್ಯಂತ ಹಾಡುವ ಮೂಲಕ ಕನ್ನಡ ಏಕೀಕರಣಕ್ಕೆ ಬೆಂಬಲಿಸುವ ಬಹುದೊಡ್ಡ ಆಂದೋಲನ ನಡೆಯಿತು. ತಮ್ಮದು ಶಾಸ್ತ್ರೀಯ ಸಂಗೀತ ಎಂಬ ಮಡಿವಂತಿಕೆ ತೋರಲಿಲ್ಲ. 5 ವರ್ಷ ಸಂಪೂರ್ಣವಾಗಿ ತೊಡಗಿಸಿಕೊಂಡು ದ.ರಾ. ಬೇಂದ್ರೆ, ಕುವೆಂಪು ಮುಂತಾದ ಮಹನೀಯರ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿದರು, ಹಾಡಿದರು. ಸಂಗೀತ ಕಲಿಯಲು ಚಿಕ್ಕಮಗುವೇ ಬರಲಿ, ದೊಡ್ಡವರೇ ಇರಲಿ ಯಾರಲ್ಲೂ ಭೇದ ತೋರಲಿಲ್ಲ. ಸರಸ್ವತಿ ಸಂಗೀತ ವಿದ್ಯಾಲಯಕ್ಕೆ, ಮನೆಗೆ ಯಾರೇ ಬಂದರೂ ನಗುಮೊಗದ ಸ್ವಾಗತ ನೀಡುವುದು ಅವರ ಗುಣ. ಕೆಲವು ಸಂಗೀತಗಾರರು ಬೆಳೆದಂತೆಲ್ಲ ಮುಕ್ತತೆಯನ್ನು ಕಡಿಮೆ ಮಾಡುತ್ತಾರೆ. ಆದರೆ ಭಾವೆಯವರು ಎತ್ತರಕ್ಕೆ ಬೆಳೆದಂತೆಲ್ಲ ಅವರ ಮನೆ, ಮನಸ್ಸು ಮುಕ್ತವಾಗುತ್ತ ಹೋಯಿತು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಗೆ ಅಧ್ಯಕ್ಷರಾಗಿದ್ದಾಗ(1997-2001) ನಾಡಿನ ಮೂಲೆ ಮೂಲೆಯಿಂದ 200 ಕಲಾವಿದರನ್ನು ಗುರುತಿಸಿ ಸನ್ಮಾನಿಸಿದರು. ಅವರು ವಿವಾಹವಾಗದ್ದರ ಕುರಿತು ಆಗಾಗ್ಗೆ ಅವರ ಮಾತಿನ ಆಧಾರದಲ್ಲಿ ಹೇಳುವುದಾದರೆ, ಚಿಕ್ಕ ವಯಸ್ಸಿನಲ್ಲೆ ತಂದೆ ನಿಧನರಾದರು. ಮನೆಯ ಹೊಣೆಗಾರಿಕೆ ಹೆಗಲ ಮೇಲೆ ಬಿತ್ತು. ತಂಗಿಗೆ ಮದುವೆ ಮಾಡಿದರು. ಇದೆಲ್ಲದರ ಜತೆಗೆ, ಆಗಿನ ಕಾಲದಲ್ಲಿ ಸಂಗೀತಗಾರರೆಂದರೆ ಸಮಾಜದಲ್ಲಿದ್ದ ಅಸಡ್ಡೆಯ ಭಾವನೆಯನ್ನು ಹೋಗಲಾಡಿಸುವ ಮನಸ್ಸು ಅವರಿಗಿತ್ತು. ಸಂಗೀತಕ್ಕೆ ತಮ್ಮ ಜೀವನವನ್ನು ಅರ್ಪಿಸಿಕೊಳ್ಳುತ್ತ, ತಂದೆ ಆರಂಭಿಸಿದ ಸಂಗೀತ ಶಾಲೆಯನ್ನು ಮುಂದುವರಿಸುವುದರಲ್ಲಿ ಜೀವನದ ಸಾರ್ಥಕತೆ ಕಂಡರು’’.

ಸಂಗೀತಕ್ಕೆ ಸಮರ್ಪಿತ ಜೀವನ

ಶ್ಯಾಮಲಾ ಭಾವೆ ಅವರನ್ನು ‘ಅಕ್ಕ’ ಎಂದೇ ಕರೆಯುತ್ತಿದ್ದೆವು. 7 ವರ್ಷದ ಮಗುವಿನಿಂದ 70 ವರ್ಷದವರವರೆಗೂ ಅವರಿಗೆ ಶಿಷ್ಯರಿದ್ದಾರೆ. ಅಭಂಗ, ಕಥಾಕಾಲಕ್ಷೇಪದಂತಹ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಯುವಕರನ್ನು ಪ್ರೇರೇಪಿಸುತ್ತಿದ್ದರು. ನಿರಂತರ ಕಾರ್ಯಕ್ರಮಗಳ ನಂತರವೂ ಅವರಲ್ಲಿ ಬಳಲಿಕೆ, ಉತ್ಸಾಹ ಕುಂದಿದ್ದನ್ನು ಕಂಡಿಲ್ಲ. ಉತ್ಸಾಹದ ಚಿಲುಮೆಯಂತಿದ್ದರು, ಅದೇ ಶಿಸ್ತು, ಸಮಯ ಪಾಲನೆ ಮುಂದುವರಿಯುತ್ತಿತ್ತು. ಮನೆಯನ್ನೇ ಸಂಗೀತ ವಸ್ತು ಸಂಗ್ರಹಾಲಯದಂತೆ ಮಾಡಿದವರು, ವಿವಾಹ ಸೇರಿ ಯಾವುದೇ ವೈಯಕ್ತಿಕ ಅಭಿಲಾಷೆಗಳಿಲ್ಲದಂತೆ ಜೀವನವನ್ನು ಸಂಗೀತಕ್ಕೆ ಸಮರ್ಪಿಸಿಕೊಂಡರು. ಕಾರ್ಯಕ್ರಮ ಆಯೋಜಕಿಯಾಗಿ, ಗುರುವಾಗಿ, ಕಲಾವಿದೆಯಾಗಿ... ಎಲ್ಲ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದವರು.

| ಆನೂರು ಅನಂತಕೃಷ್ಣ ಶರ್ಮ ಅಧ್ಯಕ್ಷ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net