ಮುಸ್ಲಿಂ ಆದರೇನಂತೆ, ಸಂಸ್ಕೃತದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ! ಬಿಹಾರದ ಶಾಸಕನ ಸಂಸ್ಕೃತ ಅಭಿಮಾನ

mla
Published on

ಪಟನಾ: ಬಿಹಾರ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಎನ್​ಡಿಎ ಸರ್ಕಾರ ನಿತೀಶ್​ ಕುಮಾರ್​ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ್ದು, ಸಚಿವ ಸಂಪುಟವನ್ನೂ ರಚಿಸಿದೆ. ರಾಜ್ಯದಲ್ಲಿ ಸೋಮವಾರ ಮತ್ತು ಮಂಗಳವಾರ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಯದಲ್ಲಿ ಮುಸ್ಲಿಂ ಶಾಸಕರೊಬ್ಬರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಎಲ್ಲರ ಹುಬ್ಬೇರುವಂತಾಗಿದೆ.

ಕಾಂಗ್ರೆಸ್​ ಶಾಸಕ ಶಕೀಲ್​ ಅಹಮ್ಮದ್​ ಖಾನ್​ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕ. ಇವರು ಜವಹರಲಾಲ್​ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೂಡ ಹೌದು. ಸಂಸ್ಕೃತವನ್ನು ತಮ್ಮ ಭಾಷೆ ಎಂದುಕೊಂಡಿರುವ ಬಿಜೆಪಿ, ಹಾಗೂ ಅದೊಂದು ಪರ ಭಾಷೆ ಎಂದು ದೂರುವ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಪಕ್ಷಕ್ಕೆ ಒಂದು ಖಡಕ್​ ಉತ್ತರ ಕೊಡುವ ಸಲುವಾಗಿ ತಾವು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ವಿವಿಧತೆಯಲ್ಲಿ ಏಕತೆ ಸಾರುವಂತಿತ್ತು. ಮೈಥಿಲಿ, ಉರ್ದು, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್​ ಭಾಷೆಗಳಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net