ನಾಳೆ ವಿಶ್ವ ಆಹಾರ ದಿನ: ನಾವು ಆಹಾರವನ್ನು ಹೇಗೆ ನೋಡಬೇಕು, ಹೇಗೆ ಸೇವಿಸಬೇಕು?

World Food Day 23
Published on

ಬೆಂಗಳೂರು: ಮನುಷ್ಯ ಸೇರಿದಂತೆ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಆಹಾರ ಅತಿಮುಖ್ಯ. ಜೀವದ ಉಳಿವಿಗೆ, ದೇಹದ ಬೆಳವಣಿಗೆಗೆ, ಶಕ್ತಿಗೆ ಆಹಾರ ಬೇಕೇ ಬೇಕು. ಹಾಗೆಂದೇ 'ಎಲ್ಲರೂ ಮಾಡುವುದು ಹೊಟ್ಟೆಗಾಗಿ..' ಎಂಬ ಮಾತೇ ಇದೆ. ಮಾತ್ರವಲ್ಲ, ಆಹಾರದ ಮಹತ್ವ ತಿಳಿಸಲು ಪ್ರತಿ ವರ್ಷ ಅ. 16ರಂದು ವಿಶ್ವ ಆಹಾರ ದಿನ ಎಂದು ಆಚರಿಸಲಾಗುತ್ತಿದೆ.

ನಾಳೆ ವಿಶ್ವ ಆಹಾರ ದಿನ. ಎಲ್ಲರಿಗೂ ಆಹಾರ ಬೇಕಂತಾದರೂ ಎಲ್ಲರ ಆಹಾರ ಪದ್ಧತಿ ಒಂದೇ ಆಗಿರುವುದಿಲ್ಲ. ಆಹಾರದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಆಯ್ಕೆ ಅಭಿರುಚಿ ಇರುತ್ತದೆ. ಹೀಗಿರುವಾಗ ಅದನ್ನು ತಿನ್ನಿ, ಇದನ್ನು ತಿನ್ನಬೇಡಿ ಎನ್ನುವುದೆಲ್ಲ ಸರಿಯಾಗುವುದಿಲ್ಲ.

ಆದರೆ ಯಾವುದೇ ಆಹಾರವನ್ನು ನಾವು ಹೇಗೆ ನೋಡುತ್ತೇವೆ ಮತ್ತು ಅದನ್ನು ಹೇಗೆ ಸೇವಿಸುತ್ತೇವೆ ಎಂಬುದು ಅತ್ಯಂತ ಮುಖ್ಯವಾಗಿರುತ್ತದೆ. ಇದು ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಹಾರದ ವಿಚಾರದಲ್ಲಿ ಗಣ್ಯರಾದ ಸದ್ಗುರು ಹಾಗೂ ಮಹಾತ್ರಿಯ ಅವರ ಎರಡು ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ತಟ್ಟೆಯಲ್ಲಿರುವ ಆಹಾರ ವಸ್ತುವಲ್ಲ, ಸಾಮಗ್ರಿ ಅಲ್ಲ, ಅದು ಜೀವ. ಅದು ಜೀವವೇ ಆಗಿಬಿಡುವ ಅಂಶ. ತಟ್ಟೆಯಲ್ಲಿದ್ದಾಗ ಅದಕ್ಕೆ ಬೆಲೆ ಇಲ್ಲ. ಹೊಟ್ಟೆಗೆ ಸೇರಿದ ಬಳಿಕ ಅದು ನಮ್ಮ ರಕ್ತ-ಮಾಂಸ ಆಗಿಬಿಡುತ್ತದೆ, ಆಗ ಅದಕ್ಕೆ ತುಂಬಾ ಬೆಲೆ ಕೊಡುತ್ತೇವೆ. ಆದರೆ ಅದೇ ಆಹಾರ ಹೊರಗೆ ಇದ್ದಾಗ ನಾವು ಯಾಕೆ ಅದನ್ನು ಹಾಗೆ ಭಾವಿಸುವುದಿಲ್ಲ? ಆಹಾರವನ್ನು ತಟ್ಟೆಯಲ್ಲಿದ್ದಾಗಲೇ ಅದನ್ನು ನಾವು ನಮ್ಮ ಜೀವದ ಭಾಗ ಎಂಬಂತೆ ನೋಡಬೇಕು, ಅಷ್ಟೇ ಗೌರವದಿಂದ ಕಾಣಬೇಕು ಎಂಬುದಾಗಿ ಸದ್ಗುರು ಹೇಳುತ್ತಾರೆ.

ನಾವು ಆಹಾರವನ್ನು ಆಹಾರವಾಗಿ ಕಾಣುತ್ತಿಲ್ಲ. ಅದನ್ನು ಕಾರ್ಬೋಹೈಡ್ರೇಟ್, ಪ್ರೊಟೀನ್, ಫ್ಯಾಟ್ ಎಂದೆಲ್ಲ ನೋಡುತ್ತಿದ್ದೇವೆ. ಕ್ಯಾಲರಿ ಲೆಕ್ಕದಲ್ಲಿ ಅಳೆಯುತ್ತಿದ್ದೇವೆ. ನಾವು ಆಹಾರವನ್ನು ಶತ್ರು ಥರ ನೋಡುತ್ತಿದ್ದೇವೆ. ಆಹಾರ ಸಂತೋಷದ ಮೂಲ ಆಗಿರಬೇಕು. ಹಾಗಿರದೇ ಹೋದರೆ ನಾವು ನಮ್ಮ ಪಥ್ಯ ಹೇಗೇ ಇದ್ದರೂ ಪ್ರಯೋಜನವಿಲ್ಲ. ಆಹಾರವನ್ನು ಸಂತೋಷವಾಗಿ ತಯಾರಿಸಬೇಕು, ಆಹಾರವನ್ನು ಸಂತೋಷವಾಗಿ ಬಡಿಸಬೇಕು ಮತ್ತು ಆಹಾರವನ್ನು ಸಂತೋಷವಾಗಿ ಸೇವಿಸಬೇಕು. ಅದಾಗ್ಯೂ ಮೊದಲೆರಡು ಸಂಗತಿ ಬಹಳಷ್ಟು ಸಲ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ಕಡೇಪಕ್ಷ ನಾವು ಆಹಾರವನ್ನು ಸೇವಿಸುವಾಗಲಾದರೂ ಸಂತೋಷವಾಗಿರಬೇಕು ಎಂದು ಮಹಾತ್ರಿಯ ಹೇಳುತ್ತಾರೆ.

ಏನು ಈ ಸಲದ ಥೀಮ್?

ಪ್ರತಿ ವಿಶ್ವ ಆಹಾರ ದಿನಕ್ಕೂ ಒಂದು ಧ್ಯೇಯ ಇರುತ್ತದೆ. ಈ ಸಲದ ವಿಶ್ವ ಆಹಾರ ದಿನದ ಥೀಮ್​ ನೀರು. 'ನೀರೇ ಜೀವ, ನೀರೇ ಆಹಾರ, ಯಾರನ್ನೂ ಹಿಂದೆ ಬಿಡಬೇಡಿ' ಎನ್ನುವುದು ಈ ಸಲದ ವಿಶ್ವ ಆಹಾರ ದಿನದ ಧ್ಯೇಯವಾಕ್ಯ. ಈ ಭೂಮಿ ಮೇಲೆ ನೀರಿನ ಮಹತ್ವ, ಅದು ಆಹಾರದ ಬುನಾದಿ ಎಂಬುದನ್ನು ಸಾರಲಾಗುತ್ತಿದೆ.

ವಿಶ್ವದಲ್ಲಿ ಪೌಷ್ಠಿಕ ಆಹಾರ ಸರಿಯಾಗಿ ಸಿಗದ, ಆಹಾರಕ್ಕೂ ಗತಿ ಇರದ ಲಕ್ಷಾಂತರ ಮಂದಿ ಇದ್ದಾರೆ ಎಂಬುದನ್ನು ಎತ್ತಿ ತೋರಿಸಲು ಪ್ರತಿ ವರ್ಷ ಅ. 16ರಂದು ವಿಶ್ವ ಆಹಾರ ದಿನ ಆಚರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net