

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2016ರ ಇದೇ ದಿನ ರಾತ್ರಿ 8ರ ಸುಮಾರಿಗೆ ಐನೂರು ಮತ್ತು ಸಾವಿರ ರೂಪಾಯಿ ನೋಟ್ಗಳನ್ನು ಅಮಾನ್ಯಗೊಳಿಸುವುದಾಗಿ ಘೋಷಿಸಿದ್ದರು. ಅದೇ ದಿನವಾಗಿರುವ ಇಂದು ಬಿಜೆಪಿಗೆ ಕಾಂಗ್ರೆಸ್ ಸವಾಲು ಹಾಕಿದೆ.
2016ರ ಇದೇ ದಿನ ರಾತ್ರಿ ಎಂಟು ಗಂಟೆಗೆ ಭಾರತದ ಆರ್ಥಿಕತೆಗೆ, ಜನರ ಬದುಕಿಗೆ ಕೊಡಲಿ ಪೆಟ್ಟು ನೀಡಿದ ಘೋರ ದುರಂತ ಜರುಗಿತ್ತು. ನೋಟ್ ಬ್ಯಾನ್ ಆಗಿ 6 ವರ್ಷ ಪೂರೈಸಿದೆ. ಬಿಜೆಪಿಯಾಗಲಿ, ಮೋದಿಯಾಗಲಿ ತಮ್ಮ ಈ ಮಹಾಸಾಧನೆ ಬಗ್ಗೆ ಮಾತಾಡುವುದನ್ನೇ ಮರೆತಿರುವುದೇಕೆ? ಎಂದು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪ್ರಶ್ನಿಸಲಾಗಿದೆ.
ಎರಡು ಸಾವಿರ ಮುಖಬೆಲೆಯ ನೋಟುಗಳು ಕಾಣೆಯಾದವು, ಅದರಲ್ಲಿರುವ ಚಿಪ್ಪುಗಳೂ ಮಾಯವಾದವು. ಕಪ್ಪು ಹಣ ಸಿಗಲಿಲ್ಲ, ಭ್ರಷ್ಟಾಚಾರ ತೊಲಗಲಿಲ್ಲ. ಡಾಲರ್ ಎದುರು ರೂಪಾಯಿ ಕುಸಿಯುವುದು ನಿಲ್ಲಲಿಲ್ಲ. ನೋಟ್ ಬ್ಯಾನಿನಿಂದ ಆದ ಒಂದೇ ಒಂದು ಪ್ರಯೋಜನವಿದ್ದರೆ ಕರ್ನಾಟಕದ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.