

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸುಮಾರು ಎರಡು ದಶಕಗಳ ಹಿಂದೆ ಪ್ರಾರಂಭಿಸಿದ ‘ನೀರಾವರಿ ಪಂಪ್ಸೆಟ್ಗಳ ವಿದ್ಯುತ್ ಸಹಾಯಧನ ಯೋಜನೆ’ ಇಂದು ರಾಜ್ಯ ಸರ್ಕಾರಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ಪಂಪ್ಸೆಟ್ ಹೊಂದಿದ್ದ ಸಣ್ಣ ರೈತರ ಸಂಖ್ಯೆ ಕಡಿಮೆ ಇದ್ದುದರಿಂದ ವರ್ಷಕ್ಕೆ ಸುಮಾರು 50 ಕೋಟಿ ರೂ. ಖರ್ಚಾಗಬಹುದು ಎಂಬ ಅಂದಾಜು ಮಾಡಿ, ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ ಬರಬರುತ್ತ ನೀರಾವರಿ ಜಮೀನುಗಳಿಗೆ ಪಂಪ್ಸೆಟ್ ಅಳವಡಿಸಿಕೊಳ್ಳುವ ರೈತರ ಸಂಖ್ಯೆ ಜಾಸ್ತಿಯಾಯಿತಲ್ಲದೆ, ಈ ಯೋಜನೆಗೆ ಅರ್ಹರಲ್ಲದಿದ್ದರೂ ಕೆಲವು ಶ್ರೀಮಂತರು ಸಹಾಯಧನ ಪಡೆಯಲು ಆರಂಭಿಸಿದರು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಸಹಾಯಧನದ ಮೊತ್ತ 700 ಕೋಟಿ ರೂ.ಗೆ ಏರಿತ್ತು. 2012ರಲ್ಲಿ 20 ಲಕ್ಷದಷ್ಟಿದ್ದ ಪಂಪ್ಸೆಟ್ಗಳು ಈಗ ಸುಮಾರು 34 ಲಕ್ಷ ಆಗಿವೆ. ಪ್ರತಿ ವರ್ಷ ಪಂಪ್ಸೆಟ್ಗಳ ಸಂಖ್ಯೆ ಸುಮಾರು 1.2 ಲಕ್ಷದಷ್ಟು ಏರಿಕೆಯಾಗುತ್ತಿದೆ. 2016ರಲ್ಲಿ 10,118 ಕೋಟಿ ರೂ.ನಷ್ಟಿದ್ದ ಸಬ್ಸಿಡಿ ಮೊತ್ತ 2023ರ ವೇಳೆಗೆ ಶೇ. 121ರಷ್ಟು ಏರಿಕೆಯಾಗಿ 22,387 ಕೋಟಿ ರೂ.ಗೆ ತಲುಪಿದೆ. 5 ಎಕರೆಗಿಂತ ಕಡಿಮೆ ಜಮೀನಿರುವ ರೈತರು ಮಾತ್ರ ಐಪಿ ಸೆಟ್ ಸಬ್ಸಿಡಿಗೆ ಅರ್ಹರಾಗಿದ್ದು, ಅಂಥವರ ಸಂಖ್ಯೆ 23.35 ಲಕ್ಷದಷ್ಟಿದೆ. ಉಳಿದ ಸುಮಾರು 10 ಲಕ್ಷಕ್ಕಿಂತ ಹೆಚ್ಚು ಜನರು ಈ ಸಬ್ಸಿಡಿಗೆ ಅರ್ಹರಲ್ಲ. ಇದರಿಂದಾಗಿ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ಅನುದಾನ ಶ್ರೀಮಂತರ ಪಾಲಾಗುತ್ತಿದೆ ಎಂಬುದು ಸರ್ಕಾರದ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.
ಮೇಲ್ನೋಟಕ್ಕೆ ಈ ಯೋಜನೆಯಿಂದ ಹೆಚ್ಚೆಚ್ಚು ರೈತರಿಗೆ ಸಹಾಯವಾಗುತ್ತಿದೆ ಎಂದು ತೋರುತ್ತದೆಯಾದರೂ ವಾಸ್ತವದಲ್ಲಿ ಸಹಾಯಧನದ ಲಾಭವು ಒಂದಕ್ಕಿಂತ ಹೆಚ್ಚು ಐಪಿ ಸೆಟ್ಗಳನ್ನು ಹೊಂದಿರುವ ಸ್ಥಿತಿವಂತರ ಪಾಲಾಗುತ್ತಿರುವುದು ಕಟು ಸತ್ಯ. 4.32 ಲಕ್ಷ ಐಪಿ ಸೆಟ್ಗಳನ್ನು ಹೊಂದಿರುವ 2.7 ಲಕ್ಷಕ್ಕಿಂತ ಹೆಚ್ಚು ಎಪಿಎಲ್ ಕುಟುಂಬಗಳು ಈ ಸಬ್ಸಿಡಿ ಪಡೆಯುತ್ತಿವೆ. ಇದು ಆಳುವವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ರೈತರ ವಿಷಯ ಸೂಕ್ಷ್ಮವಾದದ್ದು. ಎಲ್ಲ ರಾಜಕೀಯ ಪಕ್ಷಗಳೂ ತಾವು ರೈತರ ಪರ ಎಂದು ತೋರಿಸಿಕೊಳ್ಳುವುದಕ್ಕೇ ಆದ್ಯತೆ ನೀಡುತ್ತವೆ. ರೈತರ ಪರವಾಗಿರುವುದು ತಪ್ಪೇನಲ್ಲ. ಆದರೆ ಸರ್ಕಾರದ ಸಹಾಯಧನವು ನಿಜವಾಗಿಯೂ ತಲುಪಬೇಕಾದ ಬಡ ರೈತರಿಗೇ ತಲುಪಬೇಕಾದದ್ದು ನ್ಯಾಯ. ವಿರೋಧ ಪಕ್ಷಗಳು ಕೂಡ ಈ ವಿಷಯದಲ್ಲಿ ಸುಮ್ಮನಿರುವುದು ನಿಜಕ್ಕೂ ದುರದೃಷ್ಟಕರ. ರಾಜಕೀಯ ಲಾಭಕ್ಕಾಗಿ ಮೂಕ ಪ್ರೇಕ್ಷಕರಾಗಿರುವುದು ಆತ್ಮವಂಚನೆ. ಎಲ್ಲ ಐಪಿ ಸೆಟ್ಗಳ ಸಬ್ಸಿಡಿಗೆ ಮಾಲೀಕರ ಆಧಾರ್ ಜೋಡಣೆ ಮಾಡಬೇಕೆಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಆದೇಶಿಸಿತ್ತು. ಆದರೆ ಅದನ್ನು ಜಾರಿಗೊಳಿಸಲು ಯಾವ ಸರ್ಕಾರದಿಂದಲೂ ಸಾಧ್ಯವಾಗಿಲ್ಲ. ಸೌರಶಕ್ತಿಚಾಲಿತ ಐಪಿ ಸೆಟ್ಗಳ ಬಳಕೆಯನ್ನು ವ್ಯಾಪಕವಾಗಿ ಉತ್ತೇಜಿಸುವ ಮೂಲಕ ರಾಜ್ಯ ಸರ್ಕಾರ ಈ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಇದರಿಂದ ರಾಜ್ಯದ ವಿದ್ಯುತ್ ಉತ್ಪಾದನಾ ವಲಯದ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ದೀರ್ಘಾವಧಿ ಸಹಾಯಧನ ನೀಡಿಕೆ ಸಮಸ್ಯೆಯಿಂದ ದೂರವುಳಿದಂತಾಗುತ್ತದೆ. ಈ ಬಗ್ಗೆ ಸರ್ಕಾರ ತಜ್ಞರ ಜತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ.