

ಇತಿಹಾಸದ ಪುಟಗಳಲ್ಲಿ ಸ್ನೇಹದ ಜ್ವಲಂತ ಉದಾಹರಣೆಗಳನ್ನು ಒಮ್ಮೆ ನೋಡಿದರೆ ಅನೇಕ ಪಾತ್ರಗಳು ಕಣ್ಣಮುಂದೆ ಬರುತ್ತವೆ. ಆದರೆ ಮರಣವಿಲ್ಲದ ಮಹಾಕಾವ್ಯ ಮಹಾಭಾರತದ ಪಾತ್ರಗಳನ್ನು ಸ್ಮರಿಸಿದರೆ ಕೃಷ್ಣ- ಕುಚೇಲ(ಸುದಾಮ)ರ ಜೋಡಿ ಮಾದರಿ ಎನಿಸಿದೆ. ಹಾಗೆಯೇ ಕರ್ಣ- ದುರ್ಯೋಧನರ ಸ್ನೇಹವೂ ಅನೇಕರನ್ನು ಸೆಳೆದಿದೆ. ಆದರೆ ವಿಮರ್ಶೆಯ ವಿಷಯವೇನೆಂದರೆ ಕೇವಲ ಇಬ್ಬರ ಮಧ್ಯದ ಸ್ನೇಹವೊಂದೇ ಆದರ್ಶವೇ? ಅಥವಾ ಆ ಸ್ನೇಹವು ಪರಸ್ಪರ ಇಬ್ಬರ ಜೀವನದಲ್ಲಿ ಎಷ್ಟು ಸಕಾರಾತ್ಮಕವಾಗಿ ಮುಂದೆ ಸಾಗಿಸಿತು ಎನ್ನುವುದು ಮುಖ್ಯವೋ? ಎಂದು ಒಮ್ಮೆ ಅವಲೋಕಿಸುವುದು ಅತ್ಯಗತ್ಯ.
ಒಬ್ಬ ಮೀನುಗಾರನ ಮಗನಾದ ಕರ್ಣನನ್ನು ರಾಜ್ಯಾಭಿಷೇಕ ಮಾಡಿ ಅವನನ್ನು ರಾಜನಾಗಿಸಿದ. ಕರ್ಣನ ಸಲಹೆಗಳೇ ದುರ್ಯೋಧನನಿಗೆ ಅಂತಿಮ ನಿರ್ಧಾರವಾಗಿತ್ತು. ಪ್ರಾಮಾಣಿಕವಾದ ಸ್ನೇಹ ಇವರಿಬ್ಬರದು. ಆದರೆ ಸಮಯ ಕಳೆದಂತೆ ಕರ್ಣ, ದುರ್ಯೋಧನನ ಸ್ನೇಹ ಉಪಕಾರಗಳ ಭಾರದ ಕೆಳಗೆ ಎಷ್ಟು ಸಿಕ್ಕಿಕೊಂಡನೆಂದರೆ ಆ ದಾಕ್ಷಿಣ್ಯ ಕರ್ಣನಿಂದ ಮಾಡಬಾರದ ಅನ್ಯಾಯಗಳನ್ನು, ಅಧರ್ಮಗಳನ್ನು ಮಾಡಲು ನಾಂದಿ ಹಾಡಿತು. ಪಾಂಡವರಿಗೆ ಮಾಡಿದ ಒಂದೊಂದು ಮೋಸ ಅನ್ಯಾಯಗಳ ಹಿಂದೆ ಇದ್ದದ್ದು ಇದೇ ಕರ್ಣನ ಕುಹಕನೀತಿ ಉಪದೇಶಗಳು. ಇದರ ಪರಮಾವಧಿ ಎಂದರೆ ಮಹಾಶೂರ ದಾನವೀರನೆಂದು ಹೆಸರು ಪಡೆದವ ಕರ್ಣ. ಮಹಾಸತಿ ಪಾಂಚಾಲಿಯನ್ನು ಹಿರಿಯರ ಸಭೆಯಲ್ಲಿ ಉಟ್ಟಬಟ್ಟೆಯಲ್ಲಿ ಎಳೆದು ತರಿಸಿ ಮೈಮೇಲಿನ ಸೀರೆಯನ್ನು ಸೆಳೆದ ಮಹಾಪಾಪದ ಹಿಂದಿರುವ ಕುಹಕ ಬುದ್ಧಿಯೂ ಕರ್ಣನದ್ದೇ. ಇದೆಲ್ಲ ಕೇವಲ ದುರ್ಯೋಧನನ ಸ್ನೇಹ ಅವನ ಸಂತೋಷಕ್ಕಾಗಿ ಮಾಡಿದ್ದು. ಹದಿನಾರು ವರ್ಷದ ವೀರ ಅಭಿಮನ್ಯುವನ್ನು ಗಡ್ಡದ ಮುದುಕರಾದ ಈ ಕೌರವ ವೀರರೆಲ್ಲ ಸುತ್ತುವರಿದು ಅನ್ಯಾಯದಿಂದ ಕೊಂದದ್ದು ಕರ್ಣನ ಯೋಜನೆಯೇ. ಒಬ್ಬನ ಸ್ನೇಹಕ್ಕಾಗಿ ಸ್ನೇಹಿತನ ಸಂತೋಷಕ್ಕಾಗಿ ಅನ್ಯಾಯದ ಪರಮಾವಧಿಯನ್ನು ದಾಟುವುದು ಒಂದು ಆದರ್ಶವೇ? ಇದು ಸ್ನೇಹದ ಪರಿಭಾಷೆಯೇ?
ಗುರುಕುಲವಾಸದಿಂದ ಸ್ನೇಹಿತರಾದ ಕೃಷ್ಣ ಸುದಾಮರು. ಮುಂದೊಂದು ದಿನ ಸುದಾಮ ತನ್ನ ಅತಿಯಾದ ಬಡತನ ಕಷ್ಟಗಳನ್ನು ಕೃಷ್ಣನೊಂದಿಗೆ ಹಂಚಿಕೊಂಡು ಸಹಾಯ ಕೇಳಿ ಎಂಬ ಪತ್ನಿಯ ಬೇಡಿಕೆಯಂತೆ ಕೃಷ್ಣನ ಭೇಟಿಗೆ ಬಂದ. ಅವನನ್ನು ಕಂಡಕೂಡಲೇ ಕೃಷ್ಣ ಓಡಿ ಬಂದು ಕೈಹಿಡಿದು ಕರೆದುಕೊಂಡು ಹೋಗಿ ಎಲ್ಲಿಲ್ಲದ ಆದರ ಗೌರವಗಳನ್ನು ನೀಡಿದ. ಅವನು ತಂದ ಹಿಡಿ ಅವಲಕ್ಕಿಯನ್ನು ಪರಮಾನ್ನದಂತೆ ಕಂಡ ಕೃಷ್ಣ. ಆದರೆ ಸುದಾಮ ಮಾತ್ರ ಕೊನೆವರೆಗೂ ತಾನು ಬಂದ ಕಾರಣವನ್ನು ತಿಳಿಸಲೇ ಇಲ್ಲ. ತನ್ನ ಕಷ್ಟವನ್ನು ಹೇಳಲೇ ಇಲ್ಲ. ಏಕೆಂದರೆ ತಮ್ಮ ಈ ನಿಸ್ವಾರ್ಥವಾದ ಸ್ನೇಹದ ನೆರಳಿನಲ್ಲಿ ಸ್ವಾರ್ಥದ ಕಪ್ಪು ಚುಕ್ಕೆ ಬೇಡವೆಂದು ಚಿಂತಿಸಿದ. ಪವಿತ್ರವಾದ ಸ್ನೇಹದ ನೆಪದಲ್ಲಿ ನನ್ನ ಕಾರ್ಯಸಾಧನೆಯನ್ನು ಮಾಡಿಕೊಳ್ಳುವುದು ಎಂದಿಗೂ ಪ್ರಾಮಾಣಿಕವಾದ ಸ್ನೇಹವಲ್ಲ ಎಂದು ಯೋಚಿಸಿದ. ಅಂತೆಯೇ ಕೃಷ್ಣನು ಸಹ ಸ್ನೇಹಿತನು ಬಾಯಿಬಿಟ್ಟು ಹೇಳದಿದ್ದರೂ ಅವನ ಮನದಾಳದ ಕಷ್ಟಗಳನ್ನು ಅರಿತಿದ್ದ. ಸರ್ವಸ್ವವನ್ನು ಅರಿತ ದೇವರೇ ಆದರೂ ಸ್ನೇಹದಲ್ಲಿ ಶಬ್ದಗಳಿಲ್ಲದೇ ಭಾವನೆಗಳನ್ನು ಅರಿತುಕೊಳ್ಳುವ ಆದರ್ಶ ತೋರಿಸಿದ. ಸುದಾಮನ ಎಲ್ಲಾ ಕಷ್ಟಗಳನ್ನು ಪರಿಹರಿಸಿದ. ಎಲ್ಲವನ್ನೂ ಪಡೆಯುವ ಅವಕಾಶವಿದ್ದರೂ ಸ್ನೇಹದಲ್ಲಿ ಸಮಯ ಸಾಧಕರಾಗಬಾರದು ಎಂಬುದು ಇದರ ಸಂದೇಶ.
ಪ್ರತಿಪಕ್ಷದಲ್ಲಿದ್ದು ಸರ್ಕಾರವನ್ನು ವಿರೋಧಿಸುವುದು ಸಂವಿಧಾನಿಕ ಕಾರ್ಯ. ಅದನ್ನು ಎಲ್ಲರೂ ಮಾಡಲೇಬೇಕು. ಆದರೆ ಸ್ನೇಹಿತರಾಗಿದ್ದುಕೊಂಡೇ ಜತೆಯವರ ತಪ್ಪುಗಳನ್ನು ಅನ್ಯಾಯಗಳನ್ನು ಪ್ರಶ್ನಿಸುವುದು ಮತ್ತು ಅದಕ್ಕೆ ತಡೆಗೋಡೆಯಾಗುವುದು ನಿಜವಾದ ಸ್ನೇಹ. ಇಂದು ಅನೇಕರು ರಾವಣ ಕರ್ಣನನ್ನು ನಾಯಕರನ್ನಾಗಿ ಬಿಂಬಿಸುವುದುಂಟು. ಇದು ಚಿಂತಾಜನಕ ಸ್ಥಿತಿ. ನಮ್ಮ ಹಿರಿಯರಿಗೆ ಯಾರು ಆದರ್ಶರಾದರು. ನಮಗೆ ಯಾರು ಆದರ್ಶರಾಗಿದ್ದಾರೆ ಎಂಬುವುದರಲ್ಲಿ ಅತೀ ಗಂಭೀರವಾದ ವಿಷಯ ನಮ್ಮ ಮುಂದಿನವರಿಗೆ ಯಾರು ಆದರ್ಶರಾಗಬೇಕು ಎಂಬುದು. ಆದ್ದರಿಂದ ಸ್ನೇಹ ತುಸು ನಿಷ್ಠುರವಾಗಿರಲಿ. ಸ್ನೇಹಿತನ ತಪ್ಪುಗಳನ್ನು ತಡೆದು ವಿರೋಧಿಸಿ ಅಷ್ಟೇ ಅಲ್ಲದೆ ಅವರನ್ನು ಸನ್ಮಾರ್ಗದಲ್ಲಿ ತರುವಂತಿರಲಿ. ಒಬ್ಬ ದುಶ್ಚಟದ ಸ್ನೇಹಿತನೊಂದಿಗೆ ಸೇರಿ ಇನ್ನೊಬ್ಬನೂ ತನ್ನ ಸಂಸ್ಕಾರಗಳನ್ನು ಮರೆಯುವಂತಾದರೆ ಅದೂ ಒಂದು ಸ್ನೇಹವೇ? ದುಶ್ಚಟಗಳನ್ನು ಬಿಡಿಸಿ ಅಂಥವನನ್ನು ಸಂಸ್ಕಾರವಂತನನ್ನಾಗಿ ಮಾಡುವುದೇ ಸ್ನೇಹದ ಶಕ್ತಿ. ಸ್ನೇಹ ಪರಸ್ಪರ ವ್ಯಕ್ತಿತ್ವವನ್ನು ವರ್ಧಿಸುವಂತಿರಲಿ. ತಪ್ಪನ್ನು ತಿದ್ದುವಂತೆ ನಿಷ್ಠುರವಾಗಿರಲಿ.