ಊಟ ಆರ್ಡರ್​ ಮಾಡಿದ್ದು ಒಬ್ಬಳು ಆದರೆ ತಂದಿದ್ದು 42 ಡೆಲಿವರಿ ಬಾಯ್ಸ್​! ಫುಡ್​ ಡೆಲಿವರಿ ಆ್ಯಪ್​ನಲ್ಲಿ ಹೀಗೂ ಆಗತ್ತಾ?

food
Published on

ಮನಿಲಾ: ಮನೆಯಲ್ಲಿ ಅಡುಗೆ ಮಾಡೋದಕ್ಕೆ ಕಷ್ಟ ಎಂದೆನಿಸಿದಾಗ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡೋದು ಈಗೆಲ್ಲ ಮಾಮೂಲಿ. ಅದೇ ರೀತಿ ಇಲ್ಲೊಬ್ಬ ಬಾಲಕಿ ಕೂಡ ಫುಡ್​ ಆರ್ಡರ್ ಮಾಡಿದ್ದಳು. ಈಕೆ ಮಾಡಿದ ಒಂದೇ ಆರ್ಡರ್​ನ್ನು ಹಿಡಿದು ಬಂದಿದ್ದು 42 ಡೆಲಿವರಿ ಬಾಯ್ಸ್​. ಅದು ಹೇಗೆ ಅಂತೀರಾ? ಮುಂದೆ ಓದಿ.

ಫಿಲಿಪೈನ್ಸ್​ನ ಸೆಬು ನಗರದಲ್ಲಿ ಇನ್ನೂ ಶಾಲಾ ಶಿಕ್ಷಣ ಪಡೆಯುತ್ತಿರುವ ಬಾಲಕಿಯೊಬ್ಬಳು ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ್ದಾಳೆ. ಅಜ್ಜಿ ಜತೆಗಿದ್ದ ಆಕೆ ಇಬ್ಬರಿಗೂ ಆಗುವುಷ್ಟು ಊಟವನ್ನು ಆರ್ಡರ್​ ಮಾಡಿ, ಡೆಲಿವರಿ ಬಾಯ್​ ಬರುವುದನ್ನು ಕಾಯುತ್ತಾ ಕುಳಿತಿದ್ದಾಳೆ. ಆದರೆ ಕೆಲ ನಿಮಿಷಗಳಲ್ಲಿ ಆಕೆಯ ಮನೆಯ ರಸ್ತೆಗೆ ಸಾಲಾಗಿ ಒಬ್ಬರ ನಂತರ ಒಬ್ಬರು ಡೆಲಿವರಿ ಬಾಯ್​ಗಳು ಬರಲಾರಂಭಿಸಿದ್ದಾರೆ. ಸಮವಸ್ತ್ರ ತೊಟ್ಟಿದ್ದ ಡೆಲಿವರಿ ಬಾಯ್​ಗಳು ಈ ರೀತಿ ಬರುತ್ತಿದ್ದನ್ನು ಕಂಡು ಇಡೀ ಏರಿಯಾ ಬೆರಗಾಗಿದೆ. ಕೆಲವೊಂದಿಷ್ಟು ಜನರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿದ್ದಾರೆ. 10ರಿಂದ 15 ನಿಮಿಷದಲ್ಲಿ ಆ ಬೀದಿಗೆ ಬರೋಬ್ಬರಿ 42 ಡೆಲಿವರಿ ಬಾಯ್​ಗಳು ಬಂದಿದ್ದಾರೆ.

ಪ್ರತಿಯೊಬ್ಬರು ಬಾಲಕಿಗೆ ಕರೆ ಮಾಡಿ ಊಟ ತೆಗೆದುಕೊಳ್ಳಲು ಹೇಳಿದ್ದಾರೆ. ಈ ವಿಚಾರವಾಗಿ ಆಶ್ಚರ್ಯ ಪಟ್ಟ ಬಾಲಕಿ ನಂತರ ವಿಚಾರಿಸಿದಾಗ ಈ ರೀತಿ ಆಗಿದ್ದೇಗೆ ಎನ್ನುವುದಕ್ಕೆ ಕಾರಣ ದೊರಕಿದೆ.

ಬಾಲಕಿ ಫುಡ್​ ಆರ್ಡರ್​ ಮಾಡಿದ್ದ ಆ್ಯಪ್​ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಅದೇ ಕಾರಣದಿಂದಾಗಿ 42 ಡೆಲಿವರಿ ಬಾಯ್​​ಗಳಿಗೆ ಈ ಆರ್ಡರ್​ ಸಿಕ್ಕಿದೆ ಎನ್ನುವುದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net