

ಬೆಂಗಳೂರು: ಕರಾವಳಿಯವರಿಗೆ ಮಹತ್ವದ ದಿನವಾದ ಆಟಿ ಅಮಾವಾಸ್ಯೆ (ಜು. 17) ಪ್ರಯುಕ್ತ ಬೆಂಗಳೂರಿನ ತುಳುಕೂಟವು ಔಷಧೀಯ ಗುಣಗಳ ಕೆತ್ತೆ ಕಷಾಯವನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಆಟಿ ಅಮಾವಾಸ್ಯೆ ದಿನವಾದ ಸೋಮವಾರ ಬೆಂಗಳೂರಿನ ಶೇಷಾದ್ರಿ ಪುರದ ಮಂತ್ರಿ ಮೆಟ್ರೋ ಸ್ಟೇಷನ್ ಎದುರು ಇರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆ 6.30ರಿಂದ 9.30ರ ತನಕ ಕೆತ್ತೆ ಕಷಾಯ (ಹಾಲೆ ಮರದ ತೊಗಟೆ ಕಷಾಯ) ತುಳುಕೂಟ ಉಚಿತವಾಗಿ ವಿತರಣೆ ಮಾಡಲಿದೆ.
ರೋಗನಿರೋಧಕ ಗುಣ ಇರುವ ಪಾಲೆ (ಹಾಲೆ) ಮರದ ತೊಗಟೆಯ ಈ ರಸವನ್ನು ಒಂದು ನಿರ್ದಿಷ್ಟ ದಿನದಂದು ಮದ್ದಿನ ರೀತಿಯಲ್ಲಿ ಕುಡಿಯುವ ಪದ್ಧತಿ ಕರಾವಳಿಯಲ್ಲಿದೆ. ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಹಾಲೆ ಮರದ (ಕೆತ್ತೆ) ಕಷಾಯ ಕುಡಿದರೆ ಆ ವರ್ಷದುದ್ದಕ್ಕೂ ಯಾವುದೇ ರೋಗ ಬರುವುದಿಲ್ಲ ಎಂದು ತುಳುಕೂಟದ ಅಧ್ಯಕ್ಷ ಸುಂದರ್ರಾಜ್ ರೈ ತಿಳಿಸಿದ್ದಾರೆ.
ಅಮಾವಾಸ್ಯೆಯ ಹಿಂದಿನ ದಿನ ಪಾಲೆ (ಹಾಲೆ) ಮರದ ತೊಗಟೆಯನ್ನು ಮಜ್ಜಿಗೆಯಲ್ಲಿ ನೆನೆಸಿ ಮರುದಿನ ಬೆಳಗ್ಗೆ ಅರೆದು ಅದರ ರಸವನ್ನು ಮಕ್ಕಳಿಗೆ ಕುಡಿಸಿದರೆ ವರ್ಷಪೂರ್ತಿ ಮದ್ದು ಕೊಡುವ ಅಗತ್ಯವಿಲ್ಲ ಹಾಗೂ ಹುಳಬಾಧೆಗೂ ಇದು ದಿವ್ಯೌಷಧ. ಮಧುಮೇಹ, ರಕ್ತದೊತ್ತಡ ಮತ್ತು ಹೊಟ್ಟೆಯ ಸಂಬಂಧದ ಕಾಯಿಲೆಗಳಿಗೂ ಇದು ಮದ್ದು ಎಂದು ಅವರು ಹೇಳಿದ್ದಾರೆ.