ಸಮ್ಮೇಳನಗಳು ಕನ್ನಡದ ಅಸ್ಮಿತೆ ಉಳಿಸಲಿ; ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ

Sahithya Sammelana
Published on

ನಾಲ್ವಡಿ ಕೃಷ್ಣರಾಜ ಒಡೆಯರ್-ಕೆಂಪರಾಜಮ್ಮಣಿ ಪ್ರಧಾನ ವೇದಿಕೆ

ಕನ್ನಡದ ಕಲೆ, ಜಾನಪದ, ಭಾಷೆ, ಉದ್ಯೋಗದ ಜತೆಗೆ ಕನ್ನಡದ ಅಸ್ಮಿತೆಗೆ ಉಂಟಾಗಿರುವ ಸಮಸ್ಯೆಗಳನ್ನು ಗುರುತಿಸಿ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಸಮ್ಮೇಳನವೂ ಆ ದಿಕ್ಕಿನಲ್ಲಿ ಕೆಲಸ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಶುಕ್ರವಾರ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ. ಅವರಿಗೆ ಕನ್ನಡ ಕಲಿಸಿ. ಕನ್ನಡ ಉಳಿಸಿ, ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.

ವ್ಯಾವಹಾರಿಕ ಉದ್ದೇಶಕ್ಕೆ ಎಷ್ಟೇ ಭಾಷೆಗಳನ್ನು ಕಲಿತರೂ ಹೃದಯದ ಭಾಷೆ ನಮ್ಮ ಮಾತೃ ಭಾಷೆಯೇ ಆಗಿರುತ್ತದೆ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಪ್ರತಿನಿಧಿಸುತ್ತದೆ. ವಿಶ್ವವೇ ಜಾಗತಿಕ ಹಳ್ಳಿಯಾಗಿ ಪರಿವರ್ತಿತವಾಗಿರುವ ಈ ಸಂದರ್ಭದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ‘ನುಡಿ ಬಿಟ್ಟರೆ, ನಾಡು ಬಿಟ್ಟಂತೆ’, ‘ಭಾಷೆಗೇಡಿ, ದೇಶಗೇಡಿಯೂ ಆಗುತ್ತಾನೆ’ ಎಂದು ಕುವೆಂಪು ಹೇಳಿದ್ದಾರೆ. ಓದು-ಬರಹ, ಭಾಷೆ-ಬರವಣಿಗೆ ಎಲ್ಲವೂ ಪರಕೀಯವಾದರೆ ನಮ್ಮ ಮಾತೃಭಾಷೆಗೆ ಅಪಾಯ ತಪ್ಪಿದ್ದಲ್ಲ. ಯಾವುದೇ ಭಾಷೆಯ ಅಳಿವು ಆ ಭಾಷಾ ಸಮುದಾಯದ ಅಳಿವೂ ಆಗಿರುತ್ತದೆ. ಭಾಷೆ ಬೆಳೆಯುವುದು ಉಳಿಯುವುದು ಅದನ್ನು ಬಳಸಿದಾಗ ಮಾತ್ರ. ಬಳಸದೇ ಹೋದರೆ ಭಾಷೆಯ ಅಸ್ತಿತ್ವ ಹಾಗೂ ಬೆಳವಣಿಗೆ ಎರಡಕ್ಕೂ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಿಎಂ ಡಿ.ದೇವರಾಜ ಅರಸು ಅವಧಿಯಲ್ಲಿ 1973ರ ನ.1 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ನಾಡಿಗೆ ಕರ್ನಾಟಕ ಹೆಸರು ನಾಮಕರಣಗೊಂಡು 50 ವರ್ಷಗಳು ತುಂಬಿದ ನೆನಪಿಗಾಗಿ ಸುವರ್ಣ ಸಂಭ್ರಮವನ್ನು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೊಷ ವಾಕ್ಯದಡಿ ಇಡೀ ವರ್ಷ ವಿಶೇಷ ಕಾರ್ಯಕ್ರಮಗಳ ಮೂಲಕ ಆಚರಿಸಲಾಗಿದೆ. ಕರ್ನಾಟಕ ಎಂದು ನಾಮಕರಣ ಮಾಡಲು ಕಾರಣೀಭೂತರಾದ ದೇವರಾಜ ಅರಸು ಪ್ರತಿಮೆಯನ್ನು ಮೈಸೂರಿನಲ್ಲಿ ಸ್ಥಾಪಿಸಲಾಗುತ್ತಿದೆ. ಏಕೀಕರಣ ಚಳವಳಿ ಸಂದರ್ಭದಲ್ಲಿ ಮಹತ್ತರ ಪಾತ್ರ ವಹಿಸಿದ ರಂಜಾನ್ ಸಾಬ್, ದೊಡ್ಡ ಮೇಟಿ ಅಂದಾನಪ್ಪ, ಧಾರವಾಡದ ಅದರಗುಂಚಿ ಶಂಕರೇಗೌಡರ ಸ್ಮಾರಕಗಳನ್ನು ನಿರ್ವಿುಸಲು ಕ್ರಮವಹಿಸಲಾಗಿದೆ. ಕರ್ನಾಟಕವು ಸಾಹಿತ್ಯಕವಾಗಿ ಸಮೃದ್ಧವಾದ ಇತಿಹಾಸವನ್ನು ಹೊಂದಿದೆ. ಕನ್ನಡದ ಎಂಟು ಘನತೆವೆತ್ತ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹೆಮ್ಮೆಯ ಪರಂಪರೆ ಮುಂದುವರಿಸಬೇಕು ಎಂದು ಆಶಿಸುತ್ತೇನೆ ಎಂದರು.

Mandya Kannada sammelana

ಮಂಡ್ಯ ಇತಿಹಾಸ ಸ್ಮರಿಸಿದ ಸಿಎಂ: ಮಂಡ್ಯದ ಈ ಸಮ್ಮೇಳನಕ್ಕೆ ನಾಡಿನ ಮೂಲೆ-ಮೂಲೆಗಳಿಂದ ಹಾಗೂ ದೇಶ-ವಿದೇಶಗಳಿಂದಲೂ ಸಾಹಿತ್ಯದ ಅಭಿಮಾನಿಗಳು ಬಂದಿದ್ದೀರಿ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ನಿಜಾರ್ಥದಲ್ಲಿ ಕನ್ನಡದ ಹಬ್ಬವೇ ಆಗಿದೆ. ಕಾವೇರಿ ಕಣಿವೆಯಲ್ಲಿರುವ ಈ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತಿವೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಸದಾಕಾಲಕ್ಕೂ ಮೆರೆಸಿರುವ ಮಂಡ್ಯ ಜಿಲ್ಲೆ, ಅಪ್ಪಟ ಕನ್ನಡದ ನೆಲ. ಭತ್ತದ ಕಣಜ, ಸಕ್ಕರೆ ನಾಡು ಎಂದೇ ಜನಜನಿತ. ಜಗತ್ತಿನ ಯಾವ ಮೂಲೆಯ ಭಾಷಿಕರೇ ಬಂದರೂ ಅವರಿಗೆ ಒಂದೇ ತಿಂಗಳಲ್ಲಿ ಕನ್ನಡವನ್ನು ಕಲಿಸುತ್ತೇವೆ ಎಂಬ ಭಾಷಾಭಿಮಾನ ಮತ್ತು ದಿಟ್ಟತನ ಮಂಡ್ಯದ ಜನರದ್ದು ಎಂದು ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದರು. ಮಂಡ್ಯದ ಸ್ಪೂರ್ತಿಯಾದ ಎಚ್.ಕೆ.ವೀರಣ್ಣಗೌಡರು, ಕೆ.ವಿ. ಶಂಕರೇಗೌಡರು, ಎಸ್.ಸಿ. ಮಲ್ಲಯ್ಯ, ಜಿ. ಮಾದೇಗೌಡರು, ಎಂ.ಸಿ. ಬಂದೀಗೌಡರು, ಅಂಬರೀಶ್ ಮತ್ತು ಇತ್ತೀಚೆಗೆ ನಿಧನರಾದ ಎಸ್.ಎಂ ಕೃಷ್ಣ ಮುಂತಾದವರನ್ನು ಮರೆಯಬಾರದು ಎಂದರು.

ಉತ್ಪನ್ನಗಳ ಮೇಲೆ ಕನ್ನಡ ಕಡ್ಡಾಯ: ಕನ್ನಡ ರಾಜ್ಯೋತ್ಸವದಂದು ಘೊಷಿಸಿರುವಂತೆ ರಾಜ್ಯದ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಉತ್ಪಾದನೆಯಾಗುತ್ತಿರುವ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಮೂದಿಸುವ ಬಗ್ಗೆ ಹಾಗೂ ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ನಾಡಿನ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿ ಇತಿಹಾಸಗಳನ್ನು ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕ್ರಮವಹಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಬಗ್ಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನಸಭೆಯಲ್ಲಿ ಮುಂದೆ ಬರುವ ವಿಧೇಯಕಗಳು ಕನ್ನಡದಲ್ಲಿ ಇದ್ದರೆ ಕನ್ನಡ ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ. ಈ ಕುರಿತು ನಮ್ಮ ಎಲ್ಲ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಸರ್ವಾಧ್ಯಕ್ಷರ ಮೆರವಣಿಗೆ ಅದ್ದೂರಿ: ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರ ಮೆರವಣಿಗೆಗೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ವಿಶ್ವೇಶ್ವರಯ್ಯ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿದ್ದ ವೇದಿಕೆಯಲ್ಲಿ ಮೊದಲಿಗೆ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಸೇರಿ ಇತರ ಗಣ್ಯರು ಅನಾವರಣಗೊಳಿಸಿದರು. ನಂತರ ಗೊ.ರು.ಚ. ಅವರನ್ನು ಕಾವೇರಿ ಮಾತೆಯ ಕಲಾಕೃತಿಯೊಂದಿಗೆ ಸಿಂಗರಿಸಲಾಗಿದ್ದ ರಥದಲ್ಲಿ ಗಣ್ಯರು ಕೂರಿಸುವುದರೊಂದಿಗೆ ರಥಯಾನ ಆರಂಭಗೊಂಡಿತು. ದಾರಿಯುದ್ದಕ್ಕೂ ಕಲಾ ಮೇಳದೊಂದಿಗೆ ಕನ್ನಡ ಪರ ಘೋಷಗಳು ಮೊಳಗಿದವು. ಪೊಲೀಸ್ ಬ್ಯಾಂಡ್ ನಾದಕ್ಕೆ ನೆರೆದಿದ್ದ ಜನಸ್ತೋಮ ತಲೆದೂಗಿತು. ಸಾವಿರಾರು ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಮೆರವಣಿಗೆಗೆ ಜೋಷ್ ತುಂಬಿದರು.

Go ru cha

ಮಕ್ಕಳಿಗೆ 3-ಎಚ್ ಸೂತ್ರ: ನನಗೆ ತಿಳಿದ ಮಟ್ಟಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳಿಗೆ 3-ಎಚ್ ಸೂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ. ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂದು ಕರೆಯಲಾಗುವ ಈ ಸೂತ್ರಗಳು ಮಿದುಳು, ಕರುಣೆ ಮತ್ತು ಕೌಶಲವೂ ಸೇರಿ ರೂಪುಗೊಂಡ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಾಗಿದೆ. ಬುದ್ಧ ಇದನ್ನು ಯಶಸ್ವಿಯಾಗಿಸಿದ್ದ. ಗಾಂಧಿ ಅವರೂ ಇದನ್ನೇ ಹೇಳಿದ್ದರು. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಳೆಯ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೇ ಬಾಯಿ ಪಾಠ ಮಾಡುವ ಉಪಯೋಗವಿಲ್ಲದ ವ್ಯವಸ್ಥೆ ಇದೆ. ಕನ್ನಡ ಉಳಿಯಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೆಳೆಯಬೇಕಾಗಿದೆ. ಹೀಗಾದಾಗ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಕನ್ನಡವು ಬೆಳೆಯುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ದ್ವೇಷ, ಕ್ಲೇಶ ತೊಲಗಿಸಲು ಸಮ್ಮೇಳನ ಪೂರಕ: ನಮ್ಮ ನಡುವೆ ಇರುವ ದ್ವೇಷ, ಕ್ಲೇಶ, ದೋಷಗಳನ್ನು ಹೊಡೆದೋಡಿಸಲು ಸಾಹಿತ್ಯ ಸಮ್ಮೇಳನ ಪೂರಕವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ಸಮ್ಮೇಳನದ ಉದ್ಘಾಟನಾ ಕಾಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ರಾಷ್ಟ್ರಕವಿ ಕುವೆಂಪು ಹೇಳಿದಂತೆ ಇಂದು ಕನ್ನಡ ಡಿಂಡಿಮವ ಬಾರಿಸಬೇಕಾದ ಅನಿವಾರ್ಯತೆಯಿದೆ. ಆ ಮೂಲಕ ಸತ್ತಂತಿಹರನು ಬಡಿದೆಚ್ಚರಿಸಬೇಕಿದೆ ಎಂದರು. ಭಾಷಾಭಿಮಾನ, ಭಾಷೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಇಂತಹ ಸಮ್ಮೇಳನಗಳು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಇಂದಿನ ಕಾಲಘಟ್ಟದಲ್ಲಿ ಕನ್ನಡಕ್ಕೆ ಎದುರಾಗಿರುವ ಸಂಕಷ್ಟಗಳನ್ನು ಎದುರಿಸಲೇಬೇಕಿದೆ. ಇದಕ್ಕೆ ಭಾಷಾ ಪ್ರೇಮ ಅವಶ್ಯ ಎಂದು ಅಭಿಪ್ರಾಯಪಟ್ಟರು.

18 ದೇಶಗಳಿಂದ ಬಂದ ಕನ್ನಡಿಗರು: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಆಗಮಿಸಿದ್ದು ವಿಶೇಷವಾಗಿತ್ತು. ಕಸಾಪ ಆಹ್ವಾನದ ಮೇರೆಗೆ 18 ದೇಶಗಳಿಂದ ಸುಮಾರು 200ಕ್ಕೂ ಹೆಚ್ಚು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡ ಭಾಷಾ ಪ್ರೇಮ ಮೆರೆದರು.

Auto Procession

ಧ್ವಜಾರೋಹಣದ ಮೂಲಕ ಚಾಲನೆ: ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಪ್ರಧಾನ ವೇದಿಕೆ ಮುಂಭಾಗ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ರಾಷ್ಟ್ರಧ್ವಜವನ್ನು ಆರೋಹಣ ಮಾಡಿದರು. ತಕ್ಷಣ ಮಂಡ್ಯ ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿ ಗೌರವ ಸೂಚಿಸಿತು. ಬಳಿಕ ಪರಿಷತ್​ನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹಾಗೂ ನಾಡಧ್ವಜವನ್ನು ಕಸಾಪ ಮಂಡ್ಯ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಆರೋಹಣ ಮಾಡಿದರು.

ಕನ್ನಡಕ್ಕೆ ಅನುವಾದ ಅತಿ ದೊಡ್ಡ ತುರ್ತು: ಭಾಷೆಗಳಿಂದ ಅನುವಾದಗಳು ಹೆಚ್ಚೆಚ್ಚು ಆಗುತ್ತಿವೆ. ನನಗೆ ತಿಳಿದ ಮಟ್ಟಿಗೆ ಈಗಿನ ಅತಿ ದೊಡ್ಡ ತುರ್ತು ಯಾವುದೆಂದರೆ ಜಗತ್ತಿನ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವುದಾಗಿದೆ. ಆ ಮೂಲಕ ಜ್ಞಾನವನ್ನು ವಿಸ್ತರಿಸುವ ಕೆಲಸ ಮಾಡಬೇಕಾಗಿದೆ. ಜತೆಗೆ ವೈಜ್ಞಾನಿಕ, ವೈಚಾರಿಕ ಸಾಹಿತ್ಯದ ಮೂಲಕ ದೇಶಕ್ಕೆ ಬಂದೊದಗಿರುವ ಕೇಡುಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಕವಿ ಕುವೆಂಪು ಮಾಡಿರುವ ಸ್ಮರಣೀಯ ಕೆಲಸಗಳನ್ನು ಈ ಸಮ್ಮೇಳನವು ರ್ಚಚಿಸಬೇಕೆಂದು ಮನವಿ ಮಾಡುತ್ತೇನೆ. ಹಾಗೆಯೇ ಈ ಸಮ್ಮೇಳನವು ಮಾಮೂಲಿ ಸಮ್ಮೇಳನವಾಗದೆ ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕುವ ಸಮ್ಮೇಳನವಾಗಲಿ ಎಂದು ಬಯಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಿರೀಕ್ಷೆಗೂ ಮೀರಿ ಜನಸಾಗರ: ಸಮ್ಮೇಳನ ಸಲುವಾಗಿ ಮಂಡ್ಯಕ್ಕೆ ಶುಕ್ರವಾರ ಜನಸಾಗರವೇ ಹರಿದು ಬಂತು. ಎಲ್ಲಿ ನೋಡಿದರಲ್ಲಿ ಜನ.. ಜನ.. ಜನ.. ಆದು ಅಕ್ಷರಶಃ ಕನ್ನಡಿಗರ ಜಾತ್ರೆಯೇ ಆಗಿತ್ತು. ಸಮ್ಮೇಳನದಲ್ಲಿ ಭಾಗಿಯಾಗುವ ಸರ್ಕಾರಿ ನೌಕರರಿಗೆ ಒಒಡಿ ನೀಡಲಾಗಿತ್ತು. ಹಾಗಾಗಿ, ಸಮ್ಮೇಳನದ ಮೊದಲ ದಿನ ಸಾಹಿತ್ಯಾಸಕ್ತರ ಜತೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಕೇಂದ್ರ ಸಚಿವ ಎಚ್​ಡಿಕೆ ಗೈರು: ಮಂಡ್ಯ ಸಂಸದ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೆಸರನ್ನು ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ತಮ್ಮದೇ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹತ್ವದ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೂ ಅವರು ಗೈರಾದರು.

ಕೃಷ್ಣಗೆ ಸಂತಾಪ: ಇತ್ತೀಚೆಗೆ ನಿಧನರಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಅರಂಭದಲ್ಲಿ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.

Ladies Dollu Kunitha
ಸರ್ವಾಧ್ಯಕ್ಷ ಗೊರುಚ ಹಕ್ಕೊತ್ತಾಯಗಳು

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೊ.ರು. ಚನ್ನಬಸಪ್ಪ ಅಧ್ಯಕ್ಷರ ಭಾಷಣದಲ್ಲಿ ಪ್ರಮುಖ 21 ಹಕ್ಕೊತ್ತಾಯಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.

1 ಪ್ರಾಥಮಿಕ 1ನೇ ತರಗತಿಯಿಂದ 10ನೇ ತರಗತಿ ಯವರೆಗೆ ಬೋಧನೆಯಲ್ಲಿ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಯಾವ ಕಾರಣದಿಂದಲೂ ಬೇರಾವ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಕೂಡದು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲಿ ಕೂಡಲೇ ನಿಲ್ಲಿಸಬೇಕು. 2 ಅಗತ್ಯವೆನಿಸಿರುವ ಇಂಗ್ಲಿಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವ್ಯಯದಲ್ಲಿ ಕನಿಷ್ಠ ಶೇ.15 ಭಾಗ ಶಿಕ್ಷಣಕ್ಕೆ ಮೀಸಲಿರಬೇಕು. 3 ಕಳೆದ ಅನೇಕ ದಶಕಗಳಿಂದ ನನೆಗುದಿಗೆ ಬಿದ್ದಿರುವ ಸರೋಜಿನಿ ಮಹಿಷಿ ವರದಿಯನ್ನು ಕೂಡಲೇ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು. ಅನುಷ್ಠಾನದ ಮೇಲ್ವಿಚಾರಣೆ ಹೊಣೆಗಾರಿಕೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಬೇಕು. ಸಾರ್ವಜನಿಕವಿರಲಿ, ಖಾಸಗಿಯಿರಲಿ ಉದ್ಯೋಗಾವಕಾಶಗಳಲ್ಲಿ ವಿಶೇಷ ಅರ್ಹತೆಯ ಉನ್ನತ ಹುದ್ದೆಗಳ ಹೊರತಾಗಿ ಸಿ ಮತ್ತು ಡಿ ವರ್ಗದ ಹುದ್ದೆಗಳನ್ನು ಪೂರ್ಣವಾಗಿ ಕನ್ನಡಿಗರಿಗೇ ಮೀಸಲಿಡಬೇಕು. ಕಾಲ-ಕಾಲಕ್ಕೆ ಉದ್ಯೋಗ ಮಾಹಿತಿ ದೊರೆಯುವಂತಾಗಬೇಕು. 4 ಕನ್ನಡ ವಿವಿ ಮತ್ತು ಜಾನಪದ ವಿವಿಗಳು ಅನುಭವಿಸು ತ್ತಿರುವ ಹಣಕಾಸು ಮತ್ತು ಬೋಧನಾ ಸಿಬ್ಬಂದಿ ಕೊರತೆಯನ್ನು ನಿವಾರಿಸಲು ಕೂಡಲೇ ಕ್ರಮಕೈಗೊಳ್ಳಬೇಕು. 5 ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವನ್ನು ಸ್ವತಂತ್ರ ಸ್ವಾಯತ್ತ ಕೇಂದ್ರವನ್ನಾಗಿ ಬೆಳೆಸಲು ಮತ್ತು ಕೇಂದ್ರದ ನೆರವನ್ನು ಪಡೆಯಲು ಅಗತ್ಯ ವ್ಯವಸ್ಥೆ ಮಾಡಬೇಕು. 6 ಅಪಾರ ಸಂಭಾವ್ಯ ಸಾಮರ್ಥ್ಯವಿರುವ ಪ್ರವಾಸೋದ್ಯಮವನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ದೃಷ್ಟಿಯಿಂದಷ್ಟೇ ಅಲ್ಲದೆ, ಆದಾಯ ಮತ್ತು ಉದ್ಯೋಗಾವಕಾಶ ದೃಷ್ಟಿಯಿಂದಲೂ ಅದನ್ನು ವಿಸ್ತರಣೆ ವಲಯವನ್ನಾಗಿ ಅಭಿವೃದ್ಧಿಗೊಳಿಸಬೇಕು. 7 ಕೈಗಾರಿಕೋದ್ಯಮಗಳ ಸ್ಥಾಪನೆ ಎಲ್ಲ ಜಿಲ್ಲೆಗಳಿಗೂ ಹಂಚಿಕೆಯಾಗಬೇಕು. ಯಾವುದೇ ಉದ್ಯಮವಿರಲಿ, ಅಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶದ ಕಟ್ಟುನಿಟ್ಟಿನ ಷರತ್ತು ವಿಧಿಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. 8 ಸರ್ಕಾರದ ಸಚಿವಾಲಯ ಕಚೇರಿಗಳ ಹೊರತಾಗಿ, ಉಳಿದ ಇಲಾಖೆಗಳ ನಿರ್ದೇಶನಾಲಯ ಕಚೇರಿಗಳನ್ನು ಬೇರೆ ಬೇರೆ ಜಿಲ್ಲಾ ಕೇಂದ್ರಗಳಿಗೆ ವರ್ಗಾಯಿಸಿ ಬೆಂಗಳೂರಿನ ಒತ್ತಡವನ್ನು ತಪ್ಪಿಸಬೇಕು. 9 ಶಿಕ್ಷಣ ಮಾಧ್ಯಮ ಅಂತಾರಾಜ್ಯ ಗಡಿ, ಜಲ ಮತ್ತು ವಲಸೆ ಸಮಸ್ಯೆಗಳನ್ನು ಪರಿಹರಿಸಲು ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. 10 ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಕಿತ್ತೂರು, ಕಲ್ಯಾಣ ಕರ್ನಾಟಕದ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕಾಲಬದ್ಧ ಕ್ರಮಕೈಗೊಳ್ಳಬೇಕು. 11 ಬಸವಣ್ಣನವರನ್ನು ರಾಜ್ಯದ ‘ಸಾಂಸ್ಕೃತಿಕ ನಾಯಕ’ ಎಂದು ಘೊಷಿಸಿರುವ ಮತ್ತು ಬಸವ ಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ವಿುಸುತ್ತಿರುವ ರಾಜ್ಯ ಸರ್ಕಾರ, 12ನೇ ಶತಮಾನದ ಶರಣರ ಕ್ಷೇತ್ರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ಕಾಗಿ ಒಂದು ಸ್ವಾಯತ್ತ ಪ್ರಾಧಿಕಾರ ರಚಿಸಬೇಕು. ಈಗಾಗಲೇ ಆಶ್ವಾಸನೆ ನೀಡಿರುವಂತೆ ಮುಂದಿನ ಶೈಕ್ಷಣಿಕ ವರ್ಷದಿಂದ ವಚನ ವಿವಿ ಆರಂಭಿಸಬೇಕು. 12 ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು, ಕಚೇರಿಗಳು, ಅಂಗಡಿ- ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರುವುದು ಕಡ್ಡಾಯವಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. 13 ಪರಿಸರದ, ವಿಶೇಷವಾಗಿ, ಪಶ್ಚಿಮಘಟ್ಟಗಳ ರಕ್ಷಣೆಗೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕು. ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು. 14 ಜ್ಞಾನಪ್ರಸಾರದ ಕೇಂದ್ರದಂತಿರುವ ಗ್ರಂಥಾಲಯ ಪೋಷಣೆಗೆ ಪೂರ್ಣ ಗಮನಕೊಡಬೇಕು. ಗ್ರಂಥಗಳ ಸಗಟು ಕೊಳ್ಳಿಕೆ ಪ್ರತಿವರ್ಷ ತಪ್ಪದೇ ನಡೆಯ ಬೇಕು. ಗ್ರಂಥಾಲಯ ತೆರಿಗೆಯಿಂದ ಸಂಗ್ರಹವಾದ ಹಣವನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸಬೇಕು. 15 ಹಿರಿಯ ಸಾಹಿತಿಗಳ ಸಮಗ್ರ ಸಾಹಿತ್ಯ ಪ್ರಕಟಣೆ ಒಂದು ಒಳ್ಳೆಯ ಯೋಜನೆಯಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು. 16 ಆಡಳಿತದಲ್ಲಿ ಕನ್ನಡ ಬಳಕೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ಕನ್ನಡ ಲಿಪಿಯನ್ನು ಆಧುನಿಕ ತಂತ್ರ ವಿಧಾನಗಳಿಗೆ ಹೊಂದಿಸುವ ಕೆಲಸ ತ್ವರಿತವಾಗಿ ನಡೆಯಬೇಕು. ಯಾಂತ್ರಿಕ ಬುದ್ಧಿಮತ್ತೆ ತಂತ್ರದ ಬಳಕೆ ಹೆಚ್ಚಾಗಬೇಕು. 17 ಸಾಹಿತ್ಯ-ಸಂಸ್ಕೃತಿ ಸಂಬಂಧದ ಸಂಘ-ಸಂಸ್ಥೆ ಗಳಿಗೆ ಉದಾರ ಧನ ಸಹಾಯ ದೊರಕಿಸಬೇಕು. 18 ಯಾವುದೇ ಕಾರಣಕ್ಕೆ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಕೊಡಬಾರದು. 19 ಕನ್ನಡದ ಕೃತಿಗಳನ್ನು ಅನ್ಯಭಾಷೆಗೆ ಅನುವಾದಿಸಿ ಪ್ರಕಟಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆಯಬೇಕು. ಇದಕ್ಕಾಗಿ ಭಾಷಾ ಪ್ರಾಧಿಕಾರಕ್ಕೆ ಅಗತ್ಯ ನೆರವು ಒದಗಿಸಬೇಕು. 20 ಕನ್ನಡ ಸಾಹಿತ್ಯ ಪರಿಷತ್ತು ಒಂದು ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಅದು ನಡೆಸುವ ಇಂತಹ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವಿಳಂಬ ಮಾಡದೆ ಅನುಷ್ಠಾನಗೊಳಿಸಬೇಕು. 21 ಕನ್ನಡ ಸಾಹಿತ್ಯ ಪರಿಷತ್ ಶಾಲಾ ಶಿಕ್ಷಕರಿಗೆ ಸಾಹಿತ್ಯ-ಸಂಸ್ಕೃತಿಗಳ ಬಗೆಗೆ ನಿಯತಕಾಲಿಕ ಶಿಬಿರಗಳನ್ನು ನಡೆಸಿ, ಅವರಲ್ಲಿ ಸಾಹಿತ್ಯದ ಅಧ್ಯಯನಾಸಕ್ತಿ ಬೆಳೆಸಬೇಕು.

ಎಲ್ಲರೂ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಾರೆ. ಅದರೆ ನಾನು ದಶಕಗಳ ಕಾಲ ಮಾಡಿದ ಅಧ್ಯಯನ, ಸಂಶೋಧನೆಯಿಂದ ಕಂಡುಕೊಂಡಿದ್ದೇನೆಂದರೆ ಕನ್ನಡ ಐದು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡಿಗರು ಸಮಾಜಮುಖಿಯಾಗಿ ಚಿಂತಿಸಬೇಕು. ವೈಚಾರಿಕ ಸಾಹಿತ್ಯದ ಮೂಲಕ ಜಾಗೃತಿ ಮೂಡಬೇಕು.

| ಡಾ.ಚಂದ್ರಶೇಖರ ಕಂಬಾರ ಜ್ಞಾನಪೀಠ ಪುರಸ್ಕೃ ಸಾಹಿತಿ

ನಾವು ಬೇರೆ ಭಾಷೆಯನ್ನು ದ್ವೇಷಿಸಿ ಕನ್ನಡವನ್ನು ಬೆಳೆಸಲು ಸಾಧ್ಯವಿಲ್ಲ. ಗಡಿ ಭಾಗದಲ್ಲಿರುವವರು ನೆರೆಯ ಭಾಷೆಯನ್ನೂ ಗೌರವಿಸಬೇಕು. ಮಂಡ್ಯದ ಗಂಡು ಎಂದರೆ ನಟ ಅಂಬರೀಷ್ ಮಾತ್ರವಲ್ಲ. ಇಲ್ಲಿರುವ ಪ್ರತಿಯೊಬ್ಬರಲ್ಲೂ ವಿಶೇಷ ಶಕ್ತಿಯಿದೆ. ಇಲ್ಲಿನ ಜನರ ಕನ್ನಡ ಪ್ರೀತಿ ವಿಶೇಷವಾದದ್ದು.

| ಯು.ಟಿ.ಖಾದರ್ ವಿಧಾನಸಭೆ ಸ್ಪೀಕರ್

ಎಲ್ಲಿ ಕೃಷಿ ಬೇರು ಗಟ್ಟಿಯಾಗಿರುತ್ತದೋ ಅಲ್ಲಿ ಜನಪದ ಹಾಗೂ ಭಾಷೆಯೂ ಗಟ್ಟಿಯಾಗಿ ನೆಲೆಯೂರಿರುತ್ತದೆ. ಜನಪದ ನಮ್ಮೆಲ್ಲ ಸಂಸ್ಕೃತಿಗಳ ತಾಯಿಬೇರು. ಮಂಡ್ಯ ಜಿಲ್ಲೆ ಸಾಹಿತ್ಯ, ಜನಪದ, ಕಲೆಗಳ ತವರೂರು. ಶ್ರೇಷ್ಠ ಸಾಹಿತಿಗಳನ್ನು ನಾಡಿಗೆ ನೀಡಿರುವ ಹೆಗ್ಗಳಿಕೆ ಈ ಜಿಲ್ಲೆಯದ್ದು. ತ್ಯಾಗ, ಬಲಿದಾನ, ಹೋರಾಟಗಳಿಗೆ ಸಂಬಂಧಿಸಿದಂತೆ ಈ ಜಿಲ್ಲೆಗೆ ಶತಮಾನಗಳ ಇತಿಹಾಸವಿದೆ.

| ಎನ್.ಚಲುವರಾಯಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತಿದೆ. ಇಲ್ಲಿ ಮೂರನೇ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿ.

| ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net