

ಬೆಂಗಳೂರು: ಪ್ರತಿ ಚುನಾವಣೆಯಲ್ಲೂ ಫಲಿತಾಂಶ ಹೀಗೇ ಇರಲಿದೆ ಎಂದು ಒಂದಷ್ಟು ಮಂದಿ ಭವಿಷ್ಯ ನುಡಿದು ಬಿಡುತ್ತಾರೆ. ಆದರೆ ಎಷ್ಟೋ ಸಲ ಅಂಥ ಭವಿಷ್ಯಗಳು ಸುಳ್ಳಾಗಿ ತಮಾಷೆಗೀಡಾಗಿ ಬಿಡುತ್ತವೆ. ಆದರೆ ಇಲ್ಲೊಂದು ತಮಾಷೆಯೇ ನಿಜವಾಗಿ ಬಿಟ್ಟಿದೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂಬ ಶ್ವಾನಭವಿಷ್ಯವೊಂದು ಕಳೆದ ಚುನಾವಣೆ ಸಂದರ್ಭದಲ್ಲಿ ಗಮನ ಸೆಳೆದಿತ್ತು. ಮಂಡ್ಯ ಜಿಲ್ಲೆಯ ಅಶೋಕನಗರದಲ್ಲಿನ ಗೋಪಿ ಎಂಬವರು ಸಾಕಿದ್ದ ನಾಯಿ ಫೋಟೋ ಆರಿಸುವ ಮೂಲಕ ಮುಂದಿನ ಸಿಎಂ ಎಚ್ಡಿಕೆ ಎಂದು ಸೂಚಿಸಿದ್ದನ್ನು ಕೆಲವರು ಆ ಸಂದರ್ಭದಲ್ಲಿ ತಮಾಷೆಯಾಗಿ ಕಂಡಿದ್ದು, ಕೊನೆಗೂ ಅದು ತಮಾಷೆಗೀಡಾಯ್ತು.
ಆದರೆ ಹನಿಗವಿ ಎಚ್.ಡುಂಡಿರಾಜ್ ಅವರು ತಮಾಷೆಗೆಂದು ಬರೆದಿದ್ದ ಹನಿಗವನದಂತೆ ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. 'ಒಂದು ವರ್ಷದ ಹಿಂದೆ ತಮಾಷೆಗೆಂದು ಬರೆದದ್ದು ಇಂದು ನಿಜವಾಗಿದೆ' ಎಂದು ಡುಂಡಿರಾಜರೇ ತಮ್ಮ ಹನಿಗವನವನ್ನು ಹಂಚಿಕೊಂಡಿದ್ದಾರೆ.