

ಲಂಡನ್: ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ ಅವರ ಆಸ್ತಿ ಇದೀಗ ದೊಡ್ಡ ವಿವಾದಕ್ಕೀಡಾಗಿದೆ. ಬ್ರಿಟನ್ ಹಣಕಾಸು ಸಚಿವರ ಆಸ್ತಿ ವಿವರದಲ್ಲಿ ಅಕ್ಷತಾ ಮೂರ್ತಿ ಆಸ್ತಿ ವಿವರವನ್ನು ಮುಚ್ಚಿಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಬ್ರಿಟನ್ನ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ರಿಷಿ ಸುನಕ್ , ಅಕ್ಷತಾ ಮೂರ್ತಿ ಅವರ ಪತಿ. ಸ್ಟ್ಯಾನ್‌ಫೋರ್ಡ್ ಬಿಸಿನೆಸ್ ಶಾಲೆಯಲ್ಲಿ ಒಟ್ಟಿಗೆ ಓದಿದ್ದ ಇವರು ಪ್ರೀತಿಸಿ, 2009ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಕೃಷ್ಣಾ ಮತ್ತು ಅನುಷ್ಕಾ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಬ್ರಿಟನ್ನ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ರಿಷಿ ಅವರಿಗೆ ಅವರ ಆಸ್ತಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲೇಬೇಕೆಂಬ ನಿಯಮವಿದೆ. ಅವರ ಜತೆಯಲ್ಲಿ ಬದುಕುವ ಅವರ ಪತ್ನಿ, ಮಕ್ಕಳು, ಅಕ್ಕ ತಂಗಿಯ ಆಸ್ತಿ ವಿವರವನ್ನೂ ಸಲ್ಲಿಸಬೇಕಾಗುತ್ತದೆ. ಅದರಂತೆ ಪತ್ನಿ ಅಕ್ಷತಾ ಅವರ ಆಸ್ತಿ ವಿವರವನ್ನು ರಿಷಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಅನೇಕ ವಿವರವನ್ನು ಮುಚ್ಚಿಡಲಾಗಿದೆ. ಬ್ರಿಟನ್ನ ಕ್ಯಾಟಮರನ್ ವೆಂಚರ್ಸ್ ಸಂಸ್ಥೆಗೆ ಅಕ್ಷತಾ ಮಾಲೀಕರಾಗಿರುವುದಾಗಿ ಮಾತ್ರ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಆದರೆ ಅಕ್ಷತಾ ಅವರಿಗೆ ತಂದೆಯ ಇನ್ಫೋಸಿಸ್ ಸಂಸ್ಥೆಯಲ್ಲಿ ಬಹುದೊಡ್ಡ ಪ್ರಮಾಣದ ಷೇರು ಇದೆ. ಈ ಷೇರಿನ ಮೊತ್ತ 4,200 ಕೋಟಿ ರೂಪಾಯಿಷ್ಟಿದೆ. ಬ್ರಿಟನ್ನ ರಾಣಿ ಎಲಿಜಬೆತ್ ಅವರ ಒಟ್ಟು ಆಸ್ಥಿ ಮೌಲ್ಯ 3,400 ಕೋಟಿ ರೂಪಾಯಿಷ್ಟಿದ್ದಾಗ ಅದಕ್ಕಿಂತ ಹೆಚ್ಚು ಮೌಲ್ಯದ ಷೇರನ್ನು ಅಕ್ಷತಾ ಒಂದೇ ಸಂಸ್ಥೆಯಲ್ಲಿ ಹೊಂದಿದ್ದಾರೆ. ಅದಲ್ಲದೆ ಅಮೇಜಾನ್ನಂತಹ 9 ದೊಡ್ಡ ಸಂಸ್ಥೆಗಳಲ್ಲಿ ಇವರ ಷೇರು ಇದೆ. ಈ ಯಾವುದೇ ಷೇರಿನ ಬಗ್ಗೆ ಆರ್ಥಿಕ ವರದಿಯಲ್ಲಿ ರಿಷಿ ಉಲ್ಲೇಖಿಸಿಲ್ಲ ಎನ್ನಲಾಗಿದೆ.
ಈ ವಿಚಾರವಾಗಿ ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಅಕ್ಷತಾ ಅವರ ಆಸ್ತಿ ವಿಚಾರವಾಗಿ ಹೆಚ್ಚಿನ ತನಿಖೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. (ಏಜೆನ್ಸೀಸ್)