

ಬಿಹಾರ: ದೇಶದಲ್ಲಿ ಶುಕ್ರವಾರವಷ್ಟೇ ಸಂಭವಿಸಿದ್ದ ತ್ರಿವಳಿ ರೈಲು ಅಪಘಾತದ ಬೆನ್ನಿಗೇ ಮತ್ತೊಂದು ಭಾರಿ ಅವಘಡ ಉಂಟಾಗಿದೆ. ಬೃಹತ್ ಸೇತುವೆಯೊಂದು ನೋಡನೋಡುತ್ತಿದ್ದಂತೆ ಕುಸಿದಿದ್ದು ಇಸ್ಪೀಟ್ನ ಎಲೆಯಂತೆ ಬಿದ್ದು ನೀರುಪಾಲಾಗಿದೆ.
ಬಿಹಾರದ ಭಗಲ್ಪುರದಲ್ಲಿ ಈ ಅವಘಡ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಈ ಸೇತುವೆ ಅಗುವಾನಿ-ಸುಲ್ತಾನ್ಗಂಜ್ ಸಂಪರ್ಕ ಕೊಂಡಿಯಾಗಿತ್ತು. ಇಂದು ಸಂಜೆ 6 ಗಂಟೆ ಸುಮಾರಿಗೆ ಈ ಬೃಹತ್ ಸೇತುವೆ ಕುಸಿದಿದೆ. ಈ ದೃಶ್ಯ ಸ್ಥಳೀಯರ ಮೊಬೈಲ್ಫೋನ್ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಲಾರಂಭಿಸಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಗಂಗಾ ನದಿ ಮೇಲೆ ನಿರ್ಮಿಸಲಾಗಿರುವ ಈ ಚತುಷ್ಪಥ ಸೇತುವೆಯನ್ನು 2014ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು. ಇದೀಗ ಈ ಸೇತುವೆ ಒಂದೇ ವರ್ಷದಲ್ಲಿ ಎರಡನೇ ಸಲ ಕುಸಿದಂತಾಗಿದೆ. ಕಳೆದ ಡಿಸೆಂಬರ್ನಲ್ಲಿ ಬೆಗುಸರಾಯ್ ಜಿಲ್ಲೆಯ ಪ್ರದೇಶದಲ್ಲಿ ಈ ಸೇತುವೆ ಕುಸಿತ ಕಂಡಿತ್ತು. -ಏಜೆನ್ಸೀಸ್