ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

corona vaccine receiver
Published on

ನ್ಯೂಯಾರ್ಕ್​: ಅಮೆರಿಕದ ಮಾಡೆರ್ನಾ (ModeRNA) ಅಭಿವೃದ್ಧಿಪಡಿಸುತ್ತಿರುವ ಕರೊನಾಗೆ ಲಸಿಕೆ ಮಾನವರ ಮೇಲಿನ ಪ್ರಯೋಗ (ಕ್ಲಿನಿಕಲ್​ ಟ್ರಯಲ್​) ಯಶಸ್ವಿಯಾಗಿತ್ತು. ಇದನ್ನು ಕಂಪನಿಯೇ ಘೋಷಿಸಿತ್ತು. ಇದಾದ ಬಳಿಕ ಕಂಪನಿಯ ಷೇರುಗಳ ಮೌಲ್ಯದಲ್ಲಿ ಭಾರಿ ಏರಿಕೆಯಾಗಿತ್ತು.

ಮಾಡೆರ್ನಾ ಕಂಪನಿ ಕಳೆದ ಏಪ್ರಿಲ್​ ತಿಂಗಳಲ್ಲಿಯೇ ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸಿತ್ತು. ಒಟ್ಟು 45 ಜನರು ಇದರ ಭಾಗವಾಗಿದ್ದರು. ಈ ಪೈಕಿ ಸಿಯಾಟಲ್​ ಇಯಾನ್​ ಹೇಡನ್​ ಮೊದಲಿಗನಾಗಿ ಕರೊನಾ ಲಸಿಕೆ ಪಡೆದುಕೊಂಡಿದ್ದ. ಈತ ಸಿಯಾಟಲ್​ನ ಬಯೋಟೆಕ್​ ಕಂಪನಿಯೊಂದರ ಉದ್ಯೋಗಿಯಾಗಿದ್ದ.

ಗೆಳೆಯನ ಮೂಲಕ ಕ್ಲಿನಿಕಲ್​ ಟ್ರಯಲ್​ ಮಾಹಿತಿ ಪಡೆದ ಈತ, ಅರ್ಜಿ ತುಂಬಿ ಕಂಪನಿಗೆ ಸಲ್ಲಿಸಿದ್ದ. 29 ವರ್ಷದ ಮ್ಯಾರಥಾನ್​ ಓಟಗಾರ ಇಯಾನ್​ ಆರೋಗ್ಯವಂತನಾಗಿದ್ದ. ಈತನನ್ನು ಕರೆಸಿಕೊಂಡ ಕಂಪನಿ ಐದಾರು ವಾಯಲ್​ಗಳಲ್ಲಿ ರಕ್ತವನ್ನು ಪಡೆದು ಪರೀಕ್ಷೆಗೆ ಒಳಪಡಿಸಿತ್ತು. ಬಳಿಕ ಲಸಿಕೆ ನೀಡಲು ಆಯ್ಕೆ ಮಾಡಿತ್ತು.

ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಯಾವುದೇ ಅನಿರೀಕ್ಷಿತ ಅಪಾಯಗಳನ್ನು ಎದುರಿಸಲು ಸಜ್ಜಾಗಿರಬೇಕೆಂದು ತಿಳಿಸಲಾಗಿತ್ತು. ಅಂತೆಯೇ ಮೊದಲ ಬಾರಿಗೆ ಲಸಿಕೆ ನೀಡಿದಾಗ ಈತನಿಗೆ ಸಾವರಿಸಿಕೊಳ್ಳಲು ಕೊಂಚ ಸಮಯ ಬೇಕಾಯಿತು. ಇಂಜಕ್ಷನ್​ ನೀಡಿದ ಜಾಗದಲ್ಲಿ ಚಿಕ್ಕದೊಂದು ಬೊಬ್ಬೆ ಎದ್ದಿತ್ತು. ಆರೋಗ್ಯದಲ್ಲಿ ಉಂಟಾಗಬಹುದಾದ ಏರುಪೇರುಗಳನ್ನು ದಾಖಲಿಸಿಕೊಳ್ಳಲು ಡೈರಿ ಹಾಗೂ ಥರ್ಮಾಮೀಟರ್​ ನೀಡಿದ್ದರು. ಇದಾದ 28 ದಿನಗಳ ಬಳಿಕ ಎರಡನೇ ಚುಚ್ಚುಮದ್ದು ನೀಡುವುದಾಗಿ ತಿಳಿಸಿದ್ದರು.ನನಗೆ ಎಲ್ಲರಿಗಿಂತ ಹೆಚ್ಚಿನ ಡೋಸ್​ ನೀಡಲಾಗಿತ್ತು. ಈ ಅವಧಿಯಲ್ಲಿ ನನ್ನ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಉಂಟಾಗಿರಲಿಲ್ಲ. ಎಲ್ಲವೂ ಸಾಮಾನ್ಯವಾಗಿತ್ತು. ಆದರೆ, ಏನಾಗುವುದೆಂಬ ಆತಂಕ ಇದ್ದೇ ಇತ್ತು ಎಂದು ಇಯಾನ್​ ಹೇಳುತ್ತಾರೆ.

ಎರಡನೇ ಬಾರಿ ಲಸಿಕೆ ಪಡೆಯಲು ಬಂದಾಗ ಎಲ್ಲವೂ ಮೊದಲಿನಂತಿರಲಿಲ್ಲ ಹಾಗೂ ತೋಳಿನಲ್ಲಿ ಭಾರಿ ನೋವುಂಟಾಗಿತ್ತು. ನನಗೆ ಇತರರಗಿಂತ ಅಂದಾಜು 10 ಹಟ್ಟು ಹೆಚ್ಚು ಡೋಸ್​ ನೀಡಲಾಗಿತ್ತು. ಅಂದಿನ ರಾತ್ರಿ ಚಳಿಯಿಂದ ನಡುಗುತ್ತಿದ್ದೆ. ಸಮಯ ಕಳೆದಂತೆ ವಾಕರಿಕೆ, ತಲೆನೋವು, ಸ್ನಾಯು ಸೆಳೆತ ಉಂಟಾಗಿತ್ತು. ಜ್ವರ 103 ಡಿಗ್ರಿಯಾಗಿತ್ತು. ಚಳಿ ಶುರುವಾಗಿತ್ತು. ಬೆಚ್ಚನೆಯ ಉಡುಪು ಧರಿಸಿದರೂ ನಡುಕ ನಿಲ್ಲಲಿಲ್ಲ. ಕೊನೆಗೆ ಬೆಳಗಿನ ಜಾವ ವೈದ್ಯರಲ್ಲಿಗೆ ಹೋದೆ. ಇದಕ್ಕೆಂದೇ ದಿನದ 24 ತಾಸು ಸಂಪರ್ಕದಲ್ಲಿರುವ ವೈದ್ಯರ ದೂರವಾಣಿ ಸಂಖ್ಯೆಯನ್ನು ನಮಗೆ ನೀಡಲಾಗಿರುತ್ತದೆ.

ಸಂಪೂರ್ಣವಾಗಿ ಸುರಕ್ಷಾ ಕವಚ ಧರಿಸಿದ್ದ ದಾದಿಯರು ಹಾಗೂ ವೈದ್ಯರು ಪರೀಕ್ಷೆ ನಡೆಸಿದರು. ನಾನು ಬಂದಿದ್ದು ಒಳ್ಳೆಯದೇ ಆಯಿತು ಎಂದರು. ಜ್ವರ ಇಳಿಯುವ ಹಾಗೂ ಇತರ ಅನಾರೋಗ್ಯದ ಲಕ್ಷಣಗಳಿಗೆ ಔಷಧ ನೀಡಿದರು. ಮರುದಿನ ಬೆಳಗ್ಗೆ ಜ್ವರ ಕಡಿಮೆಯಾಯಿತು. ಮಧ್ಯಾಹ್ನದ ವೇಳೆಗೆ ವಾಕರಿಕೆ ಜೋರಾಗಿತ್ತು. ಬಾತ್​ರೂಮ್​ಗೆ ಹೋದವನಿಗೆ ನಿಲ್ಲಲಾಗುತ್ತಿರಲಿಲ್ಲ. ಅಷ್ಟರಲ್ಲಿ ನನ್ನ ಗೆಳತಿ ಬಂದು ಆಸರೆಯಾದಳು. ನೆಲದ ಮೇಲೆ ಮಲಗಿದವನಿಗೆ ಏನಾಗುತ್ತಿದೆ ಎಂಬುದರ ಅರಿವೇ ಇರಲ್ಲಿಲ್ಲ. ವೈದ್ಯರು ನನಗೆ ಚಿಕಿತ್ಸೆ ನೀಡಿದರು. ನನಗೆ ಅಷ್ಟೊಂದು ಅನಾರೋಗ್ಯ ಕಾಡಿದ್ದು ಅದೇ ಮೊದಲ ಬಾರಿ ಎಂದು ಇಯಾನ್​ ಸ್ಮರಿಸಿಕೊಳ್ಳುತ್ತಾರೆ. ಮರುದಿನದ ಹೊತ್ತಿಗೆ ಮತ್ತೆ ಮೊದಲಿನಂತಾಗಿದ್ದರು.

ಕೆಲವರು ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡಿದ್ದಕ್ಕೆ ಟೀಕಿಸಿದರು. ಆದರೆ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಹೆಮ್ಮೆಯಿದೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಮೊದಲ ಹಂತದ ಪರೀಕ್ಷೆ ಒಟ್ಟು 14 ತಿಂಗಳು ನಡೆಯಲಿದೆ. ಅಲ್ಲಿಯವರೆಗೆ ಆಗಾಗ ನಾನು ವೈದ್ಯರನ್ನು ಭೇಟಿಯಾಗಬೇಕು ಎಂದು ಇಯಾನ್​ ಮಾಹಿತಿ ನೀಡುತ್ತಾರೆ.

ಕ್ಲಿನಿಕಲ್​ ಟ್ರಯಲ್​ ಎಂದರೆ ತೆಳುವಾದ ಮಂಜಿನ ಪದರದ ಮೇಲೆ ನಡೆದು ಎಲ್ಲಿಯಾದರೂ ಬಿರುಕುಗಳಿವೆಯೇ ಎಂಬುದನ್ನು ಪರೀಕ್ಷಿಸುವುದು. ಮತ್ತೆ ಬೇರೊಂದು ದಿಕ್ಕಿನಲ್ಲಿ, ಬೇರೆ ಪ್ರದೇಶಗಳಲ್ಲಿ ಇದನ್ನು ಮಾಡುತ್ತ ಮುಂದುವರಿಯುವುದು. ನೀವು ಕೊಂಚ ವೇಗವಾಗಿ ಸಾಗಬಹುದು. ಆದರೆ, ಕಣ್ಣುಮುಚ್ಚಿ ಸಾಗಲಾಗುವುದಿಲ್ಲ. ನಮಗೆ ಅಲ್ಲಿ ಯಾವುದೇ ಬಿರುಕುಗಳಿಲ್ಲ ಎಂಬುದು ದೃಢವಾಗಬೇಕು ಎಂದು ಲಸಿಕೆಯ ಮಾನವರ ಮೇಲಿನ ಪ್ರಯೋಗವನ್ನು ಬಣ್ಣಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net