ಕ್ಷಿಪಣಿ ಉತ್ಪಾದನೆ ಹೆಚ್ಚಿಸುವಂತೆ ಆದೇಶಿಸಿದ ಕಿಮ್‍ ಜಂಗ್‍ ಉನ್! ಹೊಸ ಯುದ್ಧಕ್ಕೆ ಸಿದ್ಧತೆ?

Kim jong un
Published on

ನವದೆಹಲಿ: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಕ್ಷಿಪಣಿ ಉತ್ಪಾದನೆಯನ್ನು ಹೆಚ್ಚಿಸಲು ಕರೆ ನೀಡಿದ್ದಾರೆ ಎಂದು ಉ.ಕೊರಿಯಾದ ಏಕೈಕ ಹಾಗೂ ಅಧಿಕೃತ ಮಾಧ್ಯಮ ಕೆಸಿಎನ್ಎ ಸೋಮವಾರ ತಿಳಿಸಿದೆ. ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ವಾರ್ಷಿಕ ಮಿಲಿಟರಿ ಅಭ್ಯಾಸಕ್ಕೆ ಸಜ್ಜಾಗುತ್ತಿರುವಾಗ ಕಿಮ್ ಅವರ ಎಚ್ಚರಿಕೆ ಬಂದಿದೆ. ಇತ್ತೀಚೆಗೆ ಕಿಮ್ ಜಂಗ್‍ ಉನ್‍ ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಭೇಟಿ ನೀಡಿದಾಗ, ಶಸ್ತ್ರಾಸ್ತ್ರಗಳನ್ನು ಸಾಮೂಹಿಕವಾಗಿ ಉತ್ಪಾದಿಸಲು ಆದೇಶಿಸಿದ್ದಾರೆ.

“ಯುದ್ಧಕ್ಕೆ ಸಿದ್ಧರಾಗಿರಿ!”

ವಿಸ್ತೃತ ಮತ್ತು ಬಲಪಡಿಸಿದ ಮುಂಚೂಣಿ ಮಿಲಿಟರಿ ಘಟಕಗಳ ಅಗತ್ಯಗಳನ್ನು ಪೂರೈಸಲು ಕ್ಷಿಪಣಿ ಉತ್ಪಾದನಾ ಸಾಮರ್ಥ್ಯವನ್ನು ನಾಟಕೀಯವಾಗಿ ಹೆಚ್ಚಿಸುವಂತೆ ಕಿಮ್ ಆದೇಶಿಸಿದ್ದಾರೆ. ಅದಷ್ಟೇ ಅಲ್ಲದೇ, ಹೆಚ್ಚಿನ ಕ್ಷಿಪಣಿ ಉತ್ಪಾದನೆಗೆ ಆದೇಶಿಸಿರುವ ಕಿಮ್‍, ತನ್ನ ದೇಶದಲ್ಲಿರುವ ರಕ್ಷಣಾ ಘಟನಕಗಳಿಗೆ ಯುದ್ಧಕ್ಕೆ ಸಿದ್ಧರಾಗಿರುವ ಕರೆ ನೀಡಿದ್ದಾರೆ. ಅದರೊಂದಿಗೆ ಮಿಸೈಲ್‍ಗಳನ್ನು ಸಾಗಿಸಲು ಹಾಗೂ ಲಾಂಚ್‍ ಮಾಡಲು ಬಳಸುವ ಟ್ರಕ್‍ಗಳ ಉತ್ಪಾದನೆಯನ್ನೂ ಹೆಚ್ಚಿಸುವಂತೆ ಕರೆ ನೀಡಿದ್ದಾರೆ.

ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ ಕಿಮ್‍ ಜಂಗ್‍ ಉನ್‍, "ಯುದ್ಧದ ಸಿದ್ಧತೆಗಳ ಗುಣಾತ್ಮಕ ಮಟ್ಟಗಳು ಯುದ್ಧಸಾಮಗ್ರಿ ತಯಾರಯ ಮಾಡುವ ಉದ್ಯಮದ ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ. ನಮ್ಮ ಮಿಲಿಟರಿಯ ಯುದ್ಧದ ಸಿದ್ಧತೆಗಳನ್ನು ವೇಗಗೊಳಿಸುವಲ್ಲಿ ಕಾರ್ಖಾನೆಯು ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ" ಎಂದೂ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಅಮೆರಿಕ- ದಕ್ಷಿಣ ಕೊರಿಯಾ ಡ್ರಿಲ್‍ನಿಂದ ಭಯಭೀತರಾದ್ರಾ ಕಿಮ್?

ಇದೀಗ ಮುಂಬರುವ ದಿನಗಳಲ್ಲಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಜಂಟಿ ಯುದ್ಧಾಭ್ಯಾಸಗಳನ್ನು ನಡೆಸಲಿದ್ದು ಇದರಿಂದ ಕಿಮ್ ಭಯಭೀತರಾಗಿದ್ದಾರೆ ಎನ್ನಲಾಗಿದೆ.

2019ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಉನ್ನತ ಮಟ್ಟದ ರಾಜತಾಂತ್ರಿಕ ಮಾತುಕತೆ ಮುರಿದುಬಿದ್ದಾಗಿನಿಂದ ಕಿಮ್ ತಮ್ಮ ಪರಮಾಣು ಮತ್ತು ಕ್ಷಿಪಣಿ ಶಸ್ತ್ರಾಸ್ತ್ರಗಳನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದಾರೆ. 2022ರ ಆರಂಭದಿಂದ, ಉ.ಕೊರಿಯಾ ಮಿಲಿಟರಿ 100 ಕ್ಕೂ ಹೆಚ್ಚು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ, ಅವುಗಳಲ್ಲಿ ಹೆಚ್ಚಿನವು ಜಂಟಿ ಮಿಲಿಟರಿ ತರಬೇತಿ ವ್ಯಾಯಾಮಗಳ ವಿಸ್ತರಣೆಯ ಬಗ್ಗೆ ಅಮೆರಿಕ ಮತ್ತು ದ.ಕೊರಿಯಾಕ್ಕೆ ಎಚ್ಚರಿಕೆ ನೀಡುವ ಹೆಸರಿನಲ್ಲಿದ್ದವು.

ಅಮೆರಿಕ ಮತ್ತು ದ.ಕೊರಿಯಾ ಈ ತಿಂಗಳ ಕೊನೆಯಲ್ಲಿ ತಮ್ಮ ಬೇಸಿಗೆಯ ಯುದ್ಧಾಭ್ಯಾಸವನ್ನು ಪ್ರಾರಂಭಿಸಲು ಸಜ್ಜಾಗಿರುವುದರಿಂದ ಉತ್ತರ ಕೊರಿಯಾ ಶೀಘ್ರದಲ್ಲೇ ಹೆಚ್ಚಿನ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಬಹುದು. ಉತ್ತರ ಕೊರಿಯಾವು ಅಮೆರಿಕ-ದಕ್ಷಿಣ ಕೊರಿಯಾದ ತರಬೇತಿಯನ್ನು ಆಕ್ರಮಣದ ಅಭ್ಯಾಸ ಎಂದು ಕರೆಯುತ್ತದೆ. ಆದರೆ ಅಮೆರಿಕ ಹಾಗೂ ದ.ಕೊರಿಯಾ ಉತ್ತರ ಕೊರಿಯಾದ ಮೇಲೆ ದಾಳಿ ಮಾಡುವ ಯಾವುದೇ ಉದ್ದೇಶವಿಲ್ಲ ಎಂದು ಹೇಳುತ್ತವೆ.

ಉತ್ತರ ಕೊರಿಯಾವು ತನ್ನ ಶತ್ರುಗಳನ್ನು ನಿರ್ನಾಮ ಮಾಡುವ ಶಕ್ತಿ ಹೊಂದಿರುವ "ಅಗಾಧ ಮಿಲಿಟರಿ ಶಕ್ತಿಯನ್ನು ಹೊಂದಿರಬೇಕು ಮತ್ತು ಯಾವುದೇ ಯುದ್ಧವನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧವಾಗಿರಬೇಕು" ಎಂದು ಕಿಮ್ ಹೇಳಿದ್ದಾರೆ ಎಂದು ಕೆಸಿಎನ್ಎ ಉಲ್ಲೇಖಿಸಿದೆ.

ಅಮೆರಿಕದೊಂದಿಗೆ ರಾಜತಾಂತ್ರಿಕ ಮಾತುಕರೆಯು ಪುನರಾರಂಭಗೊಂಡಾಗಲೆಲ್ಲಾ ನಿರ್ಬಂಧಗಳ ಪರಿಹಾರದಂತಹ ಅಮೆರಿಕ ರಿಯಾಯಿತಿಗಳನ್ನು ಕಸಿದುಕೊಳ್ಳಲು ಕಿಮ್ ಅಂತಿಮವಾಗಿ ತಮ್ಮ ಆಧುನೀಕರಿಸಿದ ಶಸ್ತ್ರಾಸ್ತ್ರಗಳನ್ನು ಬಳಸುವ ಗುರಿಯನ್ನು ಹೊಂದಿದ್ದಾರೆ ಎಂದು ಅನೇಕ ತಜ್ಞರು ಹೇಳುತ್ತಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net