ಲಡಾಖ್​ನಲ್ಲಿ 20 ಸಾವಿರ ಕೋಟಿ ಮೌಲ್ಯದ ರಸ್ತೆ ಅಭಿವೃದ್ಧಿ ಕಾಮಗಾರಿ

road
Published on

ನವದೆಹಲಿ: ವಾಸ್ತವ ಗಡಿರೇಖೆಯ ಬಳಿಕ ಚೀನಾದೊಂದಿಗಿನ ಜಟಾಪಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತ ಆ ಭಾಗದಲ್ಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಚುರುಕುಗೊಳಿಸಲು ನಿರ್ಧರಿಸಿದೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಲಿ ಜಾರಿಯಲ್ಲಿರುವ 20 ಸಾವಿರ ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಡರ್ಬುಕ್​-ಶಿಯಾಕ್​-ದೌಲತ್​ ಬೇಗ್​ ಓಲ್ಡೀ ರಸ್ತೆ ಅಭಿವೃದ್ಧಿ ಕಾಮಗಾರಿಯೂ ಇದರಲ್ಲಿ ಸೇರಿದೆ. ಈ ಕಾಮಗಾರಿಯೇ ಲಡಾಖ್​ ಬಿಕ್ಕಟ್ಟಿಗೆ ಕಾರಣವಾಗಿತ್ತು.

ರಕ್ಷಣಾ ಸಚಿವಾಲಯ ಮತ್ತು ಬಾರ್ಡರ್​ ರೋಡ್ಸ್​ ಆರ್ಗನೈಜೇಷನ್​ ಅಧಿಕಾರಿಗಳೊಂದಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಇತ್ತೀಚೆಗೆ ಸಭೆ ನಡೆಸಿದ್ದರು. ಮುಂಚೂಣಿ ನೆಲೆಗಳಿಗೆ ಸಂಪರ್ಕ ಒದಗಿಸುವ 30 ಸೇತುವೆಗಳ ನಿರ್ಮಾಣ ಕಾಮಗಾರಿ ಸೇರಿ ಒಟ್ಟು 20 ಸಾವಿರ ಕೋಟಿ ರೂ. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು ಎನ್ನಲಾಗಿದೆ.

ಬಿಕ್ಕಟ್ಟಿನ ಪರಿಸ್ಥಿತಿಗಳು ತಿಂಗಳುಗಟ್ಟಲೆ ವಿಸ್ತರಣೆಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಅದನ್ನು ಗಮನದಲ್ಲಿಟ್ಟುಕೊಂಡು ವಾಸ್ತವ ಗಡಿರೇಖೆಯ ಮುಂಚೂಣಿ ನೆಲೆಗಳಿಗೆ ಸೇನೆ, ಯುದ್ಧೋಪಕರಣಗಳು ತ್ವರಿತವಾಗಿ ತಲುಪಲು ಅನುವಾಗುವಂತೆ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net