

ನವದೆಹಲಿ: ಸತತ ಎರಡು ಬಾರಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಜಯಿಸಿರುವ ವೆಸ್ಟ್ ಇಂಡೀಸ್, ಏಕದಿನ ಕ್ರಿಕೆಟ್‌ನ ಪವರ್ ಹೌಸ್ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು. ಆದರೆ, 2023ರ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಹೀನಾಯವಾಗಿ ಸೋಲುವ ಮೂಲಕ ವಿಶ್ವಕಪ್ನಿಂದಲೇ ವಿಂಡೀಸ್ ಪಡೆ ಹೊರಗುಳಿದಿದೆ. ಶನಿವಾರ (ಜುಲೈ) ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕೆರೆಬಿಯನ್ ಪಡೆ ಕಳಪೆ ನಿರ್ವಹಣೆ ತೋರಿತು. ಇದಕ್ಕೂ ಮುನ್ನ ಜಿಂಬಾಬ್ವೆ ಮತ್ತು ನೆದರ್ಲೆಂಡ್ ವಿರುದ್ಧದ ಪಂದ್ಯಗಳಲ್ಲೂ ವಿಂಡೀಸ್ ಮುಗ್ಗರಿಸಿತು.
ವಿಂಡೀಸ್ ದಂತಕತೆ ಕ್ಲೈವ್ ಲಾಯ್ಡ್ ಅವರ ಸ್ಪೂರ್ತಿದಾಯಕ ನಾಯಕತ್ವದಲ್ಲಿ 1975ರಲ್ಲಿ ಚೊಚ್ಚಲ ಬಾರಿಗೆ ಆರಂಭವಾದ ವಿಶ್ವಕಪ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿಯನ್ನು ವಿಂಡೀಸ್ ಪಡೆ ತನ್ನ ಮುಡಿಗೇರಿಸಿಕೊಂಡಿತು. ಅಲ್ಲದೆ, 1979 ರಲ್ಲಿಯೂ ಮತ್ತೆ ಟ್ರೋಫಿಯನ್ನು ಗೆದ್ದಿತು. ಬ್ಯಾಕ್ ಟು ಬ್ಯಾಕ್ ಎರಡು ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಟ್ರೋಫಿ ಗೆದ್ದು ಕ್ರಿಕೆಟ್ ಜಗತ್ತಿನ ದೈತ್ಯ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್, ಇಂದು ವಿಶ್ವಕಪ್ ಟೂರ್ನಿಯಿಂದಲೇ ಹೊರಗುಳಿದಿದೆ. ಮೇಲಿದ್ದವರು ಒಮ್ಮೆ ಕೆಳಗೆ ಬರಲೇಬೇಕು ಎಂಬ ವಿಧಿ ಲಿಖಿತಕ್ಕೆ ವಿಂಡೀಸ್ ಪಡೆ ಇಂದು ಉದಾಹರಣೆ ಆಗಿದೆ. ಅಂದಹಾಗೆ ಈ ಬಾರಿಯ ವಿಶ್ವಕಪ್ ಟೂರ್ನಿ ಆತಿಥ್ಯವನ್ನು ಭಾರತ ವಹಿಸಿದೆ.
ವಿಂಡೀಸ್ ಪಡೆಯ ವೈಫಲ್ಯ ಇದೇ ಮೊದಲೇನಲ್ಲ. 2017ರಲ್ಲಿ ತಮ್ಮ ಕಳಪೆ ನಿರ್ವಹಣೆಯಿಂದಾಗಿ ಚಾಂಪಿಯನ್ಸ್ ಟ್ರೂಫಿ ಮಿಸ್ ಮಾಡಿಕೊಂಡಿತು. ಅಂತೆಯೇ, 2019ರ ವಿಶ್ವಕಪ್‌ಗಾಗಿಯೂ ವಿಂಡೀಸ್ ಪಡೆ ಅರ್ಹತಾ ಪಂದ್ಯಗಳ ಮೂಲಕವೇ ಹೋಗಬೇಕಾಗಿತ್ತು. ಆದರೆ, ಎರಡು ಪಂದ್ಯಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಯಿತು ಮತ್ತು ಅಂಕಪಟ್ಟಿಯಲ್ಲಿ ಬಾಂಗ್ಲಾದೇಶಕ್ಕಿಂತ ಕೆಳಗುಳಿಯಿತು. ಇದಿಷ್ಟೇ ಅಲ್ಲ, 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಗೂ ಕೆರಬಿಯನ್ನರು ಅರ್ಹತೆ ಪಡೆಯಲಿಲ್ಲ.
ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳ ಅರ್ಹತಾ ಪಂದ್ಯಗಳಲ್ಲಿ ಕಳಪೆ ನಿರ್ವಹಣೆ ತೋರಿ ಮುಖಭಂಗ ಅನುಭಿಸುತ್ತಿರುವ ವಿಂಡೀಸ್ ಪಡೆಯ ಈ ಹೀನಾಯ ಸ್ಥಿತಿಗೆ ಕಾರಣವಾದ ಪ್ರಮುಖ ಮೂರು ಅಂಶಗಳನ್ನು ನಾವೀಗ ನೋಡೋಣ.
1. ವಿಂಡೀಸ್ ಪಡೆಯ ಸುವರ್ಣ ಯುಗ ಅಂತ್ಯ
ವಿಶ್ವ ದೈತ್ಯ ಕ್ರಿಕೆಟ್ ತಂಡದ ಬೆನ್ನೆಲುಬಾಗಿದ್ದ ಪ್ರಮುಖ ಸ್ಟಾರ್ ಆಟಗಾರರ ನಿರ್ಗಮನದಿಂದ ವಿಂಡೀಸ್ ಪಡೆ ಸೊರಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರಮುಖ ಆಟಗಾರರು ತಂಡದಿಂದ ನಿರ್ಗಮಿಸಿದ್ದಾರೆ. ಅವರ ನಿರ್ಗಮನವು ತಂಡದ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಭರವಸೆಯ ಬದಲಿ ಆಟಗಾರರು ಕೂಡ ತಂಡದಲ್ಲಿ ಗೋಚರಿಸುತ್ತಿಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ತಮ್ಮ ಅನುಭವಿ ಆಟಗಾರರ ನಿವೃತ್ತಿಯ ಬಗ್ಗೆ ಹೆಚ್ಚೇನು ಮಾಡಲು ಸಾಧ್ಯವಾಗದಿದ್ದರೂ, ಭರವಸೆಯ ಆಟಗಾರರ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಹೆಚ್ಚು ಹೂಡಿಕೆ ಮಾಡುವ ಮೂಲಕ ಮಹತ್ವದ ಬದಲಾವಣೆಯನ್ನು ಮಾಡಬಹುದಾಗಿದೆ. ಹಿರಿಯರ ನಿರ್ಗಮನದಿಂದ ಯುವ ಆಟಗಾರರ ಕೊರತೆ ಕಾಣುತ್ತಿದೆ. ಕ್ರಿಕೆಟ್ ಉತ್ತೇಜನಕ್ಕೆ ವಿಂಡೀಸ್ ಗಮನ ನೀಡದೇ ಇರುವುದು ಕೂಡ ಇದಕ್ಕೆ ಬಹುಮುಖ್ಯ ಕಾರಣವಾಗಿರಬಹುದು. ತಕ್ಷಣವೇ ಎಚ್ಚೆತ್ತುಕೊಂಡು ಭರವಸೆಯ ಆಟಗಾರರಿಗಾಗಿ ಸರಿಯಾದ ಹೂಡಿಕೆ ಮಾಡಿದ್ದಲ್ಲಿ ಮುಂದಿನ ದಿನಗಳಿ ವಿಂಡೀಸ್ ಒಂದು ಸುಸ್ಥಿರ ತಂಡದೊಂದಿಗೆ ಮತ್ತೆ ಪುಟಿದೇಳಬಹುದು.
2. ಆಟದ ಅರಿವಿನ ಕೊರತೆ
ಕೆರಿಬಿಯನ್ ಆಟಗಾರರು ತಮ್ಮ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಮೈದಾನದಲ್ಲಿ ದೊಡ್ಡ ಪ್ರದರ್ಶನಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ವಿಶ್ವಾದ್ಯಂತ ಟಿ20 ಫ್ರಾಂಚೈಸಿಗಳು ಅವರಿಗೆ ಹೆಚ್ಚು ಗೌರವವನ್ನು ನೀಡುತ್ತವೆ. ಇದು ನಿಜವೂ ಹೌದು. ಒಬ್ಬರೇ ನಿಂತು ಪಂದ್ಯ ಗೆಲ್ಲಿಸುವ ಸಾಮರ್ಥ್ಯವನ್ನು ವಿಂಡೀಸ್ ದಾಂಡಿಗರು ಹೊಂದಿದ್ದಾರೆ. ಕೆರಬಿಯನ್ನರು ಮೈದಾನದಲ್ಲಿ ಅಬ್ಬರಿಸುವುದನ್ನು ಮತ್ತು ಮೊದಲ ಎಸೆಗಳಲ್ಲೇ ಸಿಕ್ಸರ್, ಬೌಂಡರಿ ಬಾರಿಸಲು ಹವಣಿಸುವುದನ್ನು ನೋಡಿರುತ್ತೀರಿ. ಆದಾಗ್ಯೂ ಇಂತಹ ಆಕ್ರಮಣಕಾರಿ ಆಟ ಬೇಗನೆ ವಿಕೆಟ್ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರಾಥಮಿಕವಾಗಿ ಅವರು ತಮ್ಮ ಆಕ್ರಮಣಕಾರಿ ಆಟಕ್ಕೆ ಸಂಬಂಧಿಸಿದ ಅಪಾಯಗಳನ್ನು ನಿರ್ವಹಿಸಲು ಹೆಣಗಾಡುತ್ತಾರೆ. ಹೀಗಾಗಿ ಆಟದ ಬಗ್ಗೆ ಉತ್ತಮ ಅರಿವು ಅಥವಾ ಜಾಗೃತಿ ಅವಶ್ಯಕವಾಗಿದೆ. ಆಟದ ಬಗ್ಗೆ ತಿಳಿಯುವ ಅಸಮರ್ಥತೆ ಮತ್ತು ರಕ್ಷಣಾತ್ಮಕ ತಂತ್ರಗಳ ವಿರುದ್ಧ ಆಕ್ರಮಣಕಾರಿ ಆಟಗಳಿಗೆ ಸರಿಯಾದ ಕ್ಷಣವನ್ನು ಖಚಿತ ಪಡಿಸಿಕೊಳ್ಳದಿರುವುದು ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ನಿರಂತರವಾಗಿ ವಿಂಡೀಸ್ ಪಡೆ ಸೋಲನ್ನು ಅನುಭವಿಸಲು ಕಾರಣವಾಗಿದೆ.
3. ಟಿ20 ಮಾದರಿ ಪಂದ್ಯಗಳ ಉದಯ
ವಿಂಡೀಸ್ ಪಡೆಯ ಇಂದಿನ ಹೀನಾಯ ಸ್ಥಿತಿಗೆ ಈ ಟಿ20 ಮಾದರಿ ಪಂದ್ಯಗಳೇ ಪ್ರಮುಖ ಕಾರಣ ಎಂದು ವ್ಯಾಖ್ಯಾನಿಸಲಾಗಿದೆ. T20 ಲೀಗ್‌ಗಳ ಏರಿಕೆಯು ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಇತರ ಅಂತಾರಾಷ್ಟ್ರೀಯ ಆಟಗಾರರಂತೆ, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಲು ವಿಂಡೀಸ್ ಆಟಗಾರರಿಗೂ ಅನುಮತಿ ನೀಡಲಾಗಿದೆ. ಆದಾಗ್ಯೂ, ಫ್ರಾಂಚೈಸ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಿ, ರಾಷ್ಟ್ರದ ಕರ್ತವ್ಯ ಅಥವಾ ದೇಶಿಯ ಕ್ರಿಕೆಟ್‌ಗೆ ವಿಂಡೀಸ್ ಆಟಗಾರರು ಪ್ರಾಮುಖ್ಯತೆ ನೀಡದಿರುವುದು ಕೂಡ ಅವರ ಇಂದಿನ ಸ್ಥಿತಿಗೆ ಕಾರಣವಾಗಿದೆ. ಫ್ರಾಂಚೈಸಿಗಳಲ್ಲಿ ಹೆಚ್ಚು ಹಣ ಸಿಗುತ್ತದೆ ಎಂದು ಅವುಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಆದರೆ, ವಿಂಡೀಸ್ ಆಟಗಾರರು ಹೆಚ್ಚಾಗಿ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುವುದರಿಂದ ರಾಷ್ಟ್ರೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಆಟಗಾರರ ಕೊರತೆಯು ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಹೆಚ್ಚುತ್ತಿದೆ. ತಂಡಕ್ಕೆ ಹೊಂದಿಕೊಳ್ಳುವ ಆಟಗಾರರನ್ನು ಎಲ್ಲಿಂದಲಾದರೂ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಆಯ್ಕೆಯಾಗುವ ಆಟಗಾರರು ಅಂತಿಮವಾಗಿ ದೊಡ್ಡ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.
ವಿಂಡೀಸ್ ಕ್ರಿಕೆಟ್ ವ್ಯವಸ್ಥೆಯಲ್ಲಿನ ಇಂದಿನ ಅವ್ಯವಸ್ಥೆಗೆ ಅಲ್ಲಿನ ಕೆಟ್ ಮಂಡಳಿ ಮತ್ತು ಆಟಗಾರರು ಇಬ್ಬರೂ ಜವಾಬ್ದಾರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಉತ್ತಮ ಆಟಗಾರರನ್ನು ತೊಡಗಿಸಿಕೊಳ್ಳುವಲ್ಲಿ ಮತ್ತು ರೂಪಿಸುವಲ್ಲಿ ವಿಂಡೀಸ್ ಮಂಡಳಿ ನಿಷ್ಪರಿಣಾಮಕಾರಿಯಾಗಿದೆ. ಇತ್ತ ಕೆರಿಬಿಯನ್ ಆಟಗಾರರು ಇತ್ತೀಚಿನ ದಿನಗಳಲ್ಲಿ ತಮ್ಮ ರಾಷ್ಟ್ರೀಯ ಕರ್ತವ್ಯಗಳ ಬಗ್ಗೆ ಬಹಳ ನಿರ್ಲಕ್ಷ್ಯದ ಮನೋಭಾವವನ್ನು ಪ್ರದರ್ಶಿಸಿಸುತ್ತಿದ್ದಾರೆ. ಇದು ಸರಿಯಾಗುವವರೆಗೂ ವಿಂಡೀಸ್ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. (ಏಜೆನ್ಸೀಸ್)