

ನವದೆಹಲಿ: ಆಗಸ್ಟ್ 15ರ ಗುರಿ ಹೊಂದಿರುವ ದೇಶಿಯ ಕರೊನಾ ಲಸಿಕೆ ಕೊವಾಕ್ಸಿನ್ಅನ್ನು ಮೊದಲ ಹಂತದಲ್ಲಿ 375 ಜನರಿಗೆ ನೀಡಲಾಗುತ್ತಿದೆ.
ದೇಶದ 12 ವೈದ್ಯಕೀಯ ಸಂಸ್ಥೆಗಳಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ಅನ್ನು ಮಾನವರ ಮೇಲೆ ಪ್ರಯೋಗ (ಕ್ಲಿನಿಕಲ್ ಟ್ರಯಲ್) ಮಾಡಲಾಗುತ್ತಿದೆ.
ಅತ್ಯಂತ ಭರವಸೆದಾಯಕ ಎನಿಸಿರುವ ಈ ಲಸಿಕೆಯ ಪ್ರಯೋಗಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್ ) ಸಾಥ್ ನೀಡಿದೆ. ಲಸಿಕೆಗೆ ಒಳಗಾಗುವ ವ್ಯಕ್ತಿಗಳ ನೋಂದಣಿಗೆ ಜುಲೈ 13ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲ ಹಂತದಲ್ಲಿ 375 ಹಾಗೂ ಎರಡನೇ ಹಂತದಲ್ಲಿ 750 ಜನರ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿಯ ಸಂಶೋಧಕರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 15ಕ್ಕೆ ಈ ಲಸಿಕೆ ಹಣೆಬರಹವನ್ನು ತಿಳಿದುಕೊಳ್ಳಲು ಆತುರ ತೋರಿಸಲಾಗುತ್ತಿದೆಯಾದರೂ, ಮೊದಲ ಹಂತದ ಪ್ರಯೋಗವೇ ಮೂರು ತಿಂಗಳವರೆಗೆ ನಡೆಯಲಿದೆ ಎಂದು ಈ ಕಾರ್ಯದಲ್ಲಿ ತೊಡಗಿಕೊಂಡಿರುವ ತಜ್ಞರು ತಿಳಿಸಿದ್ದಾರೆ. ಹೀಗಾಗಿ ಆಗಸ್ಟ್ 15ರ ವೇಳೆಗೆ ರೊಗಿಗಳ ಬಳೆಗೆ ದೊರೆಯುವುದು ಅಸಾಧ್ಯ ಎಂಬುದು ಸ್ಪಷ್ಟವಾಗಿದೆ.
ಇನ್ನೊಂದೆಡೆ, ಲಸಿಕೆಯ ಕ್ಲಿನಿಕಲ್ ಟ್ರಯಲ್ನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಮಾಡೆರ್ನಾ ಕಂಪನಿ ಅಂತಿಮ ಹಂತದಲ್ಲಿ 30,000 ಜನರ ಮೇಲೆ ಔಷಧ ಪ್ರಯೋಗಿಸಲಿದೆ. ಈ ಕಾರ್ಯವನ್ನು ಕೊಂಚ ವಿಳಂಬಗೊಳಿಸಿದೆ ಎಂದು ಹೇಳಲಾಗಿದೆ. ಆಕ್ಸ್ಫರ್ಡ್ ವಿವಿಯ ಲಸಿಕೆ ಪ್ರಯೋಗ ಮೂರನೇ ಹಂತದಲ್ಲಿ ಮುಂದುವರಿದಿದೆ.