ಅಕ್ರಮಕ್ಕೆ ಆಕ್ರೋಶ, ಮರುಪರೀಕ್ಷೆಗೆ ಆಗ್ರಹ: ಲೆಕ್ಚರರ್ಸ್ ನೇಮಕ ‘ಡೀಲ್’ ಕಳವಳ!

KEA_logo.jpg
Published on

| ಅವಿನಾಶ ಎಸ್. ಮೈಸೂರು

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಅಕ್ರಮಗಳು ಬೆಳಕಿಗೆ ಬರುತ್ತಿರುವಂತೆಯೇ ಸಾಕಷ್ಟು ಅಭ್ಯರ್ಥಿಗಳು ಕಳವಳ ವ್ಯಕ್ತಪಡಿಸಿದ್ದು, ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಪರೀಕ್ಷೆಗಾಗಿ ತಯಾರಿ ನಡೆಸಿದ್ದ ಅಭ್ಯರ್ಥಿಗಳು ಇತ್ತೀಚಿನ ಬೆಳವಣಿಗೆಯಿಂದ ಆತಂಕಗೊಂಡಿದ್ದಾರೆ. ಪರೀಕ್ಷೆಗೆ ತಯಾರಾಗಲೆಂದೇ ಕೆಲವರು ಇದ್ದ ಉದ್ಯೋಗವನ್ನೂ ತ್ಯಜಿಸಿದ್ದರು. ನೇಮಕಾತಿ ಅಧಿಸೂಚನೆಯಲ್ಲಿ ವಿಷಯವಾರು ಹುದ್ದೆಗಳ ಸಂಖ್ಯೆಯೂ ಕಡಿಮೆ ಇದೆ. ಅಂತಹದ್ದರಲ್ಲಿ ಆ ಹುದ್ದೆಗಳೂ ಡೀಲ್ ಆದರೆ ಗತಿಯೇನು? ಹಗರಣ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ನೋಡಿದರೆ ಅಕ್ರಮದ ಗಂಭೀರತೆ ತಿಳಿಯುತ್ತದೆ ಎಂದು ಕೆಇಎ ವಿರುದ್ಧ ಅಭ್ಯರ್ಥಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.

ಹೆಚ್ಚು ಹುದ್ದೆ ಇರುವ ವಿಷಯಗಳ ಗತಿಯೇನು?: ಭೂಗೋಳಶಾಸ್ತ್ರ ವಿಷಯಕ್ಕೆ ಸಂಬಂಧಪಟ್ಟ ಅಕ್ರಮ ಮಾತ್ರ ಹೊರಬಿದ್ದಿದೆ. ಅಚ್ಚರಿಯ ಸಂಗತಿಯೆಂದರೆ, ಈ ವಿಷಯದಲ್ಲಿ 8 ಹುದ್ದೆಗಳಿಗೆ ಮಾತ್ರ ಪರೀಕ್ಷೆ ನಡೆದಿತ್ತು. ಇಲ್ಲಿ ಅಭ್ಯರ್ಥಿಯೇ ಪ್ರಶ್ನೆಗಳನ್ನು ವಾಟ್ಸ್​ಆಪ್ ಮೂಲಕ ಬೇರೆಯವರಿಗೆ ಕಳುಹಿಸಿರುವುದರಿಂದ ಗೊತ್ತಾಗಿದೆ. ಇಲ್ಲದಿದ್ದರೆ ಅದೂ ಹೊರಬೀಳುತ್ತಿರಲಿಲ್ಲ. ಕೇವಲ 8 ಹುದ್ದೆಗಳಲ್ಲೇ ‘ಡೀಲ್’ ನಡೆದಿದೆ ಎನ್ನುವುದಾದರೆ, ಇನ್ನು 50, 80, 100, 180 ಹುದ್ದೆಗಳಿರುವ ಕನ್ನಡ, ಇಂಗ್ಲಿಷ್, ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ಇತಿಹಾಸ, ರಸಾಯನಶಾಸ್ತ್ರದಂತಹ ವಿಷಯಗಳ ಗತಿಯೇನು. ಅಲ್ಲಿ ಇನ್ನೆಷ್ಟು ‘ಡೀಲ್​ಗಳು’ ಕುದುರಿರಬಹುದು ಎಂಬುದು ಅಭ್ಯರ್ಥಿಗಳ ಪ್ರಶ್ನೆ. ಈ ನಡುವೆ, ಕನ್ನಡ ವಿಷಯದ ಪರೀಕ್ಷೆಯಲ್ಲಿ ಸುಮಾರು 14 ಪ್ರಶ್ನೆಗಳು ತಪ್ಪಾಗಿದ್ದು, ಆಯೋಗ ಗ್ರೇಸ್ ಮಾರ್ಕ್ಸ್ ನೀಡಲು ಸಿದ್ಧತೆ ನಡೆಸಿದೆ. ಅದರಂತೆ, 14 ಪ್ರಶ್ನೆಗಳಿಂದ 28 ಅಂಕಗಳನ್ನು ಅಭ್ಯರ್ಥಿಗಳಿಗೆ ನೀಡಬೇಕಾಗುತ್ತದೆ. ಹೀಗಾಗಿ, ಉತ್ತರ ಗೊತ್ತಿಲ್ಲದಿದ್ದರೂ ‘ಅಡ್ಡೇಟಿನ ಮೇಲೆ ಗುಡ್ಡೇಟು’ ಎನ್ನುವಂತೆ ತಪ್ಪು ಉತ್ತರ ಬರೆದಿರುವ ಅಭ್ಯರ್ಥಿಗಳಿಗೆ ಲಾಭವಾದರೆ, ಸರಿಯಾದ ಉತ್ತರ ಗೊತ್ತಿಲ್ಲವೆಂದು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡದ ಅಭ್ಯರ್ಥಿಗಳಿಗೆ ನಷ್ಟವಾಗಲಿದೆ. ಆದ್ದರಿಂದ ಆದಷ್ಟು ಶೀಘ್ರವಾಗಿ ಮರುಪರೀಕ್ಷೆ ಘೊಷಿಸಿ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸಲಿ ಎಂಬುದು ಸಾಕಷ್ಟು ಅಭ್ಯರ್ಥಿಗಳ ಅಭಿಲಾಷೆಯಾಗಿದೆ.

ಸಿಬಿಟಿ ಮಾದರಿ ಪರೀಕ್ಷೆಯಾಗಲಿ: ಬ್ಲೂಟೂತ್, ಸ್ಮಾರ್ಟ್​ವಾಚ್​ನ ಈ ಕಾಲದಲ್ಲೂ ಹಳೆಯ ಪದ್ಧತಿಯಲ್ಲೇ ಪರೀಕ್ಷೆ ನಡೆಸಿದರೆ ‘ಡೀಲ್’ದಾರರಿಗೆ ಸುಲಭವಾಗುತ್ತದೆ. ಆದ್ದರಿಂದ ಮರು ಪರೀಕ್ಷೆಯನ್ನು ಕಂಪ್ಯೂಟರ್ ಬೇಸ್ಡ್ ಟೆಸ್ಟ್ (ಸಿಬಿಟಿ) ಮಾದರಿಯಲ್ಲಿ ಅತ್ಯಾಧುನಿಕ ಸಲಕರಣೆಗೊಂದಿಗೆ ನಡೆಸಿದರೆ ಅಕ್ರಮ ಮಾರ್ಗಗಳು ಬಂದ್ ಆಗಲಿವೆ ಎಂಬುದು ಅಭ್ಯರ್ಥಿಗಳ ಒಮ್ಮತಾಭಿಪ್ರಾಯ.

ಸಾಕಷ್ಟು ತಯಾರಿ ನಡೆಸಿ ಪರೀಕ್ಷೆ ಎದುರಿಸಿದ್ದೇನೆ. ಈಗ ನೋಡಿದರೆ ದುಡ್ಡಿದ್ದವರಿಗೆ ಮಾತ್ರ ಅವಕಾಶ ಎನ್ನುವಂತಾಗಿದೆ. ಸರ್ಕಾರ ಮರುಪರೀಕ್ಷೆ ನಡೆಸುವ ಮೂಲಕ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ. ಆ ಮೂಲಕ ದುಡ್ಡು ಕೊಟ್ಟು ಕೆಲಸ ಗಿಟ್ಟಿಸುವ ಆಸೆಯಲ್ಲಿದ್ದವರಿಗೆ ಸರಿಯಾಗಿ ಬಿಸಿ ಮುಟ್ಟಿಸಲಿ. | ಡಾ.ಡಿ.ಜಿ. ವಿಶ್ವನಾಥ್ ಅತಿಥಿ ಉಪನ್ಯಾಸಕ, ಹೆಗ್ಗಡದೇವನಕೋಟೆ

ಹಗರಣದ ಹಿಂದೆ ದೊಡ್ಡಜಾಲ: ನೇಮಕಾತಿ ಹಗರಣದ ಹಿಂದೆ ದೊಡ್ಡ ಜಾಲವೇ ಇದ್ದು, ಸಮಗ್ರ ತನಿಖೆಯಾದರೆ ಕಾಣದ ಕೈಗಳು ಗೋಚರಿಸುತ್ತವೆ. ಪ್ರಕರಣವನ್ನು ಸರ್ಕಾರ ಕೇವಲ ಪೊಲೀಸ್ ತನಿಖೆಗೆ ವಹಿಸುವ ಬದಲು, ಸಿಒಡಿ ಅಥವಾ ನ್ಯಾಯಾಂಗ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರನ್ನು ಬಂಧಿಸಬೇಕು. ಇಲ್ಲದಿದ್ದರೆ ‘ಭೂಗೋಳಶಾಸ್ತ್ರ’ದ ಅಕ್ರಮ ಕೆಲವೇ ದಿನಗಳಲ್ಲಿ ಭೂಗರ್ಭದಲ್ಲಿ ಮುಚ್ಚಿಹೋಗುತ್ತದೆಂದು ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net