ಕನ್ನಡ ಓದಲು ಬರದಿದ್ದರೂ ಕೆಪಿಎಸ್​ಸಿ ಪರೀಕ್ಷೆ ಪಾಸ್!

KPSC (1)
Published on

ಬೆಂಗಳೂರು: ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಂದರ್ಶನದಲ್ಲಿ ಕನ್ನಡ ಓದಲು ಮತ್ತು ಬರೆಯಲು ಬರದಿರುವ ಕಾರಣ ಕೆಪಿಎಸ್​ಸಿ ನಿಯಮ ಉಲ್ಲಂಘಿಸಿರುವುದು ಸಾಬೀತಾಗಿದ್ದು, ಇಬ್ಬರನ್ನು ಡಿಬಾರ್ ಮಾಡಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಇಲಾಖಾ ಪರೀಕ್ಷೆಗಳಲ್ಲಿ ಪರೀಕ್ಷೆ ಸೂಚನೆ ಉಲ್ಲಂಘಿಸಿ ದುರಾಚಾರ ಎಸಗಿರುವವರು ಸಿಕ್ಕಿಬಿದ್ದಿದ್ದಾರೆ. ಅಚ್ಚರಿ ಎಂದರೆ ‘ಕನ್ನಡ’ವೇ ಅವರ ಬಂಡವಾಳ ಬಯಲು ಮಾಡಿದೆ.

ಪ್ರಕರಣ ಏನು?: 2022ರ ಫೆ.22ರಂದು ಕಲಬುರಗಿ ಶ್ರೀ ವಿಜಯ ವಿದ್ಯಾಲಯದಲ್ಲಿ ಕನ್ನಡ ಭಾಷಾ ಲಿಖಿತ ಪರೀಕ್ಷೆಯಲ್ಲಿ ಫರ್ಕಂಡಾ ಅಂಜುಮ್ (ನೋಂದಣಿ ಸಂಖ್ಯೆ: 1307012) ಮತ್ತು ಸಂಧ್ಯಾ ರೆಡ್ಡಿ (ನೋಂದಣಿ ಸಂಖ್ಯೆ 1307005) ಉತ್ತೀರ್ಣರಾಗಿದ್ದರು. ಮುಂದಿನ ಆಯ್ಕೆ ಪ್ರಕ್ರಿಯೆ ಭಾಗವಾಗಿ 2023ರ ಜ.9 ಮತ್ತು 10ರಂದು ಕಲಬುರಗಿ ವಿಭಾಗೀಯ ಕೇಂದ್ರದಲ್ಲಿ ನಡೆದ ಇಲಾಖಾ ಪರೀಕ್ಷೆಯ ಕನ್ನಡ ಭಾಷಾ ವಿಷಯದ (ವಿಷಯ ಸಂಕೇತ 47) ಮೌಖಿಕ ಸಂದರ್ಶನಕ್ಕೆ ಹಾಜರಾಗಿದ್ದರು. ಮೌಖಿಕ ಸಂದರ್ಶನ ಸಮಯದಲ್ಲಿ ಕನ್ನಡ ಭಾಷೆಯನ್ನು

ಓದಲು ಮತ್ತು ಬರೆಯಲು ಬಾರದಿರುವ ಕಾರಣ ಸಂದರ್ಶನ ಸಮಿತಿ ಸದಸ್ಯರು ಈ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವುದು ಸೂಕ್ತ ಎಂದು ಅಭಿಪ್ರಾಯಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಲಾಯಿತು.

ಈ ವೇಳೆ ಸಂಶಯಾಸ್ಪದವಾಗಿ ಹಾಗೂ ಪತ್ರಿಕೆ-1 ಮತ್ತು ಪತ್ರಿಕೆ-2 ಕೈ ಬರವಣಿಗೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆಹಿಡಿಯಲಾಯಿತು. ಬಳಿಕ ಈ ಇಬ್ಬರು ಅಭ್ಯರ್ಥಿಗಳಿಗೆ ಹಾಗೂ ಪರೀಕ್ಷಾ ಉಪಕೇಂದ್ರದ ಮೇಲ್ವಿಚಾರಕರಿಗೆ ಮತ್ತು ಕೊಠಡಿಯ ಸಂವೀಕ್ಷಕರಿಗೆ ನೋಟಿಸ್ ನೀಡಿ ಲಿಖಿತ ರೂಪದಲ್ಲಿ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿತ್ತು.

ಸಮಜಾಯಿಷಿ: ಸಂಧ್ಯಾ ರೆಡ್ಡಿ, ಕನ್ನಡ ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಕೈ ಬರವಣಿಗೆಯು ತಮ್ಮದೇ ಆಗಿದ್ದು, ಪೆನ್ನು ಬದಲಾಯಿಸಿದ್ದೆ. ಸಮಯದ ಅಭಾವ ಇದ್ದುದರಿಂದ ವೇಗವಾಗಿ ಬರೆದಿರುವುದಾಗಿ ಹೇಳಿ ಸಮರ್ಥಿಸಿಕೊಂಡಿದ್ದರು. ಫರ್ಕಂಡಾ ಅಂಜುಮ್ ಮಾತ್ರ ಯಾವುದೇ ಸಮಜಾಯಿಷಿ ನೀಡದೇ ತಪ್ಪೊಪ್ಪಿಕೊಂಡಿದ್ದರು. ಹಾಗೆಯೇ ಪರೀಕ್ಷಾ ಕೇಂದ್ರದ ಸಂವೀಕ್ಷಕರು ಸಮಜಾಯಿಷಿ ನೀಡಿ, ತಾವು ಕಾರ್ಯನಿರ್ವಹಿಸಿದ ಕೊಠಡಿಗೆ ಸಂಬಂಧಿಸಿದಂತೆ ಎಲ್ಲ ಅಭ್ಯರ್ಥಿಗಳ ಪ್ರವೇಶಪತ್ರಗಳನ್ನು ನಾಮಿನಲ್ ರೋಲ್​ನೊಂದಿಗೆ ತಾಳೆ ನೋಡಿ ಪರಿಶೀಲಿಸಿ, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದ್ದು, ಯಾವುದೇ ಅಕ್ರಮ ನಡೆಯದಂತೆ ಕಾರ್ಯ ನಿರ್ವಹಿಸಿರುವುದಾಗಿ ಸಮಜಾಯಿಷಿ ನೀಡಿದ್ದರು.

ಕಠಿಣ ನಿರ್ಧಾರ: ಸಂವೀಕ್ಷಕರು, ಮೇಲ್ವಿಚಾರಕರು ಹಾಗೂ ಒಬ್ಬ ಅಭ್ಯರ್ಥಿಯು ಸಲ್ಲಿಸಿರುವ ಸಮಜಾಯಿಷಿಗಳು ಸಮಂಜಸವಾಗಿಲ್ಲ ಎಂದು ಕೆಪಿಎಸ್ಸಿ ತೀರ್ವನಕ್ಕೆ ಬಂದಿದೆ. ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿರುವ ಇಬ್ಬರು ಅಭ್ಯರ್ಥಿಗಳ ಅಭ್ಯರ್ಥಿತ್ವ ರದ್ದುಪಡಿಸುವುದು ಹಾಗೂ ಪರೀಕ್ಷೆ ನಡೆಸಿದ ಕಾಲೇಜು ಆಡಳಿತ ಮಂಡಳಿಗೆ ಪತ್ರ ಬರೆದು ಪರೀಕ್ಷಾ ಉಪ ಕೇಂದ್ರ ಮೇಲ್ವಿಚಾರಕರ ಮತ್ತು ಕೊಠಡಿ ಸಂವೀಕ್ಷಕರುಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳುವಂತೆ ಸೂಚಿಸಲು ಆಯೋಗ ಸಭೆಯಲ್ಲಿ ನಿರ್ಣಯಿಸಿತು.

ಕಾಣದ ಕೈಗಳ ಕೈವಾಡ: ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದಂತೂ ಆಯೋಗದ ಅರಿವಿಗೆ ಬಂದಿದೆ. ಆದರೆ, ಯಾವ ಹಂತದಲ್ಲಿ ಅಕ್ರಮ ಆಗಿಬರಹುದು ಮತ್ತು ಅಭ್ಯರ್ಥಿಗಳ ಬದಲು ಬೇರೆಯವರು ಪರೀಕ್ಷೆ ಬರೆದರೇ ಎಂಬುದು ಸ್ಪಷ್ಟವಾಗಿಲ್ಲ. ಪರೀಕ್ಷಾ ಮೇಲ್ವಿಚಾರಕರ ಪ್ರಕಾರ ಅಭ್ಯರ್ಥಿಯೇ ಪರೀಕ್ಷೆ ಬರೆದಿದ್ದಾರೆ. ಹಾಗಿದ್ದರೆ ಬೇರೆ ಕೈ ಬರಹದ ಉತ್ತರ ಪತ್ರಿಕೆಯನ್ನು ಎಲ್ಲಿ ಬರೆಯಲಾಯಿತು, ಬರೆದವರು ಯಾರೆಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಅಭ್ಯರ್ಥಿಗಳಿಂದ ದೊಡ್ಡ ಮಟ್ಟದ ಹಣ ಪಡೆದಿರುವ ಜಾಲವೊಂದು ಕಾರ್ಯಾಚರಣೆ ನಡೆಸಿರುವ ಶಂಕೆಯೂ ಇದೆ. ಜತೆಗೆ ಇನ್ನು ಕೆಲವರು ಇದೇ ಮಾದರಿಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಮುಂದುವರಿದಿರುವ ಸಾಧ್ಯತೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net