

ನವದೆಹಲಿ: ಬರಿಗೈಲಿ ದುಡಿದು ಶ್ರೀಮಂತರಾದವರು ಕೆಲವರಿದ್ದಾರೆ. ಆದರೆ ಇಲ್ಲೊಬ್ಬಳು 55 ವರ್ಷದ ಮಹಿಳೆ ಬರಿಗಾಲಲ್ಲೇ ಬರೋಬ್ಬರಿ 13 ಕೋಟಿ ರೂಪಾಯಿ ಗಳಿಸಿದ್ದಾಳೆ. ಆದರೆ ಈಕೆಯ ಪಾಲಿಗೆ ಇದು ಸಮಾಧಾನದ ವಿಷಯವೂ ಹೌದು, ಜತೆಗೆ ನೋವಿನ ಸಂಗತಿ ಕೂಡ.
ಹೀಗೆ 13 ಕೋಟಿ ರೂಪಾಯಿ ಗಳಿಸಿದ ಆ ಯುವತಿಯ ಹೆಸರು ಕ್ಲಾರಾ ಶೆಲ್ಮ್ಯಾನ್. ಇದೊಂಥರ ಎಡವಟ್ಟಿನ ಪ್ರಸಂಗ. ಏಕೆಂದರೆ, ಈಕೆ ಹೀಗೆ ಪಡೆದಿರುವ ಬೃಹತ್ ಮೊತ್ತದ ಹಣ, ಅದು ಪರಿಹಾರ ಧನ. ಒಂದು ಸಣ್ಣ ಸಮಸ್ಯೆಯಿಂದಾಗಿ ಆದ ದೊಡ್ಡ ತೊಂದರೆ ಸಲುವಾಗಿ ಈಕೆಗೆ ಪರಿಹಾರಾರ್ಥವಾಗಿ 1.75 ಮಿಲಿಯನ್ ಡಾಲರ್ ಅಂದರೆ ಸುಮಾರು 13 ಕೋಟಿ ರೂಪಾಯಿ ಸಿಕ್ಕಿದೆ.
ಫ್ಲೋರಿಡಾದ ಈ ಯುವತಿ 2018ರ ಸೆಪ್ಟೆಂಬರ್ನಲ್ಲಿ ಪೆಡಿಕ್ಯೂರ್ ಮಾಡಿಸಿಕೊಳ್ಳಲು ಹೋಗಿದ್ದಾಗ, ಆ ಪ್ರಕ್ರಿಯೆಯಲ್ಲಿ ಚಿಕ್ಕ ಗಾಯವಾಗಿತ್ತು. ಬಳಿಕ ಅದರಿಂದ ಸೋಂಕಾಗಿ ಈಕೆ ಪೆರಿಫೆರಲ್ ಆರ್ಟರಿ ಡಿಸೀಸ್ಗೆ ಒಳಗಾದಳು. ಸೋಂಕು ವ್ಯಾಪಿಸಿ ಬಳಿಕ ಕಾಲನ್ನೇ ಕತ್ತರಿಸಬೇಕಾಯಿತು. ಇದರ ಸಲುವಾದ ಚಿಕಿತ್ಸೆಗೆ ಈಕೆ ದೊಡ್ಡ ಮೊತ್ತವನ್ನೇ ತೆರಬೇಕಾಯಿತು, ಕಾಲು ಕಳೆದುಕೊಳ್ಳುವ ಜತೆಗೆ ಮನೆ ಕೂಡ ಕಳೆದುಕೊಳ್ಳಬೇಕಾಯಿತು.
ಆದರೆ ಮೂರು ವರ್ಷಗಳ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡ ಟ್ಯಾಮಿಸ್ ನೇಲ್ಸ್ 2 ಸಂಸ್ಥೆ 13 ಕೋಟಿ ರೂ. ಪರಿಹಾರ ನೀಡಿದೆ. ಪೆಡಿಕ್ಯೂರ್ ಮಾಡಿದ್ದ ಈ ಸಂಸ್ಥೆ ಆರಂಭದಲ್ಲಿ ಕ್ಲಾರಾದ್ದೇ ತಪ್ಪು ಎಂದು ತಪ್ಪಿಸಿಕೊಳ್ಳಲು ಯತ್ನಿಸಿತ್ತು. -ಏಜೆನ್ಸೀಸ್