

ಜಮ್ಮು: ಪ್ರವಾಸಿಗರ ಸ್ವರ್ಗ ಎಂದು ಹೇಳಲಾಗುವ ಸ್ವಿಜರ್ಲೆಂಡನ್ನೇ ಮರೆಸುವ ರೀತಿಯಲ್ಲಿ ಕಾಶ್ಮೀರ ಕಣಿವೆಯನ್ನು ಪ್ರವಾಸಿ ತಾಣವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಸಂಕಲ್ಪಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಘೋಷಿಸಿದ್ದಾರೆ.
ರೂ. 32,000 ಕೋಟಿಗೂ ಹೆಚ್ಚು ಮೊತ್ತದ ನಾನಾ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮೌಲಾನಾ ಆಜಾದ್ ಸ್ಟೇಡಿಯಂನಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯು ರಾಜ್ಯದ ಬೆಳವಣಿಗೆಗೆ ದೊಡ್ಡ ಅಡ್ಡಿಯಾಗಿತ್ತು. ಅದನ್ನು ತೆಗೆದು ಹಾಕಿದ್ದು ಸಮಗ್ರ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದರು.
ಸ್ವಿಜರ್ಲೆಂಡ್ಗೆ ಪ್ರತಿಸ್ಪರ್ಧಿಯಾಗುವ ರೀತಿಯಲ್ಲಿ ಕಾಶ್ಮೀರ ವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಗುರಿಯಾಗಿದೆ. ಜನರು ಸ್ವಿಜರ್ಲೆಂಡ್ಗೆ ಹೋಗು ವುದನ್ನು ಮರೆಯುವಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕಳೆದ ವರ್ಷ ಇಲ್ಲಿ ನಡೆದ ಜಿ-20 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಬಂಡವಾಳ ಹೂಡಿಕೆ ಹರಿದು ಬರುತ್ತಿದೆ. ಈಗ ಕಾಶ್ಮೀರದ ನಿಸರ್ಗ ಸೌಂದರ್ಯ ಜಾಗತಿಕ ಗಮನ ಸೆಳೆದಿದೆ ಎಂದರು. ಇಲ್ಲಿನ ಜನರೊಂದಿಗೆ ನೇರ ಸಂವಹನ ನಡೆಸುತ್ತಿರುವುದರಿಂದ ಜಮ್ಮು-ಕಾಶ್ಮೀರ ವಂಶಾಡಳಿತ ರಾಜಕಾರಣದಿಂದ ಮುಕ್ತಿ ಹೊಂದುತ್ತಿದೆ. ಹಿಂದೆ ಇದು ಹಿಂಸಾಚಾರ, ಪ್ರತ್ಯೇಕತಾವಾದದಿಂದ ನಲುಗುತ್ತಿತ್ತು. ಪ್ರಕ್ಷುಬ್ಧತೆ ಅನುಭವಿಸುತ್ತಿತ್ತು. ಈಗ ಸೌಹಾರ್ದತೆ ಹಾಗೂ ಸಮೃದ್ಧಿಯತ್ತ ಹೊರಳುತ್ತಿದೆ. ಸಮತೋಲಿತ ಅಭಿವೃದ್ಧಿ ಚಟುವಟಿಕೆಗಳು ಇದಕ್ಕೆ ಕಾರಣ ಎಂದರು.
ಮೋದಿ ಗ್ಯಾರಂಟಿ: ಜಮ್ಮು-ಕಾಶ್ಮೀರದ ಜನರ ಮನೆ ಬಾಗಿಲಿಗೆ ಇದೇ ಮೊದಲ ಬಾರಿಗೆ ಸರ್ಕಾರ ತಲುಪಿದೆ. ಇದು ಮೋದಿ ಗ್ಯಾರಂಟಿಯಾಗಿದ್ದು ಅದು ಮುಂದುವರಿಯಲಿದೆ ಎಂದರು. ಪ್ರಧಾನಿ ಇದೇ ಸಂದರ್ಭದಲ್ಲಿ ದೇಶದ ಇತರ ಭಾಗಗಳ 13,500 ಕೋಟಿ ರೂ.ಗಳ ಯೋಜನೆಗಳಿಗೂ ಚಾಲನೆ ನೀಡಿದರು.
ಗಮನ ಸೆಳೆದ ಡೋಗ್ರಿ ಭಾಷೆ: ಪ್ರಧಾನಿ ಮೋದಿ ಡೋಗ್ರಿ ಭಾಷೆಯಲ್ಲಿ ಭಾಷಣ ಆರಂಭಿಸಿದ್ದು ವಿಶೇಷವಾಗಿತ್ತು. ಮಳೆ ಸುರಿಯುತ್ತಿದ್ದರೂ ಸಾವಿರಾರು ಸ್ಥಳೀಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು. 370ನೇ ವಿಧಿಯನ್ನು 2019ರ ಆಗಸ್ಟ್ ನಲ್ಲಿ ರದ್ದು ಪಡಿಸಿದ ನಂತರ ಜಮ್ಮು ವಲಯಕ್ಕೆ ಮೋದಿ ನೀಡಿದ ಎರಡನೇ ಭೇಟಿ ಇದಾಗಿದೆ. 2022ರ ಏಪ್ರಿಲ್ನಲ್ಲಿ ಅವರು ಸಾಂಬಾ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು.
ಕನ್ಯಾಕುಮಾರಿ ಸಂಪರ್ಕವೂ ದೂರವಿಲ್ಲ: ಉಧಂಪುರ- ಶ್ರೀನಗರ-ಬಾರಾಮುಲ್ಲಾ ರೈಲ್ ಲಿಂಕ್ (ಯುಎಸ್ಬಿಆರ್ಎಲ್) ಯೋಜನೆಯನ್ನು ಲೋಕಾರ್ಪಣೆ ಮಾಡಿದ ಮೋದಿ, ಕಾಶ್ಮೀರವು ರೈಲು ಮಾರ್ಗದ ಮೂಲಕ ಕನ್ಯಾಕುಮಾರಿಯನ್ನು ಸಂರ್ಪಸುವ ದಿನವೂ ದೂರವಿಲ್ಲ. ಪ್ರವಾಸೋದ್ಯಮದಲ್ಲಿ ಉತ್ಸಾಹ ಹೆಚ್ಚಿದೆ. ಮಾತಾ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಮೋದಿ ಸಂತೋಷ ವ್ಯಕ್ತಪಡಿಸಿದರು.
ಒಂದು ಕೋಟಿ ‘ಲಕ್ಪತಿ ದೀದಿ’: ಭಾರತದ ಒಂದು ಕೋಟಿ ಮಹಿಳೆಯರು ‘ಲಕ್ಪತಿ ದೀದಿ’ (ಲಕ್ಷಾಧಿಪತಿ ಸೋದರಿಯರು) ಆಗುವುದಕ್ಕೆ ದೇಶದ ಮಹಿಳಾ ಸಮೂಹ ಬೆಂಬಲ ನೀಡಬೇಕೆಂದು ಪ್ರಧಾನಿ ಮೋದಿ ಮನವಿ ಮಾಡಿದರು. ವಿವಿಧ ಕೇಂದ್ರೀಯ ಯೋಜನೆಗಳ ಪ್ರಯೋಜನ ಪಡೆಯುವ ಮೂಲಕ ಜಮ್ಮು-ಕಾಶ್ಮೀರ ಮಹಿಳೆಯರು ದೇಶಕ್ಕೆ ಮಾದರಿ ಆಗಿದ್ದಾರೆ ಎಂದರು. ಯೋಜನೆಗಳು ಜನರ ಜೀವನವನ್ನು ಹೇಗೆ ಬದಲಾಯಿಸಿವೆ ಎನ್ನುವುದನ್ನು ತಿಳಿಯಲು ಫಲಾನುಭವಿ ಗಳೊಂದಿಗೆ ಪ್ರಧಾನಿ ಸಂವಹನ ನಡೆಸಿದರು. ಮೂರು ಹಸುಗಳನ್ನು ಖರೀದಿಸಿ ಸಾಲ ಮರುಪಾವತಿ ಮಾಡಿದ ಕಥುವಾ ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪೊಂದರ ಮುಖ್ಯಸ್ಥೆ ಕೀರ್ತಿ ಯನ್ನು ಮೋದಿ ಪ್ರಶಂಸಿಸಿದರು. ‘ಲಕ್ಪತಿ ದೀದಿ’ ಮಿಷನ್ಗೆ ತಾವು ಬೆಂಬಲ ನೀಡುವುದಾಗಿ ಕೀರ್ತಿ ಹೇಳಿದರು.
ಮಂಗಳೂರು ಎನ್ಐಟಿಕೆ ವಿದ್ಯಾರ್ಥಿನಿಲಯ ಮೋದಿ ಲೋಕಾರ್ಪಣೆ: ಮಂಗಳೂರಿನ ಸುರತ್ಕಲ್ನಲ್ಲಿರುವ ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ(ಎನ್ಐಟಿಕೆ)ದಲ್ಲಿ ಒಟ್ಟು 132 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾದ 3 (ಬ್ರಹ್ಮಗಿರಿ ಮತ್ತು ಶಿವಾಲಿಕ್ ಮತ್ತು ಗೋದಾವರಿ) ವಿದ್ಯಾರ್ಥಿ ನಿಲಯಗಳನ್ನು ಪ್ರಧಾನಿ ಮೋದಿ ಮಂಗಳವಾರ ಜಮ್ಮುನಿಂದ ವರ್ಚುವಲ್ ಆಗಿ ಲೋಕಾರ್ಪಣೆಗೊಳಿಸಿದರು. ಈ ಹಾಸ್ಟೆಲ್ಗಳಿಂದ 1,527 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಶಿಕ್ಷಣ ಸಂಸ್ಥೆ ಕಟ್ಟಡಗಳ ಉದ್ಘಾಟನೆ: ಐಐಟಿ-ಪಟನಾ ಮತ್ತು ಐಐಎಂ ಬೋಧಗಯಾದಂಥ ಬಿಹಾರದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ನೂತನ ಕಟ್ಟಡಗಳನ್ನು ಮೋದಿ ಜಮ್ಮುನಿಂದ ಆನ್ಲೈನ್ ಮೂಲಕ ಉದ್ಘಾಟಿಸಿದರು. 446 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾದ ಐಐಟಿ-ಪಟನಾದ 24 ನೂತನ ಅಕಾಡೆಮಿಕ್ ಮತ್ತು ವಸತಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದರು. ಕೇಂದ್ರೀಯ ಗ್ರಂಥಾಲಯ, ಸಭಾಂಗಣ, ಕೇಂದ್ರೀಯ ಉಪನ್ಯಾಸ ಹಾಲ್, ವಿದ್ಯಾರ್ಥಿ ಚಟುವಟಿಕೆ ಕೇಂದ್ರ, ಹಾಸ್ಟೆಲ್ಗಳು ಮತ್ತು ವಸತಿ ನಿಲಯಗಳು ಅವುಗಳಲ್ಲಿ ಸೇರಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಡಿಸಿಎಂಗಳಾದ ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಕುಮಾರ್ ಸಿನ್ಹಾ, ಸಚಿವರು ಮೊದಲಾದವರು ಅಸೆಂಬ್ಲಿ ಸಂಕೀರ್ಣದಲ್ಲಿ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐಐಟಿ-ಭಿಲಾಯ್ ಉದ್ಘಾಟನೆ: ಮೋದಿ ಛತ್ತೀಸ್ಗಢದಲ್ಲಿ ಆನ್ಲೈನ್ ಮೂಲಕ ಐಐಟಿ-ಭಿಲಾಯ್ ಮತ್ತು ಎರಡು ಕೇಂದ್ರೀಯ ವಿವಿಗಳನ್ನು ಕೂಡ ಉದ್ಘಾಟಿಸಿದರು.
ಫಾರೂಕ್ ಅಬ್ದುಲ್ಲಾ ಶ್ಲಾಘನೆ: ಜಮ್ಮು-ಕಾಶ್ಮೀರದಲ್ಲಿ ಹಲವು ಹೊಸ ಯೋಜನೆಗಳನ್ನು ಉದ್ಘಾಟಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ರೈಲ್ವೆಯನ್ನು ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಪರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅಭಿನಂದಿಸಿದ್ದಾರೆ.
ಅಮರಿಂದರ್ ಭೇಟಿ: ’ಮೋದಿಯವರನ್ನು ಭೇಟಿಯಾಗಿ ರೈತರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ರ್ಚಚಿಸಿರುವುದಾಗಿ ಪಂಜಾಬ್ನ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.