ಅಮ್ಮನಿಗೆ ಅಪ್ಪ ಹೊಡೆಯಲು ಬಂದ, ಅವನಿಗೇ ರಕ್ತದೋಕುಳಿ ಮಾಡಿಸಿಬಿಟ್ಟೆ; ಪೊಲೀಸರಿಗೆ ಶರಣಾದ ಮಗಳು

dad
Published on

ಭೋಪಾಲ್​: ತಾಯಿಯ ಮೇಲೆ ಮಕ್ಕಳಿಗಿರುವ ಪ್ರೀತಿ ಮಹತ್ವದ್ದು. ತನ್ನ ತಾಯಿಗೆ ಯಾರೇ ಬೈಯುತ್ತಾರೆ, ಹೊಡೆಯಲು ಮುಂದಾಗುತ್ತಾರೆ ಅಂದರೆ ಮಕ್ಕಳು ಸಹಿಸುವುದಿಲ್ಲ. ಅಮ್ಮನಿಗೆ ಅಪ್ಪ ಹೊಡೆಯಲು ಮುಂದಾದ ಎನ್ನುವ ಕಾರಣಕ್ಕೆ ಮಗಳೊಬ್ಬಳು ಅಪ್ಪನೇ ರಕ್ತದೋಕುಳಿಯ ಮಧ್ಯೆ ಮಲಗುವಂತೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಹಳ್ಳಿಯೊಂದರಲ್ಲಿ ಇತ್ತೀಚೆಗೆ ಕುಟುಂಬಸ್ಥರೆಲ್ಲರ ಕುಳಿತು ಮನೆಯ ಮಗನ ಮದುವೆಯ ಬಗ್ಗೆ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅಪ್ಪ ಅಮ್ಮನ ನಡುವೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿದೆ. ಸಿಟ್ಟಿಗೆದ್ದ ತಂದೆ ಪತ್ನಿಗೆ ಹೊಡೆಯಲು ಮುಂದಾಗಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಅಪ್ಪ, ಅಮ್ಮನಿಗೆ ಹೊಡೆಯಲು ಹೊರಟಿರುವುದನ್ನು ಸಹಿಸಲಾರದ 16 ವರ್ಷದ ಮಗಳು ಅಪ್ಪನ ತಲೆಯ ಮೇಲೆ ಬಟ್ಟೆ ತೊಳೆಯಲು ಬಳಸುವ ಬ್ಯಾಟ್​ನಿಂದ ಹೊಡೆದಿದ್ದಾಳೆ.

ಒಂದೆರೆಡು ಏಟಿಗೆ ಆತ ರಕ್ತ ಚೆಲ್ಲುತ್ತಾ ಕೆಳಗೆ ಬಿದ್ದಿದ್ದಾನೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಮಗಳು ಆತನ ಮೇಲಿದ್ದ ಸಿಟ್ಟು ಪೂರ್ತಿಯಾಗಿ ಕಡಿಮೆಯಾಗುವವರೆಗೂ ಹೊಡೆದಿದ್ದಾಳೆ. ಆತನ ದೇಹ ಸಂಪೂರ್ಣವಾಗಿ ರಕ್ತವಾಗುಷ್ಟರ ಮಟ್ಟಿಗೆ ಏಟು ಕೊಟ್ಟಿದ್ದಾಳೆ. ಅದಾದ ನಂತರ ತಾನೇ ಪೊಲೀಸರಿಗೆ ಕರೆ ಮಾಡಿದ್ದಾಳೆ. 'ನಾನು ನನ್ನಪ್ಪನನ್ನು ಕೊಂದಿದ್ದೇನೆ. ಬಂದು ನನ್ನನ್ನು ಬಂಧಿಸಿ' ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸದ್ಯ ಆಕೆಯನ್ನು ಬಾಲಪರಾಧಿ ಜೈಲಿನಲ್ಲಿ ಬಂಧಿಸಿಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net