

ರಾಮನಗರ: ಮಾಗಡಿಯಲ್ಲಿಂದು ನಡೆದ ಪ್ರಜಾಧ್ವನಿ ಯಾತ್ರೆಯ ವೇಳೆ ಕಾರ್ಯಕರ್ತರನ್ನು ಬೇವರ್ಸಿಗಳು ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮ್ಮ ಭಾಷಣದ ವೇಳೆ ಹಿಂದೆ ಯಾರು ನಿಲ್ಲದಂತೆ ಡಿಕೆಶಿ ಕಾರ್ಯಕರ್ತರಿಗೆ ಹೇಳಿದರು. ನಾನು ದೂರದಲ್ಲಿ ಇದೀನಿ ಹಿಂದೆ ಕುಳಿತಿರುವವರಿಗೆ ಕಾಣಲಿ ಅಂತ ಎಲ್ಇಡಿ ಪರದೆ ಹಾಕಿದ್ದಾರೆ. ಇವರೆಲ್ಲ ಅಡ್ಡ ಬಂದ್ಬಿಟ್ರು ಬೇವರ್ಸಿಗಳು ಎಂದು ತೆಗಳಿದ್ದಾರೆ.
ಮಾಗಡಿ ವಿಧಾನಸಭಾ ಕ್ಷೇತ್ರದ ಜಾಲಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಕಾರ್ಯಕರ್ತರಿಗೆ ಬೈದ ವಿಡಿಯೋ ಇದೀಗ ವೈರಲ್ ಆಗಿದ್ದು, ಬಿಜೆಪಿಗೆ ಹೊಸ ಅಸ್ತ್ರವೊಂದು ಸಿಕ್ಕಂತಾಗಿದೆ.
ಇದೇ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿಸ ಡಿಕೆಶಿ, 2023ರ ವಿಧಾನಸಭಾ ಚುನಾವಣೆಯ ಸರ್ವೆಯನ್ನು ನಾನು ಮಾಡಿಸಿದ್ದೇನೆ. ಕಾಂಗ್ರೆಸ್ 139 ರಿಂದ 140 ಸೀಟ್ ಗೆಲ್ಲುತ್ತದೆ. ಬಿಜೆಪಿ 65 ಸೀಟ್ ಗೆಲ್ಲಬಹುದು. ಉಳಿದದ್ದು ಎಷ್ಟು ಎಂದು ನೀವೆ ಲೆಕ್ಕಹಾಕಿಕೊಳ್ಳಿ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ಗೆ 19 ರಿಂದ 20 ಸೀಟ್ ಬರುತ್ತೆ ಎಂದರು.
ಇದೇ ವೇಳೆ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಹೊಸದೇನಲ್ಲ, ಮೊದಲಿನಿಂದ ಅವರು ಬಿಜೆಪಿಗೆ ಬೆಂಬಲಿಸ್ತಿದ್ರು. ಅವರ ಇಷ್ಟದ ಹಾಗೆ ಅವರು ಮಾಡ್ತಾರೆ. ಅದು ಅವರ ವೈಯಕ್ತಿಕ ವಿಚಾರ. ಅವರು ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಬಹುದು. ಅವರಿಗೆ ಒಳ್ಳೆದಾಗಲಿ ಎಂದರು. (ಏಜೆನ್ಸೀಸ್)