VIDEO| ಕುಸಾಟ್​ ಟೆಕ್​ಫೆಸ್ಟ್​ನಲ್ಲಿ ಕಾಲ್ತುಳಿತ; 4 ವಿದ್ಯಾರ್ಥಿಗಳು ಮೃತ್ಯು, ಹಲವರು ಗಂಭೀರ

Kerala Stampede
Published on

ತಿರುವನಂತಪುರಂ: ಕೇರಳದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ (ಕುಸಾಟ್) ಆಯೋಜನೆಗೊಂಡಿದ್ದ ಟೆಕ್ ಫೆಸ್ಟ್‌ನಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಕಾಲ್ತುಳಿತದಿಂದ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಖ್ಯಾತ ಗಾಯಕಿ ನಿಕಿತಾ ಗಾಂಧಿ ಅವರ ಕಾನ್ಸರ್ಟ್​ ವೇಳೆ ಕಾಲ್ತುಳಿತ ಸಂಭವಿಸಿದ್ದು, ಮಳೆ ಸುರಿದ ಪರಿಣಾಮ ಹಲವರು ಆಡಿಟೋರಿಯಂ ಬಳಿ ಓಡಿ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆಯಲ್ಲಿ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಮೂವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 15 ಮಂದಿಗೆ ಪ್ರಜ್ಞೆ ಕಳೆದುಕೊಂಡಿದ್ದಾರೆ. 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಾಲ್ವರು ವಿದ್ಯಾರ್ಥಿಗಳ ಮೃತದೇಹಗಳನ್ನು ಕಳಮಶ್ಳೇರಿ ಮೆಡಿಕಲ್ ಕಾಲೇಜಿನಲ್ಲಿ ಇರಿಸಲಾಗಿದೆ.

ಶನಿವಾರ ಟೆಕ್​​ಫೆಸ್ಟ್​ನ ಸಮಾರೋಪ ದಿನವಾಗಿದ್ದು, ಮ್ಯೂಸಿಕ್​ ಕಾನ್ಸರ್ಟ್​ ಆಯೋಜಿಸಲಾಗಿತ್ತು. ಮಳೆ ಆರಂಭವಾಗುತ್ತಿದ್ದಂತೆ ಹೊರಗಿನವರೂ ಸೇರಿದಂತೆ ಹಲವರು ಸಭಾಂಗಣಕ್ಕೆ ನುಗ್ಗಿದರು. ಈ ನಡುವೆ ಅವಸರದಲ್ಲಿ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಇತರರು ತುಳಿದು ಓಡಿದ್ದಾರೆ. ಕ್ಯಾಂಪಸ್‌ನ ಬಯಲು ಸಭಾಂಗಣದಲ್ಲಿ ಈ ದುರಂತ ಸಂಭವಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮೃತರ ಗುರುತು ಇನ್ನಷ್ಟೇ ತಿಳಿದುಬರಬೇಕಿದೆ.  ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಟರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ. ಕಳಮಶ್ಶೇರಿ ವೈದ್ಯಕೀಯ ಕಾಲೇಜಿಗೆ 46 ಜನರನ್ನು ದಾಖಲಿಸಲಾಗಿದೆ, ಅವರಲ್ಲಿ 15 ಮಂದಿ ವಾರ್ಡ್‌ನಲ್ಲಿ ನಿಗಾದಲ್ಲಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net