

ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯನ್ನು ಜುಲೈ 1ರಿಂದ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದರು. ಆದರೀಗ, ಈ ಯೋಜನೆ ಜಾರಿ ದಿನಾಂಕ ಮುಂದೂಡುವ ಸಾಧ್ಯತೆಗಳು ನಿಚ್ಚಳವಾಗಿವೆ. ಉಚಿತ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದ್ದು, ಈ ಯೋಜನೆ ಜಾರಿಗೆ ಅಗತ್ಯವಿರುವಷ್ಟು ಅಕ್ಕಿಯನ್ನು ಒದಗಿಸಲು ನಿರಾಕರಿಸಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟದ ಮುನ್ಸೂಚನೆ ಎಂಬಂತಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣ ಎಂದೇ ಭಾವಿಸಲಾಗಿರುವ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ನೂತನ ಸರ್ಕಾರ ಹರಸಾಹಸ ಪಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ಯಾವುದೇ ಷರತ್ತು ವಿಧಿಸದೆ ಪೂರ್ಣಪ್ರಮಾಣದಲ್ಲಿ ಜಾರಿಗೆ ತಂದಿದೆ. ಇನ್ನು 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಜುಲೈ 1ರಿಂದ ಜಾರಿಗೊಳಿಸುವುದಾಗಿ ಹೇಳಿದೆ. ಆದರೆ, ಇಲ್ಲಿ ಸಾಕಷ್ಟು ಷರತ್ತುಗಳನ್ನು, ನಿರ್ಬಂಧಗಳನ್ನು ವಿಧಿಸಲು ಮುಂದಾಗಿದ್ದು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪೂರ್ಣಪ್ರಮಾಣದಲ್ಲಿ ಭರವಸೆಯನ್ನು ಈಡೇರಿಸುತ್ತಿಲ್ಲ. ಹಿಂದಿನ ತಿಂಗಳುಗಳ ಬಳಕೆಯ ಸರಾಸರಿ ಪರಿಗಣಿಸಿ ಎಷ್ಟು ಯೂನಿಟ್ ವಿದ್ಯುತ್ ಉಚಿತ ಎಂಬುದನ್ನು ನಿಗದಿಪಡಿಸಲಾಗುತ್ತಿದೆ. ಇದನ್ನು ಮೀರಿದರೆ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.
ಬಿಪಿಎಲ್, ಅಂತ್ಯೋದಯ ಪಡಿತರ ಕಾರ್ಡ್ ಇರುವವರಿಗೆ 10 ಕೆಜಿ ಅಕ್ಕಿ ಯೋಜನೆ ಜಾರಿಗೊಳಿಸಲು ಅಗತ್ಯವಿರುವಷ್ಟು ಅಕ್ಕಿ ಕೊಡದೆ ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ಅಕ್ಕಿ ಸಂಗ್ರಹ ಇದ್ದರೂ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅಕ್ಕಿ ಕೊಡಲು ಮುಂದಾಗಿಲ್ಲ; ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ವಿತರಿಸುತ್ತೇವೆ ಎಂದೂ ಸಿದ್ದರಾಮಯ್ಯ ಗುಡುಗಿದ್ದಾರೆ.
ಕಳೆದ ಬಾರಿ ಡಬಲ್ ಎಂಜಿನ್ ಸರ್ಕಾರ ಎಂದೇ ಪರಿಗಣಿಸಲಾಗುತ್ತಿದ್ದ ಸರ್ಕಾರ ರಾಜ್ಯದಲ್ಲಿತ್ತು. ಅಂದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ. ಇದರಿಂದಾಗಿ ಉಭಯ ಸರ್ಕಾರಗಳ ನಡುವೆ ಸಹಜವಾಗಿಯೇ ಹೊಂದಾಣಿಕೆ ಜಾಸ್ತಿ. ಈಗ ಕೇಂದ್ರದಲ್ಲಿ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳಿವೆ. ಅದರಲ್ಲೂ ಅವಕಾಶ ಸಿಕ್ಕಾಗಲ್ಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಟುವಾಗಿ ಟೀಕಿಸುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಸಂಘರ್ಷ, ತಕರಾರು ಉಂಟಾದಲ್ಲಿ ಅಚ್ಚರಿಪಡಬೇಕಿಲ್ಲ. ಹೀಗಾಗದಂತೆ ಆಡಳಿತದ ಜವಾಬ್ದಾರಿ ಹೊತ್ತಿಕೊಂಡಿರುವವರು ಸಂಯಮ, ವಿವೇಚನೆಯಿಂದ ಕಾರ್ಯನಿರ್ವಹಿಸುವುದು ಉತ್ತಮ. ಭಾರತವು ಒಕ್ಕೂಟ ವ್ಯವಸ್ಥೆ ಇರುವ ರಾಷ್ಟ್ರ. ಸಂವಿಧಾನದ ಅನುಸಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಭಾಯಿಸಬೇಕಾದ ವಿಷಯಗಳ ಪಟ್ಟಿಯನ್ನು ಮಾಡಲಾಗಿದೆ. ಉಭಯತ್ರರಿಗೂ ಜವಾಬ್ದಾರಿ ಇರುವ ಸಹವರ್ತಿ ಪಟ್ಟಿಯೂ ಇದೆ. ಪಕ್ಷ ರಾಜಕೀಯವನ್ನು ಬದಿಗೊತ್ತಿ ರಾಜ್ಯದ ಅಭಿವೃದ್ಧಿ, ನಾಡಿನ ಜನರ ಹಿತಾಸಕ್ತಿ ಪರಿಗಣಿಸಿ ಉಭಯ ಸರ್ಕಾರಗಳು ಪರಸ್ಪರ ಗೌರವದಿಂದ ವರ್ತಿಸಿ, ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅಪೇಕ್ಷಣೀಯ.