

ಪೊಂಪೈ: ಬರೋಬ್ಬರಿ 2 ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಯಿಂದಾಗಿ ಸಾವನ್ನಪ್ಪಿದ್ದ ಇಬ್ಬರು ವ್ಯಕ್ತಿಗಳ ಮೃತದೇಹವನ್ನು ಇಟಲಿಯ ಪುರಾತತ್ವ ತಜ್ಞರು ಪತ್ತೆಹಚ್ಚಿದ್ದಾರೆ. ಅಸ್ಥಿಪಂಜರದ ರೂಪದಲ್ಲಿರುವ ಎರಡು ದೇಹವನ್ನು ಪರಿಶೀಲಿಸಿರುವ ತಜ್ಞರು ಅದು ಶ್ರೀಮಂತ ಮತ್ತು ಆತನ ಕೆಲಸಗಾರನ ಜೋಡಿಯಾಗಿದ್ದಿರಬಹುದು ಎಂದು ತಿಳಿಸಿದ್ದಾರೆ.
ಇಟಲಿಯ ಪೊಂಪೈನಿಂದ ಸುಮಾರು 23 ಕಿ.ಮೀ ದೂರದಲ್ಲಿ ರೋಮನ್ ನಗರವೊಂದಿತ್ತು. ಆ ನಗರದಲ್ಲಿ ಸುಮಾರು 13 ಸಾವಿರ ಜನರು ವಾಸಿಸುತ್ತಿದ್ದರು. 2 ಸಾವಿರ ವರ್ಷಗಳ ಹಿಂದೆ ಅಲ್ಲಿ ಜ್ವಾಲಾಮುಖಿ ಸ್ಫೋಟವಾಗಿದೆ. ಪೂರ್ತಿ ನಗರವೇ ಬೂದಿಯಲ್ಲಿ ಮುಚ್ಚಿಹೋಗಿದೆ. ಈ ಸ್ಥಳ ಇದೀಗ ಪುರತಾತ್ವ ತಜ್ಞರ ಪಾಲಿಗೆ ಅತ್ಯಂತ ಶ್ರೀಮಂತ ಸ್ಥಳ. 1750ರಿಂದಲೂ ಇಲ್ಲಿ ಉತ್ಖನನ ಕೆಲಸಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ನಡೆದ ಉತ್ಖನನದಲ್ಲಿ ಈ ಎರಡು ದೇಹಗಳು ಪತ್ತೆಯಾಗಿವೆ.
ಈ ಎರಡು ದೇಹಗಳ ಪೈಕಿ ಒಂದು ದೇಹವು ಉಣ್ಣೆಯ ಬಟ್ಟೆ ತೊಟ್ಟಿದ್ದ ಕುರುಹಿದೆ. 30-40 ವಯಸ್ಸಿನವನಾಗಿದ್ದ ಆತ ಶ್ರೀಮಂತ ವರ್ಗಕ್ಕೆ ಸೇರಿದವನಿರಬಹುದು ಎಂದು ಊಹಿಸಲಾಗಿದೆ. ಇನ್ನೊಂದು ದೇಹದಲ್ಲಿ ಮಾಮೂಲಿ ಬಟ್ಟೆ ತೊಟ್ಟಿದ್ದ ಕುರುಹಿದೆ. ಇದು ಸಾಮಾನ್ಯ ವರ್ಗಕ್ಕೆ ಸೇರಿದವನಿದ್ದಿರಬಹುದು. ಆತನ ದೇಹದ ಮೂಳೆಗಳು ಹೆಚ್ಚು ದುಡಿದಿರುವ ಕುರುಹು ನೀಡುತ್ತಿವೆ. ಹಾಗಾಗಿ ಆ ಶ್ರೀಮಂತನ ಕೆಲಸಗಾರ ಅವನಾಗಿದ್ದಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)