

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ (ಜುಲೈ 28)ಯಾಗಿ ಇನ್ನೇನು ಒಂದು ವರ್ಷ ಸಮೀಪಿಸುತ್ತಿದೆ. ಆದರೆ, ಈವರೆಗೂ ಹೊಸ ಸಿನಿಮಾದ ಹೆಸರು ಮಾತ್ರ ಘೋಷಣೆಯಾಗಿಲ್ಲ. ಸದ್ಯಕ್ಕೆ ಕಿಚ್ಚನ 46ನೇ ಸಿನಿಮಾವನ್ನು ಕಾಲಿವುಡ್ನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್. ತನು ನಿರ್ಮಿಸಲಿದ್ದಾರೆ ಎಂಬ ಸುದ್ದಿ ಮಾತ್ರ ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾದ ಟೀಸರ್ ಇದೀಗ ಬಿಡಗಡೆಯಾಗಿದ್ದು, ಕಿಚ್ಚನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಟೀಸರ್ ನೋಡಿದವರಿಗೆ ಇದೊಂದು ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾ ಎಂಬುದು ಖಚಿತವಾಗುತ್ತದೆ. ಕಿಚ್ಚ ಸುದೀಪ್ ಮೈಗೆ ಅಂಟಿದ ರಕ್ತದ ಕಲೆ, ಬಸ್ ಒಳಗೆ ಸುತ್ತಲೂ ಬಿದ್ದಿರುವ ಮೃತದೇಹದ ಭಾಗಗಳು ಮತ್ತು ಬಂದೂಕು ಹಿಡಿದು ವಿಲನ್ ತಲೆ ಗುರಿಯಿಟ್ಟು ಗುಂಡಿಕ್ಕುವ ದೃಶ್ಯ ಮತ್ತು ಎದುರಾಗಳಿಗೆ ದೊಡ್ಡ ಕಾಟಕ್ಕೆ ಆಹ್ವಾನಿಸುವ ದೃಶ್ಯದ ಜತೆಗೆ ನಾನು ಮನಷ್ಯನಲ್ಲ ರಾಕ್ಷಸ ಎಂಬ ಖಡಕ್ ಡೈಲಾಗ್ನೊಂದಿಗೆ ಟೀಸರ್ ಮುಕ್ತಾಯವಾಗಿದೆ. ಎಲ್ಲಿಯೂ ಕತೆಯ ಸುಳಿವನ್ನು ಟೀಸರ್ನಲ್ಲಿ ಬಿಟ್ಟುಕೊಟ್ಟಿಲ್ಲ. ಆದರೆ, ಇದೊಂದು ಆ್ಯಕ್ಸನ್ ಸಿನಿಮಾ ಎಂಬುದು ಮಾತ್ರ ಖಚಿತವಾಗಿದೆ.
ಕಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ತನು ಅವರು ಕಿಚ್ಚನ 46ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಮನಿಸಬೇಕಾದ ಸಂಗತಿ ಏನೆಂದರೆ, ಈ ಬಾರಿಯೂ ಕಿಚ್ಚ ಸುದೀಪ್ ಹೊಸ ಪ್ರತಿಭೆ ಮಣೆ ಹಾಕಿದ್ದಾರೆ. ಕಿಚ್ಚ 46 ವಿಜಯ್ ಕಾರ್ತಿಕೆಯನ್ ಅವರ ಚೊಚ್ಚಲ ಸಿನಿಮಾ ನಿರ್ದೇಶನವಾಗಿದೆ.
ಕಬಾಲಿ, ತುಪಾಕಿ ಮತ್ತು ಅಸುರನ್ ಮುಂತಾದ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕಲೈಪುಲಿ ಎಸ್. ತನು ಅವರು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾದ ದಿನದಿಂದಲೇ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಕ್ಕಿತ್ತು. ಇದೀಗ ಆ ಸಿನಿಮಾ ಸೆಟ್ಟೇರಿದ್ದು, ಸುದೀರ್ಘ ಒಂದು ವರ್ಷಗಳ ಸಿನಿಮಾ ವಿಶ್ರಾಂತಿಗೆ ನಟ ಸುದೀಪ್ ಅವರು ಪೂರ್ಣ ವಿರಾಮ ಹಾಕಿದ್ದಾರೆ.