ಇಲ್ಲಿ ಮದುವೆಗೆ ಹೆಣ್ಣಿನ ಒಪ್ಪಿಗೆ ಬೇಕಿಲ್ಲ; ಕಿಡ್ನಾಪ್​ ಮಾಡಿ ಮದುವೆಯಾದರೆ ಅದು ಕ್ರೈಂ ಅಲ್ಲ

marriage
Published on

ಸುಂಬಾ: ಪ್ರತಿಯೊಂದು ದೇಶದಲ್ಲೂ ಅದರದ್ದೇ ಆದ ಸಂಪ್ರದಾಯವಿದೆ. ಪ್ರತಿಯೊಂದು ಧರ್ಮ, ಜನಾಂಗದವರೂ ಅವರದ್ದೇ ಆದ ವಿಶಿಷ್ಟ ಸಂಪ್ರದಾಯವನ್ನು ಪಾಲಿಸುತ್ತಾರೆ. ಈ ದ್ವೀಪದಲ್ಲಿಯೂ ಕೂಡ ವಿಚಿತ್ರವಾದ ಸಂಪ್ರದಾಯವೊಂದನ್ನು ಪಾಲಿಸಲಾಗುತ್ತದೆ. ಇವರ ಸಂಪ್ರದಾಯದ ಪ್ರಕಾರ ಮದುವೆಯಾಗಲು ಹೆಣ್ಣಿನ ಒಪ್ಪಿಗೆ ಕೇಳಬೇಕಿಲ್ಲ, ಇಷ್ಟ ಪಟ್ಟವಳನ್ನು ಕಿಡ್ನಾಪ್​ ಮಾಡಿ ಮದುವೆಯಾಗುವುದು ಕ್ರೈಂ ಅಲ್ಲ!

ಇಂತದ್ದೊಂದು ವಿಚಿತ್ರ ಸಂಪ್ರದಾಯವನ್ನು ಪಾಲಿಸುತ್ತಿರುವುದು ಇಂಡೋನೇಷಿಯಾದ ಬಾಲಿಗೆ ಸಮೀಪದಲ್ಲಿರುವ ಸುಂಬಾ ದ್ವೀಪದಲ್ಲಿ. ಇಲ್ಲಿನ ಮದುವೆಗಳು ವಿಚಿತ್ರವಾಗಿರುತ್ತದೆ. ವಧುವನ್ನು ವರನ ಕಡೆಯವರು ಕಿಡ್ನಾಪ್​ ಮಾಡುತ್ತಾರೆ. ಆಕೆಯ ಒಪ್ಪಿಗೆಯನ್ನು ಕೇಳಲಾಗುವುದಿಲ್ಲ. ಹೀಗೆ ಅಪಹರಣ ಮಾಡಿ ಕರೆತಂದ ವಧುವನ್ನು ವರ ಮದುವೆಯಾಗುತ್ತಾನೆ.

ಈ ದ್ವೀಪದಲ್ಲಿ 7.5 ಮಿಲಿಯನ್​ ಜನರು ವಾಸವಿದ್ದಾರೆ. ಹಲವಾರು ಮಹಿಳಾ ರಕ್ಷಣಾ ಸಂಸ್ಥೆಗಳೂ ಇಲ್ಲಿವೆ. ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಬೇಕು ಎಂದು ಹತ್ತಾರು ವರ್ಷಗಳಿಂದ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ. ಹಾಗಿದ್ದರೂ ಈವರೆಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

2020ರಲ್ಲಿ ಈ ರೀತಿ ಅಪಹರಿಸಿ ಮದುವೆಯಾಗಿರುವ ಎರಡು ವಿಡಿಯೋಗಳು ವೈರಲ್​ ಆಗಿದ್ದವು. ಈ ವಿಚಾರ ದೇಶ ವಿದೇಶಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಸಂಪ್ರದಾಯವನ್ನು ಅಂತ್ಯ ಮಾಡುವ ಚಿಂತನೆ ಸರ್ಕಾರ ನಡೆಸುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net