

ಮುಂಬೈ: ಚಿರತೆಯೊಂದು ತನ್ನ ಮರಿಗಳೊಂದಿಗೆ ಮರಾಠಿ ಟಿವಿ ಸೀರಿಯಲ್ ಸೆಟ್ಗೆ ನುಗ್ಗಿರುವ ಆಘಾತಕಾರಿ ಘಟನೆ ಮುಂಬೈನ ಗೊರೆಂಗಾವ್ ಫಿಲ್ಮ್ ಸಿಟಿಯಲ್ಲಿ ಬುಧವಾರ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸೆಟ್ನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಯಾರಾದರೂ ಪ್ರಾಣ ಕಳೆದುಕೊಳ್ಳುವ ಸಂಭವವೂ ಇತ್ತು. ಕೇವಲ 10 ದಿನಗಳ ಅಂತರದಲ್ಲಿ ಮೂರು ಅಥವಾ ನಾಲ್ಕನೇ ಬಾರಿ ಈ ರೀತಿಯ ಘಟನೆ ನಡೆಯುತ್ತಿದೆ. ಆದರೂ ಸರ್ಕಾರ ಮಾತ್ರ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಖಿಲ ಭಾರತೀಯ ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತ ತಿಳಿಸಿದರು.
ಮುಂಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜೀವ ಸಂಕುಲ ತಮ್ಮ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿವೆ. ಇದರ ಪರಿಣಾಮ ಪ್ರಾಣಿಗಳು ನಗರದತ್ತ ಮುಖ ಮಾಡುತ್ತಿವೆ. ಮುಂಬೈನಲ್ಲಿ ಜುಲೈ ತಿಂಗಳಲ್ಲಿ 1557.8 ಮಿಮೀ ದಾಖಲೆ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಮುಂಬೈನಲ್ಲಿ ದಿನವಿಡೀ ಭಾರೀ ಮಳೆ ಸುರಿದಿದ್ದು, ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೂ ಅನ್ವಯವಾಗುವಂತೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
2014ರಿಂದ ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಚಿರತೆಗಳ ಜನಸಂಖ್ಯೆಯು ಸುಮಾರು 63ರಷ್ಟು ಹೆಚ್ಚಳವನ್ನು ಕಂಡಿದೆ. 2014ರಲ್ಲಿ 7910 ಇದ್ದ ಚಿರತೆಗಳ ಸಂಖ್ಯೆ 2018ರಲ್ಲಿ 12,852 ಕ್ಕೆ ಏರಿಕೆಯಾಗಿದೆ.
ಕಳೆದವಾರ ಗೊರೆಗಾಂವ್ ಫಿಲ್ಮ್ ಸಿಟಿಯಲ್ಲಿ ಶೋಯೆಬ್ ಇಬ್ರಾಹಿಂ ಮತ್ತು ಆಯುಶಿ ಖುರಾನ್ ಅವರ ಅಜೂನಿ ಶೋ ವೇಳೆ ಚಿರತೆ ಸೆಟ್ಗೆ ಎಂಟ್ರಿ ಕೊಟ್ಟಿತ್ತು. ಈ ವೇಳೆ ಸೆಟ್ನಲ್ಲಿದ್ದ 200 ಕಾರ್ಮಿಕರ ಮುಂದೆಯೇ ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿತ್ತು. ಇದಕ್ಕೂ ಹಿಂದೆ ಕಾಮ್ಯ ಪಂಜಾಬಿಯ ಹೊಸ ಶೋ ನೀರಜ್ ಏಕ್ ನಯಿ ಪೆಚಹಾನ್ ಸೆಟ್ಗೆ ಚಿರತೆ ಎಂಟ್ರಿ ಕೊಟ್ಟಿತ್ತು. (ದಿಗ್ವಿಜಯ ನ್ಯೂಸ್)