

ನವದೆಹಲಿ: ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ತಾಯಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಮಹಿಳೆಯೊಬ್ಬಳನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.
ಯುವಿ ಅವರು ತಾಯಿ ಶಬ್ನಮ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಹೇಮಾ ಕೌಶಿಕ್ ಎಂಬಾಕೆಯನ್ನು ಬಂಧಿಸಲಾಗಿದೆ. ಯುವಿ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಿ, ಬೆದರಿಸಿ ಹಣ ಸುಲಿಗೆ ಮಾಡಲು ಆರೋಪಿ ಹೇಮಾ ಪ್ರಯತ್ನಿಸಿದ್ದಾಳೆ.
ಅನಾರೋಗ್ಯದಿಂದ ಬಳಲುತ್ತಿರುವ ಯುವಿ ಸಹೋದರ ಸೊರ್ವಾರ್ ಸಿಂಗ್ರನ್ನು ನೋಡಿಕೊಳ್ಳಲು ಮಹಿಳೆಯನ್ನು ನೇಮಿಸಲಾಗಿತ್ತು. ಆದರೆ, ಆಕೆಯ ಕೆಲಸದಿಂದ ಅಸಮಾಧಾನಗೊಂಡ ಯುವಿ ಕುಟುಂಬ ಆಕೆಯನ್ನು 20 ದಿನಗಳ ನಂತರ ಕೆಲಸದಿಂದ ತೆಗೆದು ಹಾಕಿದ್ದರು. ಇದೇ ದ್ವೇಷದಲ್ಲಿ ಆರೋಪಿ ಹೇಮಾ ಯುವಿ ತಾಯಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಳು. ಇದಾದ ಬಳಿಕ ಶಬ್ನಮ್ ಸಿಂಗ್ ದೂರು ನೀಡಿದ್ದರು.
40 ಲಕ್ಷ ರೂಪಾಯಿ ನೀಡದಿದ್ದರೆ ಸೋರ್ವರ್ ಸಿಂಗ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಕುಟುಂಬದ ಗೌರವವನ್ನು ಹಾಳು ಮಾಡುವುದಾಗಿ ಹೇಮಾ ಬೆದರಿಕೆ ಹಾಕಿದ್ದಳು. ದೂರು ನೀಡಿದ ಬಳಿಕ ಹೇಮಾಳನ್ನು ಬಲೆಗೆ ಕೆಡವಲು ಪೊಲೀಸ್ ಪ್ಲ್ಯಾನ್ ಮಾಡಿ, ಹೇಮಾ ಕೇಳಿದ ಹಣದಲ್ಲಿ ಮೊದಲ ಹಂತವಾಗಿ 5 ಲಕ್ಷ ರೂಪಾಯಿ ಕೊಡುವುದಾಗಿ ಯುವಿ ಕುಟುಂಬದಿಂದ ಆಕೆಗೆ ಮಸೇಜ್ ಕಳುಹಿಸಲಾಯಿತು. ಹಣ ಸಿಗುತ್ತದೆ ಎಂಬ ಖುಷಿಯಲ್ಲಿ ಅದನ್ನು ವಸೂಲಿ ಮಾಡಲು ಹೇಮಾ ಆಗಮಿಸಿದಾಗ ಆಕೆಯನ್ನು ಪೊಲೀಸ್ ತಂಡ ವಶಕ್ಕೆ ಪಡೆದಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್)