

ನವದೆಹಲಿ: ತೊಟ್ಟಿಲ ತೂಗುವ ಕೈ ಲೋಕವನ್ನಾಳಬಲ್ಲದು ಎನ್ನುತ್ತಾರೆ. ಕೆಲವೊಮ್ಮೆ ಅದೇ ಹೆಣ್ಣು ಪಾಪಿಯಾಗಿ ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಘಟನೆಗಳನ್ನೂ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಅದೇ ರೀತಿಯಲ್ಲಿ ಬುರ್ಖಾ ತೊಟ್ಟ ಹೆಣ್ಣು ಮಗಳೊಬ್ಬಳು ಪಿಸ್ತೂಲು ಹಿಡಿದು ಬೇಕಾಬಿಟ್ಟಿ ಗುಂಡು ಹಾರಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಉತ್ತರ ದೆಹಲಿಯ ಸಾರ್ಫಾ ಬಾದ್ ಪ್ರದೇಶದಲ್ಲಿ ನವೆಂಬರ್ 8ರಂದು ನಡೆದಿರುವ ಘಟನೆ ಇದೀಗ ವೈರಲ್ ಆಗಿದೆ. ಬುರ್ಖಾ ತೊಟ್ಟ ಮಹಿಳೆಯೊಬ್ಬಳು ಓರ್ವ ಗಂಡಸಿನೊಂದಿಗೆ ಬೈಕ್ನಲ್ಲಿ ಬಂದು, ಒಂದು ಅಂಗಡಿಯ ಮುಂದೆ ನಿಲ್ಲುತ್ತಾಳೆ. ಕೂಡಲೆ ಕೈಗೆ ಪಿಸ್ತೂಲು ತೆಗೆದುಕೊಳ್ಳುವ ಮಹಿಳೆ ಬಾಗಿಲು ಮುಚ್ಚಿದ್ದ ಅಂಗಡಿಯ ಮೇಲೆ ಗುಂಡು ಹಾರಿಸುತ್ತಾಳೆ. ನಾನು ಗ್ಯಾಂಗ್ಸ್ಟರ್ನ ಸಹೋದರಿ ಎಂದು ಚೀರಾಡುತ್ತಾಳೆ. ಆಕೆಯ ಜತೆಗಿದ್ದ ವ್ಯಕ್ತಿ ಸಮಾಧಾನ ಮಾಡಲು ಮುಂದಾಗುತ್ತಾನಾದರೂ ತಡೆಯದ ಮಹಿಳೆ ಗುಂಡನ್ನು ಹಾರಿಸಲಾರಂಭಿಸುತ್ತಾಳೆ.
ಈ ಘಟನೆಯ ಕುರಿತಾಗಿ ಖಾಸಗಿ ವಾಹಿನಿಯೊಂದು ಇದೀಗ ವರದಿ ಮಾಡಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದಿರುಬಹುದು ಎನ್ನಲಾಗಿದೆ. ರಾತ್ರಿ ವೇಳೆ ಈ ಕೃತ್ಯ ನಡೆದಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)