

ರಾಮನಗರ: ನಾನು ಸರ್ವೆ ಮಾಡಿಸಿದ್ದೇನೆ, ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ಹಿಡಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಮಾಗಡಿಯಲ್ಲಿ ಇಂದು (ಮಾ.10) ನಡೆದ ಪ್ರಜಾಧ್ವನಿ ಯಾತ್ರೆಯನ್ನು ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ ಡಿಕೆಶಿ, ನಾನು ಹೊರಗಡೆಯಿಂದ ಬಂದವನಲ್ಲ. ನಾನು ಇದೇ ಜಿಲ್ಲೆಯ ಮಗ. ನಾನು ಸತ್ತರೆ ದೊಡ್ಡ ಆಲನಹಳ್ಳಿ ಮಣ್ಣಲ್ಲಿ ನನ್ನನ್ನು ಹೂಳ್ತಾರೆ. ನನ್ನನ್ನು ಬೇರೆ ಊರಿಗೆ ತೆಗೆದುಕೊಂಡು ಹೋಗಲ್ಲ. ನೀವು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಒಂದು ಅವಕಾಶ ಕೊಟ್ಟಿದ್ದೀರಿ, ಈ ಬಾರಿ ನಮಗೂ ಒಂದು ಅವಕಾಶ ಕೊಡಿ ಎಂದು ಕೇಳಿದರು.
ನಾನು ಈಗಾಗಲೇ ಸರ್ವೆ ಮಾಡಿಸಿದ್ದೇನೆ, ಈ ಬಾರಿ 140 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಸಾಕಷ್ಟು ಮಂದಿ ರಾಜಕಾರಣಿಗಳು ಕಾಂಗ್ರೆಸ್ ಸೇರ್ತಿದ್ದಾರೆ. ಶಿವಲಿಂಗೇಗೌಡ, ಮಧು ಬಂಗಾರಪ್ಪ, ಕೋಲಾರ ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್, ಎಂಎಲ್ಸಿ ಪುಟ್ಟಣ್ಣ ಹಾಗೂ ತೀರ್ಥಹಳ್ಳಿ ಮಂಜುನಾಥ್ ಸೇರಿ ಅನೇಕರು ಕಾಂಗ್ರೆಸ್ ಗೆ ಬರ್ತಿದ್ದಾರೆ ಎಂದರು.
ಇದೇ ವೇಳೆ ಕಾರ್ಯಕರ್ತನೊಬ್ಬ ಸೋಮಣ್ಣ ಎಂದು ಹೆಸರೇಳಿದರು, ಅದಕ್ಕೆ ಈಗ ಸೋಮಣ್ಣ ಅವರ ವಿಚಾರ ಬೇಡ ಎಂದು ಡಿಕೆಶಿ ಎಂದರು. (ಏಜೆನ್ಸೀಸ್)