ರಸ್ತೆ ಬದಿ ಬಿದ್ದಿದ್ದ ಗೋಣಿಚೀಲದಲ್ಲಿ ಕೇಳುತ್ತಿತ್ತು ಮಗು ಅಳುವ ಸದ್ದು! ಚೀಲ ತೆರೆದು ನೋಡಿದಾಗ ಕಾದಿತ್ತು ಅಚ್ಚರಿ

kid
Published on

ಮೀರತ್​: ಮಕ್ಕಳೆಂದರೆ ಇಷ್ಟ ಇಲ್ಲದವರು ಯಾರಿದ್ದಾರೆ ಹೇಳಿ? ಪ್ರತಿಯೊಂದು ಕುಟುಂಬದಲ್ಲೂ ಜನಿಸುವ ಮಗು ಹೊಸ ಚೈತನ್ಯವನ್ನು ಹುಟ್ಟಿಹಾಕುತ್ತದೆ. ಆದರೆ ನಮ್ಮ ದೇಶದಲ್ಲಿ ಹೆಣ್ಣು ಗಂಡು ಎನ್ನುವ ಭೇದ ಭಾವದಿಂದಾಗಿ ಅನೇಕ ಹೆಣ್ಣು ಶಿಶುಗಳ ಪರಿಸ್ಥಿತಿ ಹೀನಾಯವಾಗಿದೆ. ಹುಟ್ಟಿದ ಮಕ್ಕಳನ್ನ ಬೀದಿಗೆ ಎಸೆಯುವಷ್ಟು ಕಟುಕರಾಗಿದ್ದಾರೆ ನಮ್ಮಲ್ಲಿಯ ಕೆಲವರು.

ಉತ್ತರ ಪ್ರದೇಶದ ಮೀರತ್​ ನಗರದ ರಸ್ತೆಯೊಂದರ ಬಳಿ ಗೋಣಿಚೀಲ ಬಿದ್ದಿತ್ತು. ಏನೋ ಮೂಟೆ ಕಟ್ಟಿ ಎಸೆದಂತಿದ್ದ ಆ ಚೀಲವನ್ನು ಯಾರೂ ಅಷ್ಟಾಗಿ ಗಮನಿಸಲು ಹೋಗಿಲ್ಲ. ರಾತ್ರೋ ರಾತ್ರಿ ರಸ್ತೆಗೆ ಬಂದು ಬಿದ್ದಿದ್ದ ಆ ಚೀಲದಲ್ಲಿ ಮಗು ನರಳುವ ಸದ್ದು ಕೇಳಿದೆ. ಅದನ್ನು ಗ್ರಹಿಸಿದ ದಾರಿಹೋಕರು, ಚೀಲವನ್ನು ತೆರೆದು ನೋಡುವ ಧೈರ್ಯ ಮಾಡಿದ್ದಾರೆ.

ಒಂದು ಗೋಣಿಚೀಲವನ್ನು ತೆರೆದಾಗ ಅದರಲ್ಲಿ ಮತ್ತೊಂದು ಚೀಲವಿತ್ತು. ಅದನ್ನೂ ತೆರೆದಾಗ ಮತ್ತೂ ಒಂದು ಚೀಲ ಕಾಣಿಸಿದೆ. ಮೂರನೇ ಚೀಲ ತೆರೆದಾಗ ಅದರಲ್ಲಿ ನವಜಾತ ಹೆಣ್ಣು ಶಿಶುವೊಂದು ಕಾಣಿಸಿದೆ. ಹುಟ್ಟಿ ಒಂದು ದಿನವೂ ಆಗಿರದ ಮಗುವನ್ನು ಹೊಕ್ಕಳು ಬಳ್ಳಿಯೊಂದಿಗೇ ಪಾಪಿ ತಂದೆ ತಾಯಿ ಗೋಣಿ ಚೀಲದಲ್ಲಿ ಕಟ್ಟಿ ರಸ್ತೆ ಬದಿ ಎಸೆದು ಹೋಗಿದ್ದಾರೆ.

ಮಗುವನ್ನು ನೋಡಿ ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪುವ ವೇಳೆ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದು, ದೇಹದಿಂದ ವಾಸನೆ ಬರುತ್ತಿತ್ತು ಎನ್ನಲಾಗಿದೆ. ಮುಂಜಾವಿನ ಚಳಿಯಲ್ಲಿ ಮಗುವನ್ನು ರಸ್ತೆ ಬದಿ ಹಾಕಿದ್ದರಿಂದಾಗಿ ಮಗುವಿನ ದೇಹದ ಉಷ್ಣಾಂಶ ಹದಗೆಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಮಗುವನ್ನು ನವಜಾತ ಶಿಶು ರಕ್ಷಣಾ ಕೇಂದ್ರದಲ್ಲಿಟ್ಟು ಪೋಷಿಸಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net